ಅಯೋಧ್ಯೆ ಹೋರಾಟ ಕುರಿತ ಚಿತ್ರ ‘695’ ಜನವರಿ 19 ರಂದು ತೆರೆಗೆ: ರಾಮಾಯಣ ಖ್ಯಾತಿಯ ಅರುಣ್‌ ಗೋವಿಲ್‌ ನಟನೆ

ಮುಂಬೈ (ಡಿಸೆಂಬರ್ 18, 2023): ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗುತ್ತಿರುವ ಹೊತ್ತಿನಲ್ಲೇ ರಾಮಮಂದಿರ ಕಟ್ಟುವ ಹಿಂದಿನ 500 ವರ್ಷಗಳ ಹೋರಾಟದ ಕುರಿತು ‘695’ ಸಿನಿಮಾ ಸಿದ್ಧವಾಗಿದೆ. ರಾಮಮಂದಿರ ಉದ್ಘಾಟನೆಯ 3 ದಿನ ಮುನ್ನ, ಅಂದರೆ ಜನವರಿ 19ರಂದು ಚಿತ್ರ ಬಿಡುಗಡೆ ಆಗಲಿದೆ.

ರಜನೀಶ್‌ ಬೆರ್ರಿ ನಿರ್ದೇಶನ ಮತ್ತು ಶಾದಾನಿ ಫಿಲಂಸ್‌ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ರಾಮಾಯಣದ ರಾಮ ಪಾತ್ರಧಾರಿ ಅರುಣ್‌ ಗೋವಿಲ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘695 ಚಿತ್ರವು ಭಾರತವು ಸಂಸ್ಕೃತಿ ಮತ್ತು ಹಿರಿಮೆಯ ಪ್ರತಿಬಿಂಬವಾಗಿದೆ. ಇದು ಬಾಬರ್‌ ರಾಮಮಂದಿರವನ್ನು ಕೆಡವಿದಾಗಿನಿಂದ 2024ರಲ್ಲಿ ರಾಮಮಂದಿರ ಉದ್ಘಾಟನೆಯಾಗುವವರೆಗೆ ನಡೆದ ಘಟನೆಗಳನ್ನು ದೃಶ್ಯಕಾವ್ಯವಾಗಿ ನಿಮ್ಮ ಮುಂದೆ ಕಟ್ಟಿಕೊಡಲಿದೆ’ ಎಂದು ತಿಳಿಸಿದ್ದಾರೆ.

ಏನಿದು 695?:
ಬಾಬರಿ ಮಸೀದಿಯನ್ನು ಕೆಡವಿದ ದಿನಾಂಕ ‘6’ ಡಿಸೆಂಬರ್‌, ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಹಸಿರು ನಿಶಾನೆ ದೊರೆತದ್ದು ‘9’ನೇ ನವೆಂಬರ್‌ ಮತ್ತು ರಾಮಮಂದಿರ ಶಿಲಾನ್ಯಾಸ ನಡೆದ ‘5’ನೇ ಆಗಸ್ಟ್‌ ದಿನಾಂಕಗಳನ್ನು ಕ್ರೋಢೀಕರಿಸಿ 695 ಎಂದು ಹೆಸರಿಡಲಾಗಿದೆ ಎಂದು ನಿರ್ಮಾಪಕರಾದ ಶ್ಯಾಂ ಚಾವ್ಲಾ ತಿಳಿಸಿದ್ದಾರೆ.

ಭಕ್ತರ ಭೋಜನಕ್ಕೆ ದವಸ ಧಾನ್ಯ ಮಹಾಪೂರ
ಅಯೋಧ್ಯೆ: ರಾಮಮಂದಿರ ಉದ್ಘಾಟನೆ ಬಳಿಕ ಭಕ್ತಾದಿಗಳಿಗೆ ಉಚಿತ ಅನ್ನಸಂತರ್ಪಣೆ ಮಾಡಲು ರಾಮಜನ್ಮಭೂಮಿ ಟ್ರಸ್ಟ್‌ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದವಸ ಧಾನ್ಯ ಕಳುಹಿಸಿ ಸಹಾಯ ಮಾಡುವಂತೆ ಟ್ರಸ್ಟ್‌ ಮಾಡಿದ್ದ ಕೋರಿಕೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಷ್ಟ್ರದ ಮೂಲೆಮೂಲೆಗಳಿಂದ ಭರಪೂರ ದವಸ ಧಾನ್ಯಗಳು ಅಯೋಧ್ಯೆಗೆ ಬಂದು ಸೇರುತ್ತಿವೆ.
ಈ ಕುರಿತು ಮಾಹಿತಿ ನೀಡಿದ ವಿಶ್ವ ಹಿಂದು ಪರಿಷತ್‌ನ ವಕ್ತಾರ ಶರತ್‌ ಶರ್ಮಾ, ‘ರಾಷ್ಟ್ರದ ವಿವಿಧೆಡೆಯಿಂದ ದವಸ-ಧಾನ್ಯ, ಸಾಂಬಾರ ಪದಾರ್ಥಗಳು, ಚಹಾ, ಬೆಣ್ಣೆ ಮುಂತಾದ ವಸ್ತುಗಳನ್ನು ಭಕ್ತಾದಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಕಳುಹಿಸುತ್ತಿದ್ದು, ರಾಮಸೇವಕಪುರಂನಲ್ಲಿ ಸಂಗ್ರಹಿಸಲಾಗುತ್ತಿದೆ. 500 ಸ್ವಯಂಸೇವಕರ ಸಹಯೋಗದಲ್ಲಿ ಮಂದಿರ ಉದ್ಘಾಟನೆಯ ನಂತರ ಪ್ರತಿದಿನ 25 ಸಾವಿರ ಜನರಿಗೆ 45 ಭೋಜನಶಾಲೆಗಳ ಮೂಲಕ ಉಚಿತ ಅನ್ನಸಂತರ್ಪಣೆ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *