ಪಕ್ಷವಿರೋಧಿ ಚುಟುವಟಿಕೆ ನಡೆಸುವ ‘ಅತೃಪ್ತರಿಗೆ’ ಬಿಜೆಪಿ ವಾರ್ನಿಂಗ್

ಬೆಂಗಳೂರು,ಮಾ. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಇಲ್ಲವೇ ಅಧಿಕೃತ ಅಭ್ಯರ್ಥಿ ವಿರುದ್ಧ ಚಟುವಟಿಕೆಗಳನ್ನು ನಡೆಸಿದರೆ ಅಂಥವರನ್ನು ಮುಲಾಜಿಲ್ಲದೆ ಪಕ್ಷದಿಂದಲೇ ಹೊರಹಾಕಲಾಗುತ್ತದೆ ಎಂದು ರಾಜ್ಯ ಬಿಜೆಪಿ ಘಟಕ ಭಿನ್ನಮತಿಯರಿಗೆ ಎಚ್ಚರಿಕೆ ಕೊಟ್ಟಿದೆ. ಪಕ್ಷಕ್ಕೆ ಯಾರೊಬ್ಬರು ಅತೀತರಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಸಿದ್ಧಾಂತದೊಂದಿಗೆ ಬಿಜೆಪಿಯನ್ನು ಸಂಘಟಿಸಿದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪಕ್ಷದಿಂದಲೇ ಗೇಟ್ ಪಾಸ್ ಗ್ಯಾರಂಟಿ ಎಂದು ಅಸಮಾಧಾನಿತರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯತ್ರಿಗೆ ಸಿದ್ದೇಶ್ವರ್‍ಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಅನೇಕರು ಭಿನ್ನಮತ ಸಾರಿದ್ದಾರೆ. ಮಾಜಿ ಶಾಸಕರಾದ ಎಂ.ಪಿ.ರೇಣಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಕರುಣಾಕರ ರೆಡ್ಡಿ, ಗುರು ಸಿದ್ದನಗೌಡರ್ ಸೇರಿದಂತೆ ಅನೇಕ ಮುಖಂಡರು ಪಕ್ಷದ ತೀರ್ಮಾನಕ್ಕೆ ಸೆಡ್ಡು ಹೊಡೆದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಘಟಕ ತಕ್ಷಣವೇ ವರಿಷ್ಠರು ಆಯ್ಕೆ ಮಾಡಿರುವ ಗಾಯತ್ರಿ ಸಿದ್ದೇಶ್‍ಗೆ ಬೆಂಬಲ ನೀಡಬೇಕು. ಭದ್ರಕೋಟೆಯನ್ನು ಉಳಿಸಿಕೊಳ್ಳುವತ್ತ ಕಾರ್ಯೋನ್ಮುಖರಾಗಿ. ಒಂದು ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.

ದಾವಣಗೆರೆ ಮಾತ್ರವಲ್ಲದೆ ಅಸಮಾಧಾನಗೊಂಡಿದ್ದಾರೋ ಅಂಥವರಿಗೆ ಖುದ್ದು ದೂರವಾಣಿ ಕರೆ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ ತಕ್ಷಣವೇ ಭಿನ್ನಮತವನ್ನು ಬದಿಗೊತ್ತಿ, ಕೂಡಲೇ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಸೂಚನೆ ನೀಡಿದ್ದಾರೆ.

ಅದರಲ್ಲೂ ತಮ್ಮ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವರೊಬ್ಬರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ಗುಂಪುಗಾರಿಕೆ ನಡೆಸುವುದನ್ನು ನಿಲ್ಲಿಸಬೇಕು. ಕಳೆದ ಒಂದು ವಾರ ನೀವು ನಡೆಸುತ್ತಿರುವ ಚಟುವಟುಕೆಗಳನ್ನು ನಾನು ಮಾತ್ರವಲ್ಲದೆ ದೆಹಲಿ ನಾಯಕರು ಕೂಡ ಗಮನಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ. ಇಲ್ಲದಿದ್ದರೆ ಪಕ್ಷದಿಂದಲೇ ಕಿತ್ತು ಹಾಕಲು ನಾನೇ ಹೇಳಬೇಕಾಗುತ್ತದೆ ಎಂದು ನೇರ ಮಾತುಗಳಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.

ಪಕ್ಷದಲ್ಲೇ ಇದ್ದು ಕೆಲಸ ಮಾಡುವುದಾದರೆ ಮಾಡು. ಇಲ್ಲವಾದರೆ ಬೇರೆ ಪಕ್ಷಕ್ಕೆ ಹೋಗುತ್ತೀಯ ಹೋಗು, ಟಿಕೆಟ್ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕಾಗಿ ಪಕ್ಷ ವಿರೋ ಚಟುವಟಿಕೆ ನಡೆಸುವುದು ಎಷ್ಟರಮಟ್ಟಿಗೆ ಸರಿ. ನೀನು ಮಾತ್ರವಲ್ಲದೆ ಸಾಲದ್ದಕ್ಕೆ ಬೇರೆಯವರನ್ನು ಗುಡ್ಡೆ ಹಾಕುತ್ತಿದ್ದೀಯೀ, ಗುಂಪುಗಾರಿಕೆ ನಡೆಸಬಾರದೆಂದು ಹೇಳಿದರೂ ಪದೇ ಪದೇ ಅದನ್ನೇ ಮಾಡುತ್ತಿದ್ದೀಯಾ… ಇರುವುದಾದರೆ ಇರು, ಹೋಗುವುದಾದರೆ ಹೋಗು ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಬೇರೆ ಬೇರೆ ಕಾರಣಗಳಿಗಾಗಿ ಗಾಯತ್ರಿ ಸಿದ್ಧೇಶ್ವರ್‍ಗೆ ಟಿಕೆಟ್ ನೀಡಲಾಗಿದೆ. ಇಷ್ಟವೋ, ಕಷ್ಟವೋ ಪಕ್ಷದ ತೀರ್ಮಾನಕ್ಕೆ ಬದ್ಧರಾಗಬೇಕು. ಪದೇ ಪದೇ ಈ ರೀತಿ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ವರ್ತಿಸಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸಬೇಕಾಗುತ್ತದೆ. ಕೊನೆಯ ಬಾರಿ ಹೇಳುತ್ತಿದ್ದೇನೆ ತಕ್ಷಣವೇ ಸಭೆಗಳನ್ನು ನಡೆಸುವುದನ್ನು ನಿಲ್ಲಿಸಬೇಕು, ಪದೇ ಪದೇ ಪುನಾವರ್ತನೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಬಿಎಸ್‍ವೈಗುಡುಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *