ಉತ್ತರ ಕನ್ನಡ ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಬಲಾಬಲ ತಿಳಿಯಲು ವಾಟ್ಸಾಪ್ ಮೊರೆ ಹೋದ ಕಾಂಗ್ರೆಸ್

ಹೈಲೈಟ್ಸ್‌:

  • ಉತ್ತರ ಕನ್ನಡ ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಬಲಾಬಲ ತಿಳಿಯಲು ವಾಟ್ಸಾಪ್ ಮೊರೆ ಹೋದ ಕಾಂಗ್ರೆಸ್
  • ಕಾಂಗ್ರೆಸ್‌ ವರಿಷ್ಠರ ನೂತನ ವಿಧಾನ, ಸಾಮಾಜಿಕ ಜಾಲತಾಣ ಬಳಕೆ
  • ಲೋಕಸಭೆ ಚುನಾವಣೆ ಅಭ್ಯರ್ಥಿ ಆಗುವುದಕ್ಕೆ ಕಾಂಗ್ರೆಸ್‌ನೊಳಗೆ ಪೈಪೋಟಿ ಇಲ್ಲ

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಬಯಸಿರುವ ಟಿಕೆಟ್‌ ಆಕಾಂಕ್ಷಿಗಳ ಬಲಾಬಲ ತಿಳಿಯಲು ಪಕ್ಷದ ವರಿಷ್ಠರು ನೂತನ ವಿಧಾನ ಅನುಸರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲು ಹೆಜ್ಜೆ ಇಟ್ಟಿದ್ದಾರೆ.

ಎರಡು ಸಭೆಗಳ ನಂತರ

ಕಾಂಗ್ರೆಸ್‌ ಪಕ್ಷದ ಜಿಲ್ಲಾ ಲೋಕಸಭಾ ಚುನಾವಣಾ ಸಿದ್ಧತೆಯ ಉಸ್ತುವಾರಿಯಾಗಿ ಸಚಿವ ಎಚ್‌. ಕೆ ಪಾಟೀಲ್‌ ನಿಯೋಜನೆಯಾದ ನಂತರ ಕಳೆದ ಒಂದೂವರೆ ತಿಂಗಳು ಈಚೆಗೆ ಎರಡು ಬಾರಿ ಜಿಲ್ಲೆಯ ಅಂಕೋಲಾ ಮತ್ತು ಶಿರಸಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಈ ಸಭೆಗಳಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಸೇರಿದಂತೆ ಪ್ರಮುಖರು ಪದಾಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಅಭ್ಯರ್ಥಿ ಯಾರಾದರೇ ಸೂಕ್ತ ಎನ್ನುವ ಬಗ್ಗೆ ಸಮಾಲೋಚನೆ ನಡೆದಿದೆ. ಅವರಲ್ಲಿ ಕೆಲವರು ಲೋಕಸಭಾ ಚುನಾವಣೆಗೆ ಇಂಥವರೇ ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ವರಿಷ್ಠರಿಗೆ ವೈಯಕ್ತಿಕವಾಗಿ ಅಭಿಪ್ರಾಯ ತಿಳಿಸಿದ್ದಾರೆ.

ಆದರೆ ಅದರೊಂದಿಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಹಾಗೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಕಿತ್ತೂರು ಖಾನಾಪುರ ಪ್ರದೇಶದ ಪಕ್ಷದ ಸಾವಿರಾರು ಕಾರ್ಯಕರ್ತರ ಅಭಿಪ್ರಾಯ ತಿಳಿಯಲು ಮತ್ತು ಸಾರ್ವಜನಿಕರ ಅನಿಸಿಕೆಗೆ ಕೂಡ ಪ್ರಾಧಾನ್ಯತೆ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಹೊಸ ವಿಧಾನ ಅನುಸರಿಸಲು ನಿರ್ಧಾರ ಮಾಡಲಾಯಿತು ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಐದು ದಿನಗಳಲ್ಲಿ….

ಇಂಥದೊಂದು ವಾಟ್ಸಾಪ್‌ ಮೆಸೇಜ್‌ ಮೂಲಕ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ಬಲ ಎಷ್ಟು ಎಂಬ ಅಭಿಪ್ರಾಯ ಸಂಗ್ರಹದ ಅಭಿಯಾನಕ್ಕೆ ನೀಡಿದ್ದು ಐದು ದಿನಗಳ ಅವಕಾಶ ಮಾತ್ರ. ಆದರೆ ಅಷ್ಟರಲ್ಲಿಯೇ ಪಕ್ಷದ ಸಾವಿರಾರು ಕಾರ್ಯಕರ್ತರು, ಆಕಾಂಕ್ಷಿಗಳ ಬೆಂಬಲಿಗರು ಅಭ್ಯರ್ಥಿ ಯಾರಾಗಬೇಕು ಎಂಬ ಹೆಸರು ನಮೂದಿಸಿ ಮೆಸೇಜ್‌ ಕಳಿಸಿದ್ದಾರೆ ಎಂದು ಗೊತ್ತಾಗಿದೆ.

ಇವರಲ್ಲಿಅನೇಕರು ತಾವೇ ಯೋಚಿಸಿ ಯಾರು ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ವರಿಷ್ಠರಿಗೆ ಹೆಸರು ಕಳಿಸಿದ್ದಾರೆ. ಇನ್ನೂ ಹಲವರನ್ನು ತಮ್ಮ ಪರವಾಗಿ ವಾಟ್ಸಾಪ್‌ಗೆ ಹೆಸರು ಕಳಿಸುವಂತೆ ಟಿಕೆಟ್‌ ಆಕಾಂಕ್ಷಿಗಳು ಸಾಕಷ್ಟು ಪ್ರಯತ್ನ ನಡೆಸಿ ಸಫಲರಾಗಿದ್ದಾರೆ ಎಂದು ಗೊತ್ತಾಗಿದೆ.

ಇಷ್ಟಕ್ಕೆ ಮುಗಿದಿಲ್ಲ…

ಈ ಮಧ್ಯೆ, ಲೋಕಸಭೆ ಚುನಾವಣೆ ಅಭ್ಯರ್ಥಿ ಆಗುವುದಕ್ಕೆ ಕಾಂಗ್ರೆಸ್‌ ಪಕ್ಷದೊಳಗೆ ಹೆಚ್ಚಿನವರ ಪೈಪೋಟಿ ಏನೂ ಇಲ್ಲ. ಶಿರಸಿಯ ರವೀಂದ್ರ ನಾಯ್ಕ, ಕಾರವಾರದ ಜಿ.ಟಿ ನಾಯ್ಕ, ಕುಮಟಾದ ಆರ್‌. ಎಚ್‌.ನಾಯ್ಕ, ಹಾಗೂ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ ಸೇರಿದಂತೆ ಕೆಲವು ಆಕಾಂಕ್ಷಿಗಳ ಹೆಸರನ್ನು ಬೆಂಬಲಿಗರು, ಕಾರ್ಯಕರ್ತರು ವಾಟ್ಸಾಪ್‌ ಸಂದೇಶದಲ್ಲಿನಮೂದಿಸಿದ್ದಾರೆ. ಆದರೆ ಅಭ್ಯರ್ಥಿ ನಿಗದಿ ಪ್ರಕ್ರಿಯೆ ಇಷ್ಟಕ್ಕೆ ಮುಗಿದಿಲ್ಲ. ಅಲ್ಲದೆ ಈಗಿನ ಆಕಾಂಕ್ಷಿಗಳ ಹೊರತಾಗಿ ಬೇರೆ ಪ್ರಬಲ ಅಭ್ಯರ್ಥಿಯನ್ನು ಕೂಡ ಹೈಕಮಾಂಡ್‌ ಕಣಕ್ಕೆ ಇಳಿಸಬಹುದು ಎಂಬುದಾಗಿ ಪಕ್ಷದ ಮುಖಂಡರು ಹೇಳುತ್ತಾರೆ.

ಪಕ್ಷದ ಲೋಕಸಭಾ ಚುನಾವಣಾ ಉಸ್ತುವಾರಿ ಪ್ರಮುಖರ ಸೂಚನೆಯಂತೆ, ಟಿಕೆಟ್‌ ಆಕಾಂಕ್ಷಿಗಳಲ್ಲಿ ಯಾರು ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ಹಲವಾರು ಕಾರ್ಯಕರ್ತರು ನಿಗದಿತ ವಾಟ್ಸಾಪ್‌ ನಂಬರ್‌ಗೆ ಮೆಸೇಜ್‌ ಕಳಿಸಿದ್ದಾರೆ. ಮುಂದಿನ ಹಂತದಲ್ಲಿಪಕ್ಷದ ಹೈಕಮಾಂಡ್‌ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.

– ಎಸ್‌.ಕೆ ಭಾಗವತ, ಜಿಲ್ಲಾಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *