ಬರಗಾಲ ಬಂದ್ರೆ ರೈತರು ಸಾಲಮನ್ನಾದ ನಿರೀಕ್ಷೆ ಇಟ್ಕೊಳ್ತಾರೆ; ಸಚಿವ ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆ

ಚಿಕ್ಕೋಡಿ (ಬೆಳಗಾವಿ): ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಶಿವಾನಂದ್ ಪಾಟೀಲ್ ಮತ್ತೊಮ್ಮೆ ರೈತರ ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ.

ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜವನ್ನೂ ಕೊಟ್ಟರು, ಗೊಬ್ಬರವನ್ನೂ ಕೊಟ್ಟರು. ಇನ್ನೂ ರೈತರಿಗೆ ಒಂದೆ ಆಸೆ ಇದೆ ಏನಪ್ಪಾ ಎಂದರೆ, ಮ್ಯಾಲ ಮ್ಯಾಲ ಬರಗಾಲ ಬೀಳಲಿ ಎಂದು. ಏಕೆಂದರೆ, ಸಾಲ ಮನ್ನಾ ಆಗುತ್ತೆ ಅಂದು. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದಾರೆ.

ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದರೆ, ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಸರ್ಕಾರ ಸದಾ ನರೆವಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ವಿವಾದಾದ್ಮಕ ಹೇಳಿಕೆ ನೀಡಿದ್ದ ಶಿವಾನಂದ ಪಾಟೀಲ್ ಅವರು, ಕುಡಿದು ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ ಆತ್ಮಹತ್ಯೆ ಎಂದು ದೂರು ಕೊಟ್ಟರೇ ಪರಿಹಾರ ಸಿಗುತ್ತೆ ಎನ್ನುವ ದುರಾಸೆ ಸಂಬಂಧಿಕರದ್ದು. ರೈತರು ಇಂದಿನಿಂದಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದರು.

ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೇ ಪರಿಹಾರ ವಿಳಂಬ ಮಾಡುವುದಿಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಪರಿಹಾರ ಸಿಗಬಹುದು ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2014 ರ ಹಿಂದೆ ಎಷ್ಟು, 2015 ರ ನಂತರ ಎಷ್ಟು ಜನರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನೀವೆ ನೋಡಿ. ಆ ವೇಳೆ ಇಷ್ಟೊಂದು ವರದಿ ಆಗುತ್ತಿರಲ್ಲಿ. ಇವಾಗ ಹೆಚ್ಚು ವರದಿ ಆಗುತ್ತಿವೆ ಎಂದಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *