DK Shivakumar: ಲೋಕಸಭೆ ಚುನಾವಣೆ ಹೊತ್ತಲ್ಲೇ ಡಿಕೆಶಿಗೆ ಲೋಕಾಯುಕ್ತ ನೋಟಿಸ್! ದಾಖಲೆ ಸಲ್ಲಿಕೆಗೆ ಸೂಚನೆ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಲೋಕಾಯುಕ್ತ (Lokayukta) ನೋಟಿಸ್ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಗೆ ನೋಟಿಸ್ ನೀಡಲಾಗಿದೆ. ಅಕ್ರಮವಾಗಿ ಆಸ್ತಿ ಗಳಿಸಿರೋ ಆರೋಪ ಡಿಕೆ ಶಿವಕುಮಾರ್ ಮೇಲಿದ್ದು, ಅದರ ದಾಖಲೆಗಳನ್ನು ಒದಗಿಸುವಂತೆ ನೊಟೀಸ್ ಜಾರಿ ಮಾಡಲಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ (CBI) ತನಿಖೆ ರದ್ದು ಮಾಡಿ ರಾಜ್ಯ ಸರ್ಕಾರ, ಲೋಕಾಯುಕ್ತ ತನಿಖೆಗೆ ನೀಡಿತ್ತು. ಈ ಹಿಂದೆ ಬಿಜೆಪಿ ಸರ್ಕಾರ (BJP government) ಇದ್ದಾಗ ಡಿಕೆಶಿ ಪ್ರಕರಣ ಸಿಬಿಐ ತನಿಖೆ ನಡೆಸುತ್ತಿತ್ತು. ಬಳಿಕ ಸಿದ್ದರಾಮಯ್ಯ (Siddaramaiah) ಸರ್ಕಾರ ಬರುತ್ತಿದ್ದಂತೆ ಸಿಬಿಐನಲ್ಲಿ ದಾಖಲಾಗಿದ್ದ ಕೇಸ್ ಅನ್ನು, ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ, ತನಿಖೆಯ ಭಾಗವಾಗಿ ಡಿಕೆಶಿಗೆ ನೋಟಿಸ್ ನೀಡಿದೆ.
ಡಿಕೆಶಿಗೆ ನೋಟಿಸ್ ನೀಡಿದ ಲೋಕಾಯುಕ್ತರು
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ಇದೀಗ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು, ಡಿಕೆಶಿಗೆ ನೋಟಿಸ್ ನೀಡಿದ್ದಾರೆ.
ದಾಖಲೆ ಸಲ್ಲಿಸುವಂತೆ ಡಿಕೆಶಿಗೆ ಸೂಚನೆ
ಲೋಕಾಯುಕ್ತ ಅಧಿಕಾರಿ ಸತೀಶ್ ಎಂಬುವರು ಡಿಕೆ ಶಿವಕುಮಾರ್‌ಗೆ ನೋಟಿಸ್ ನೀಡಿದ್ದಾರೆ. ಅಕ್ರಮ ಆಸ್ತಿಗಳಿಕೆ ಕೇಸ್‌ಗೆ ಸಂಬಂಧ ಪಟ್ಟಂತೆ ಸಿಬಿಐಗೆ ಇದುವರೆಗೂ ನೀಡಿರೋ ಮಾಹಿತಿ ಹಾಗೂ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.
ಕೇಸ್ ಸಿಬಿಐಗೆ ನೀಡಿದ್ದ ಹಿಂದಿನ ಬಿಜೆಪಿ ಸರ್ಕಾರ
ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಕೇಸ್ ತನಿಖೆ ಹೊಣೆಯನ್ನು ಸಿಬಿಐಗೆ (CBI) ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಬಿಐನಿಂದ ಕೇಸ್ ಹಿಂಪಡೆದು, ಲೋಕಾಯುಕ್ತ (Lokayukta) ಪೊಲೀಸರಿಗೆ ತನಿಖೆ ಹೊಣೆ ನೀಡಲಾಗಿತ್ತು. ಕೆಲ ತಿಂಗಳ ಹಿಂದೆ ಸಿಬಿಐ ಕೇಸ್ ಅನ್ನು ಲೋಕಾಯಕ್ತಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು.
ಸಿಬಿಐನಿಂದ ಲೋಕಾಯುಕ್ತಕ್ಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ
2020ರಲ್ಲಿ ಡಿಕೆಶಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ ಕೇಸ್ ದಾಖಲಿಸಿಕೊಂಡಿತ್ತು. ಬಹುತೇಕ ತನಿಖೆ ಮುಗಿಸಿದ್ದ ಸಿಬಿಐ ಅಧಿಕಾರಿಗಳು, ಚಾರ್ಜ್ ಶೀಟ್ ಸಲ್ಲಿಕೆ ಹಂತಕ್ಕೆ ಬಂದಿದ್ದರು. ಈ ವೇಳೆ ಈ ನಡುವೆ ಕೇಸ್ ಅನ್ನು ಲೋಕಾಯಕ್ತಕ್ಕೆ ವರ್ಗಾವಣೆ ಮಾಡಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಆದೇಶ ನೀಡಿತ್ತು.
ಸ್ಪೀಕರ್‌ರಿಂದ ಒಪ್ಪಿಗೆ ಪಡೆದಿರಲಿಲ್ಲ ಬಿಜೆಪಿ ಸರ್ಕಾರ
ಡಿ.ಕೆ ಶಿವಕುಮಾರ್ ವಿರುದ್ಧ ತನಿಖೆ ಮಾಡೋದಕ್ಕೆ ಸಿಬಿಐಗೆ ವಹಿಸೋದಕ್ಕೆ ಹಿಂದಿನ ಸರ್ಕಾರ ನಿರ್ಣಯ ಮಾಡಿತ್ತು. ಆದರೆ ಕಾನೂನಾತ್ಮಕವಾಗಿ ಸ್ಪೀಕರ್ ಅವರಿಂದ ನಿರ್ಣಯ ಪಡೆದುಕೊಳ್ಳಬೇಕಾಗಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಮಾಡಿರಲಿಲ್ಲ ಅಂತ ರಾಜ್ಯ ಸರ್ಕಾರ ಹೇಳಿತ್ತು.