ಬ್ರಿಜ್ ಭೂಷಣ್ ಆಪ್ತ WFI ಅಧ್ಯಕ್ಷ: ಶೂ ಕಳಚಿ ಟೇಬಲ್ ಮೇಲಿಟ್ಟು ಕುಸ್ತಿ ತ್ಯಜಿಸಿದ ಸಾಕ್ಷಿ ಮಲಿಕ್

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ)ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದನ್ನು ವಿರೋಧಿಸಿ ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಗುರುವಾರ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ.

ನಿರ್ಗಮಿತ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಅವರ ನಿಕಟವರ್ತಿ ಸಂಜಯ್ ಅವರು ಇಂದು ನಡೆದ WFI ಚುನಾವಣೆಯಲ್ಲಿ 15 ಹುದ್ದೆಗಳಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

“ಬಳಿಕ ತಮ್ಮ ಶೂಗಳನ್ನು ಕಳಚಿ ಟೇಬಲ್ ಮೇಲಿಟ್ಟು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾಕ್ಷಿ ಮಲಿಕ್, ನಾವು ನಮ್ಮ ಹೃದಯದಿಂದ ಹೋರಾಡಿದ್ದೇವೆ. ಆದರೆ ಬ್ರಿಜ್ ಭೂಷಣ್ ಅವರಂತಹ ವ್ಯಕ್ತಿ, ಅವರ ವ್ಯಾಪಾರ ಪಾಲುದಾರ ಮತ್ತು ಆಪ್ತ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ನಾನು ಕುಸ್ತಿಯನ್ನು ತ್ಯಜಿಸುತ್ತೇನೆ” ಎಂದು ಕಣ್ಣೀರಿಡುತ್ತ ಹೇಳಿದರು.

“ನಾವು ಮಹಿಳಾ ಅಧ್ಯಕ್ಷರನ್ನು ಬಯಸಿದ್ದೇವೆ. ಆದರೆ ಅದು ಸಾಧ್ಯವಾಗಲಿಲ್ಲ” ಎಂದು 31 ವರ್ಷದ ಸಾಕ್ಷಿ ಮಲಿಕ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಚುನಾವಣೆಗೆ ಮುನ್ನ, ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಅವರು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ, ಬ್ರಿಜ್ ಭೂಷಣ್‌ಗೆ ಸಂಬಂಧಿಸಿದವರು WFI ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಬೇಕು ಎಂದು ಪದೇ ಪದೇ ವಿನಂತಿಸಿದ್ದರು.
ಪರಿಣಾಮವಾಗಿ, ಬ್ರಿಜ್ ಭೂಷಣ್ ಅವರ ಪುತ್ರ ಪ್ರತೀಕ್ ಅಥವಾ ಅಳಿಯ ವಿಶಾಲ್ ಸಿಂಗ್ ಸ್ಪರ್ಧಿಸದಂತೆ ತಡೆಯಲಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *