ರಾಯಚೂರು: ಮಂತ್ರಮಾಂಗಲ್ಯ ಪದ್ಧತಿಯಂತೆ ಮದುವೆಯಾದ ಸರ್ಕಾರಿ ನೌಕರರು..!
ರಾಯಚೂರು(ಡಿ.28): ಮದುವೆಯೆಂಬುದು ವೈಭವ, ವಿಜೃಂಭಣೆ ಮತ್ತು ಪ್ರತಿಷ್ಠೆಯ ಪ್ರದರ್ಶನವಾಗಿರುವ ಈಗಿನ ಕಾಲದಲ್ಲಿ ಸರ್ಕಾರಿ ನೌಕರರಿಬ್ಬರು ಸರಳವಾಗಿ, ಸೈದ್ಧಾಂತಿಕವಾಗಿ ನವ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸೇಡಂ ವಲಯದಲ್ಲಿ ಅಬಕಾರಿ ಕಾನ್ಸ್ಟೇಬಲ್ ಆಗಿರುವ ಜಿಲ್ಲೆ ದೇವದುರ್ಗ ತಾಲೂಕು ಯರಮರಸ್ ಗ್ರಾಮದ ವರ ಗೌರಿಶಂಕರ.ಜಿ ಹಾಗೂ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ದೇವದುರ್ಗ ತಾಲೂಕು ಯರಮರಸ್ ಗ್ರಾಮದ ವಧು ಶಿಲ್ಪಾ.ಎಸ್ ಎಂಬವರು ಇತ್ತೀಚೆಗೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರಕವಿ ಕುವೆಂಪುರವರ ಆದರ್ಶ ವಿವಾಹ ಕಲ್ಪನೆಯಾಗಿರುವ ಮಂತ್ರ ಮಾಂಗಲ್ಯ ಪದ್ಧತಿಯಂತೆ ವಿವಾಹವಾಗಿ, ಸರಳತೆ ಮೆರೆದಿದ್ದಾರೆ.
ಸಮಾರಂಭದಲ್ಲಿ ಸಾಮಾಜಿಕ ಚಿಂತಕ ವಿವೇಕಾನಂದ.ಎಚ್.ಕೆ ಅವರು ವಿವಾಹ ನೀತಿ ಸಂಹಿತೆಯನ್ನು ಬೋಧಿಸಿದರು. ಗಮಕ ಕಲಾವಿದ ವಿದ್ವಾನ್ ಖಾಸಿಂ ಮಲ್ಲಿಗೆ ಮಡುವು ಅವರು ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕಾವ್ಯ ಗಾಯನ ಹಾಡಿದರು. ಆಹಾರ ಸಂರಕ್ಷಣೆ ನೇತಾರ ಯುವರಾಜ್.ಎಂ ನಿರೂಪಿಸಿದರು. ಎಚ್.ಸಿ.ಉಮೇಶ್ ನಾಡಗೀತೆ ಹಾಡಿದರು. ವಧು-ವರರ ಕುಟುಂಬಗಳ ಸಂಬಂಧಿಗಳು, ಆಪ್ತರು-ಸ್ನೇಹಿತರು, ವೈಚಾರಿಕ ಹಿನ್ನೆಲೆಯ ಅನೇಕರು ಈ ವಿಶೇಷ ಮದುವೆಗೆ ಸಾಕ್ಷಿಯಾದರು.