Indian Election History ಭಾಗ-7: ದೇಶವನ್ನೇ ತೊರೆಯಲು ನಿರ್ಧರಿಸಿದ್ದ ಇಂದಿರಾ ಗಾಂಧಿ, ಮತ್ತೆ ಪ್ರಧಾನಿಯಾಗಿದ್ದೇ ರೋಚಕ!

History of Indian Parliament Election: 1977ರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಇಂದಿರಾ ಗಾಂಧಿ (Indira Gandhi) ಅತೀವ ದುಃಖದಲ್ಲಿದ್ದರು. ಎಷ್ಟೆಂದರೆ ಇನ್ನು ರಾಜಕೀಯವೇ ಬೇಡ ಎಂದು ನಿರ್ಧರಿಸಿ ಹಿಮಾಲಯಕ್ಕೆ ತಪಸ್ಸಿಗಾಗಿ ಹೊರಟಿದ್ರು.

ಹೌದು.. ಹಿಮಾಚಲ ಪ್ರದೇಶದ ಯಾವುದಾದರೂ ಒಂದು ಕಡೆ ಬೆಟ್ಟದ ತಪ್ಪಲಲ್ಲಿ ಮನೆ ಖರೀದಿಸಿ ಅಲ್ಲೇ ಇರುತ್ತೇನೆ.. ಅಷ್ಟಕ್ಕೂ ನನ್ನ ಖರ್ಚುಗಳೇನಿವೆ ಹೇಳಿ, ಹಿಮಾಲಯದ ತಪ್ಪಲಲ್ಲೇ ನಿವೃತ್ತಿಯ ಬದುಕು ಕಳೆಯುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ರು.. ಗಾಂಧಿ ಕುಟುಂಬದ ಆಪ್ತ ಓಲ್ಡ್​ಮಾಂಕ್ ರಮ್​ ತಯಾರಿಸುತ್ತಿದ್ದ ಮದ್ಯದ ಕಂಪನಿ ಮೋಹನ್​ ಮೇಕಿನ್​ಗೆ ಸೇರಿದ ಕಪಿಲ್ ಮೋಹನ್ ಬಳಿ ಈ ಮಾತು ಹೇಳಿದ್ರು ಇಂದಿರಾ.

ಒಂದು ಕಾಲದಲ್ಲಿ ದುರ್ಗೆ ಎಂದು ಕರೆಸಿಕೊಂಡಿದ್ದ ಇಂದಿರಾ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತದ ಅಧಿನಾಯಕಿ ಎಂದು ಮೆಚ್ಚುಗೆಗೆ ಪಾತ್ರರಾಗಿದ್ದ ಇಂದಿರಾ, ಇಂಡಿಯಾ ಈಸ್​ ಇಂದಿರಾ… ಇಂದಿರಾ ಈಸ್​ ಇಂಡಿಯಾ ಎಂದು ಹೊಗಳಿಸಿಕೊಂಡಿದ್ದ ಇಂದಿರಾ.. ಈಗ ಸನ್ಯಾಸಿಯಾಗುವ ಮಾತನಾಡುತ್ತಿದ್ರು.. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಂದಿರಾ ಗಾಂಧಿ ತಮ್ಮ ಕುಟುಂಬಕ್ಕೆ ಪ್ರಾಣಾಪಾಯವಿದೆ ಎಂದು ಬೆದರಿದ್ರು.

ವಿದೇಶಕ್ಕೆ ಹಾರಲು ಪ್ಲಾನ್ ಮಾಡಿತ್ತು ಇಂದಿರಾ ಕುಟುಂಬ!

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ದಿನವೇ ನಸುಕಿನ ಜಾವ 2 ಗಂಟೆಗೆ ಪ್ರಧಾನಿಯಾಗಿ ಬಹುಕಾಲ ಬಾಳಿದ್ದ 1 ಸಫ್ದರ್​ಜಂಗ್ ರಸ್ತೆಯ ಮನೆಯನ್ನು ಕುಟುಂಬ ಸಮೇತ ತೊರೆದು ಬಂದಿದ್ರು ಇಂದಿರಾ.. ನಿದ್ದೆಯಲ್ಲಿದ್ದ ಪುಟ್ಟ ಮಕ್ಕಳು ರಾಹುಲ್​ ಮತ್ತು ಪ್ರಿಯಾಂಕಾಳನ್ನು ಎತ್ತಿಕೊಂಡೇ ಸೋನಿಯಾ, ರಾಜೀವ್ ​ಕೆಲ ಸ್ನೇಹಿತರ ಜೊತೆ ಸುಮನ್​ ದುಬೆ ಮನೆಯಲ್ಲಿದ್ರು.

ಅಲ್ಲಿಂದ ಬಾಂಬೆಗೆ ಹೋಗಿದ್ದ ರಾಜೀವ್​, ತಮ್ಮ ಕುಟುಂಬ ಭಾರತದಿಂದಲೇ ಹೊರಹೋಗಲು ಯಾವುದಾದರೂ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆಯಬಹುದೇ ಎಂದು ವಿಚಾರಿಸಿದ್ರು. ಈ ವಿಚಾರ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ತಿಳಿದು ಆತಂಕಿತರಾಗಿದ್ರು.. ಪರಾಜಿತ ಪ್ರಧಾನಿ ದೇಶ ಬಿಟ್ಟು ಹೋದರೆ, ಕೆಟ್ಟದಾಗಿ ನಡೆಸಿಕೊಂಡರೆಂದು ಕೇಂದ್ರ ಸರ್ಕಾರದ ಮೇಲೆ ಕೆಟ್ಟ ಹೆಸರು ಬರುತ್ತೆ ಎಂದು ಜೆಪಿ ಕೂಡಾ ಎಚ್ಚರಿಕೆ ನೀಡಿದ್ರು.. ಹಾಗೆ ಇಂದಿರಾರನ್ನು ಜೆಪಿ, ಮೊರಾರ್ಜಿ ದೇಸಾಯಿ ಭೇಟಿಯಾಗಿ ಭದ್ರತೆಯ ಭರವಸೆ ನೀಡಿದ್ರು.

ಆದರೂ ಸಂಜಯ್ ಗಾಂಧಿಯ ಜೀವದ ಬಗ್ಗೆ ಅವರಿಗೆ ಭಾರೀ ಆತಂಕ ಎದುರಾಗಿತ್ತು.. ಅದಕ್ಕಾಗಿ ಸಂಜಯ್​ರನ್ನು ಇದೇ ಕಪಿಲ್​ ಮೋಹನ್​ ಅವರ ಮೂಲಕ ಹಿಮಾಚಲಪ್ರದೇಶದ ಗುಡ್ಡಗಾಡಲ್ಲಿರುವ ಸೋಲನ್​ನ ನಿರ್ಜನ ಪ್ರದೇಶಕ್ಕೆ ಕಳುಹಿಸಿದ್ರು.. ಹಾಗೆ ಸೋಲನ್​ನಲ್ಲಿರುವ ಓಲ್ಡ್​ಮಾಂಕ್​ ರಮ್ ಕಂಪನಿಯ ಹಳೆಯ ಬಂಗಲೆಯಲ್ಲಿ ಕೆಲ ಕಾಲ ಕಳೆದಿದ್ರು ಸಂಜಯ್. ಆದರೆ ಅಲ್ಲಿಂದ ಕೇವಲ 16 ದಿನಕ್ಕೇ ಸಂಜಯ್​ ತಪ್ಪಿಸಿಕೊಂಡು ಬಂದರು. ಸಂಜಯ್​ ಹಿಂದೆಯೇ ಬೇರೊಂದು ಕಾರಲ್ಲಿ ಕಪಿಲ್​ ಮೋಹನ್ ಬಂದರು. ಹಾಗೆ ಬರುವಾಗ ಅರ್ಧ ದಾರಿಯಲ್ಲಿ ಸಂಜಯ್ ಕಾರು ಕೆಟ್ಟು ನಿಂತಿತ್ತು. ಜನ ಸೇರತೊಡಗಿದರು. ಕೆಲವರು ಕಾರಲ್ಲಿದ್ದ ಸಂಜಯ್ ಗಾಂಧಿಯನ್ನು ಗುರುತಿಸಿ ಹಲ್ಲೆಗೆ ಮುಂದಾದರು. ತಕ್ಷಣ ಹಿಂದಿನ ಕಾರಲ್ಲಿದ್ದ ಕಪಿಲ್ ಮೋಹನ್ ಬಂದು ಸಂಜಯ್​ರನ್ನು ತಮ್ಮ ಕಾರಿಗೆ ಹತ್ತಿಸಿ ಅಲ್ಲಿಂದ ಕಾಲ್ಕಿತ್ತರು. ಕೆಲ ನಿಮಿಷ ತಡವಾಗುತ್ತಿದ್ರೆ ಸಂಜಯ್​ ಜೀವಕ್ಕೇ ಅಪಾಯವಿತ್ತು. ಸಂಜಯ್ ಗಾಂಧಿ ಮೇಲೆ ಜನತೆಗಿದ್ದ ರೋಷ ಅಂದು ಅನಾವರಣಗೊಂಡಿತ್ತು..!

12 ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ ಮೊರಾರ್ಜಿ! ಇಂದಿರಾ ಗಾಂಧಿ ಮೇಲೆ ಬೇಹುಗಾರಿಕೆ ಆರೋಪ !

ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ 9 ರಾಜ್ಯಗಳಲ್ಲಿದ್ದ ಕಾಂಗ್ರೆಸ್‌ ಸರ್ಕಾರಗಳನ್ನು ವಜಾಗೊಳಿಸುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿತ್ತು. ರಾಷ್ಟ್ರೀಯ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತ ಕಾರಣ ಈ ರಾಜ್ಯಗಳು ಸಹ ತಮ್ಮ ಜನಾದೇಶವನ್ನು ಕಳೆದುಕೊಂಡಿವೆ ಎಂದು ಈ ನಿರ್ಧಾರಕ್ಕೆ ಬರಲಾಗಿತ್ತು. ಆರಂಭದಲ್ಲಿ ರಾಷ್ಟ್ರಪತಿ ಬಿ.ಡಿಜತ್ತಿ ಸಹಿ ಹಾಕಲು ಹಿಂಜರಿದ್ರೂ ಕೊನೆಗೆ ಒತ್ತಡಕ್ಕೆ ಮಣಿದು ಸಹಿ ಹಾಕಿದರು. ಹಾಗೆ ಚುನಾವಣೆ ನಡೆದ 12 ರಾಜ್ಯಗಳಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲಪ್ರದೇಶ, ಹರಿಯಾಣ, ಬಿಹಾರ ಮತ್ತು ಒರಿಸ್ಸಾದ ಏಳು ರಾಜ್ಯಗಳಲ್ಲಿ ಜನತಾ ಪಕ್ಷವೇ ಅಧಿಕಾರಕ್ಕೆ ಬಂದಿತು. ಪಶ್ಚಿಮಬಂಗಾಳ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ಸೇತರ ಸಿಪಿಐಎಂ ಮತ್ತು ಅಕಾಲಿದಳಗಳು ಸರ್ಕಾರ ರಚಿಸಿದವು. ಎಲ್ಲೆಡೆ ಕಾಂಗ್ರೆಸ್‌ ನೆಲಕ್ಕಚ್ಚಿತ್ತು.

ಸೋಲಿನ ಬಳಿಕ ಇಂದಿರಾ ಗಾಂಧಿ ಹಿಮಾಲಯಕ್ಕೇನೂ ಹೋಗಲಿಲ್ಲ.. ಆದರೆ 12, ವಿಲ್ಲಿಂಗ್ಟನ್​ ಕ್ರೆಸೆಂಟ್​ ರಸ್ತೆಯ ನಿವಾಸಕ್ಕೆ ಶಿಫ್ಟ್ ಆದರು.. ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ ತಮ್ಮ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿತ್ತು. ಇದೇ ಕಾರಣಕ್ಕೆ ಆ ಕಾಲದ ಉಳಿದ ರಾಜಕಾರಣಿಗಳಂತೆ ಇಂದಿರಾ ಗಾಂಧಿ ಕೂಡಾ ತಮ್ಮ ಮನೆಯ ಛಾವಣಿಯ ಮೇಲೆ ಸ್ಯಾಟಲೈಟ್ ಕಣ್ಗಾವಲನ್ನು ತಡೆಯುವಂತಹ ಸಾಧನವನ್ನು ಅಳವಡಿಸಿದ್ರು.

ಇಂದಿರಾ ಗಾಂಧಿ ಬಂಧನ ಪ್ರಹಸನ!

ಇಂದಿರಾ ಗಾಂಧಿ ಅವರ ಖಿನ್ನತೆ ಹೆಚ್ಚು ದಿನ ಇರಲಿಲ್ಲ.. ಅಧಿಕಾರ ಕಳೆದುಕೊಂಡ ನಾಲ್ಕೇ ತಿಂಗಳಲ್ಲಿ ಇಂದಿರಾ ಗಾಂಧಿ ಅವರ ಮನಸ್ಥಿತಿಯೇ ಬದಲಾಯಿತು. ದೇಶದ ಮನಸ್ಥಿತಿಯೂ ಬದಲಾಗಿತ್ತು. ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಮತ್ತು ಜಗಜೀವನ್ ರಾಮ್, ದೇಶದ ಜನ ತಮಗೆ ನೀಡಿದ ಅಭೂತಪೂರ್ವ ಅವಕಾಶವನ್ನು ಮರೆತು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಎಳೆಯಲು ಪ್ರಾರಂಭಿಸಿದ್ದರು. ಇಂದಿರಾ ಈಗ ಮತ್ತೆ ಪುಟಿದೇಳುವ ಮಾರ್ಗಗಳಿಗಾಗಿ ಹುಡುಕುತ್ತಿದ್ದರು.

1977ರ ಅಕ್ಟೋಬರ್‌ 3ರಂದು ಇಂದಿರಾಗೆ ಮತ್ತೊಂದು ಸದವಕಾಶ ಮನೆಯ ಅಂಗಳಕ್ಕೆ ಬಂದು ನಿಂತಿತ್ತು.. ಅಂದು ತುರ್ತುಪರಿಸ್ಥಿತಿಯ ಅಧಿಕಾರ ದುರುಪಯೋಗದ ಆರೋಪ ಪ್ರಕರಣದಲ್ಲಿ ಸಿಬಿಐ ತಂಡವು ಇಂದಿರಾರನ್ನು ಬಂಧಿಸಲು ವಿಲ್ಲಿಂಗ್ಟನ್​ ಕ್ರೆಸೆಂಟ್ ರಸ್ತೆಯ ಮನೆಗೆ ಧಾವಿಸಿತು.

ಇಂದಿರಾ ಬಂಧನದ ವಿಚಾರದಲ್ಲಿ ಜನತಾ ನಾಯಕರಲ್ಲಿ ಗೊಂದಲವಿತ್ತು. ಚರಣ್​ ಸಿಂಗ್​ ನಾಝಿ ಜರ್ಮನಿಯ ಮಾದರಿಯ ವಿಚಾರಣೆಗೆ ಆಗ್ರಹಿಸಿದ್ರು. ಹಾಗೆ ಬಂಧನದ ವಾರಂಟ್​ ಪ್ರತಿಯಿಲ್ಲದೆ ಸಿಬಿಐ ತಂಡ ಇಂದಿರಾ ಮನೆಗೆ ಬಂದಿತ್ತು. ಬಂಧನದ ಸುಳಿವು ಮೊದಲೇ ಸಿಕ್ಕ ಇಂದಿರಾ ಎಲ್ಲದಕ್ಕೂ ಸಿದ್ಧರಾಗಿ ಮನೆಯ ವರಾಂಡಾದಲ್ಲಿ ಸಿಬಿಐ ಅಧಿಕಾರಿಗಳಿಗಾಗಿ ಕಾದು ಕುಳಿತಿದ್ರು. ಎಷ್ಟೆಂದರೆ ಬಂಧನದ ಬಳಿಕ ಮಾಧ್ಯಮದವರಿಗೆ ಕೊಡುವುದಕ್ಕಾಗಿ ಪತ್ರಿಕಾ ಹೇಳಿಕೆಯನ್ನೂ ಮೊದಲೇ ಸಿದ್ಧಪಡಿಸಿಕೊಂಡಿದ್ದರು. ಸಿಬಿಐನವರು ಮನೆಯತ್ತ ಬರುತ್ತಿದ್ದಂತೆಯೇ ನನ್ನ ಕೈಗಳಿಗೆ ಕೋಳ ತೊಡಿಸಿ ಎಂದು ಇಂದಿರಾ ಪಟ್ಟು ಹಿಡಿದರು. ಸಿಬಿಐ ಅಧಿಕಾರಿಗಳು ದಂಗಾಗಿದ್ದರು.. ಈ ವೇಳೆಗೆ ಕಾರ್ಯಪ್ರವೃತ್ತರಾದ ಸಂಜಯ್ ಎಲ್ಲಾ ಮಾಧ್ಯಮ ಕಚೇರಿಗಳಿಗೂ ಕರೆ ಮಾಡಿ ಸ್ಕೂಪ್ ಸುದ್ದಿಗಾಗಿ ಮನೆಯತ್ತ ತಕ್ಷಣ ಬರುವಂತೆ ತಿಳಿಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಎಲ್ಲೆಡೆ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ರು.

‘ನೀವು ಕೈಗೆ ಕೋಳ ತೊಡಿಸುವವರೆಗೆ ನಾನು ಇಲ್ಲಿಂದ ಕದಲುವುದಿಲ್ಲ’ ಎಂದು ಅಂಗಳದಲ್ಲೇ ಕುರ್ಚಿ ಹಾಕಿ ಕುಳಿತರು ಇಂದಿರಾ. ಅವರು ಬಂಧನದ ವಾರಂಟ್ ಪ್ರತಿಗಾಗಿ ಹಠ ಹಿಡಿದಿದ್ರು. ಇಂದಿರಾ ಮನೆಯ ಪ್ರಹಸನದ ಕ್ಷಣಕ್ಷಣದ ಮಾಹಿತಿಯನ್ನು ಕೇಳಿಸುತ್ತಿದ್ದ ಚರಣ್ ಸಿಂಗ್, ಮೊರಾರ್ಜಿ ದಿಕ್ಕೇ ತೋಚದಂತಾದರು. ನಿಜ ಹೇಳಬೇಕೆಂದರೆ ಸಿಬಿಐ ಬಳಿ ಬಂಧನದ ವಾರಂಟ್​ ಇರಲೇ ಇಲ್ಲ. ಕೊನೆಗೂ ಇಂದಿರಾರನ್ನು ಬಂಧಿಸಿ ಕರೆದೊಯ್ದರಾದರೂ ಇಂದಿರಾ ದೇಶಾದ್ಯಂತ ಸಹಾನುಭೂತಿಗೆ ಪಾತ್ರರಾದರು. ತುರ್ತುಪರಿಸ್ಥಿತಿ ಕಾಲದ ‘ಖಳನಾಯಕಿ’, ದ್ವೇಷಕಾರುವ ಮುದುಕರ ಕೈಯ ಬಲಿಪಶುವಾಗಿ ರಾತ್ರೋರಾತ್ರಿ ಬದಲಾಗಿಬಿಟ್ಟರು.

 

ಕೆಲವೇ ತಿಂಗಳಲ್ಲಿ ನುಚ್ಚುನೂರಾದ ಜನತಾ ಸರ್ಕಾರ!

ಜನತಾ ಸರ್ಕಾರ 1977ರ ಚುನಾವಣೆಯಲ್ಲಿ ಭಾರೀ ಬಹುಮತವನ್ನು ಪಡೆದು ಗೆದ್ದು, ಮೊರಾರ್ಜಿ ಸಂಪುಟದ ಸದಸ್ಯರು ಮಹಾತ್ಮಾ ಗಾಂಧೀಜಿ ಸಮಾಧಿಯ ಬಳಿ ಪ್ರಮಾಣವಚನ ಸ್ವೀಕರಿಸಿದ್ರು… ಒಗ್ಗಟ್ಟಾಗಿರುತ್ತೇವೆಂದು ರಾಜ್​ಘಾಟ್​ನಲ್ಲಿ ಪ್ರಮಾಣ ಮಾಡಿದ ಅವರೆಲ್ಲಾ ಕೇವಲ ಕೆಲವೇ ತಿಂಗಳಲ್ಲಿ ಒಡೆದುಚೂರಾಗಿದ್ರು..  ರಾಜ್​ ನಾರಾಯಣ್​ ಮತ್ತು ಚರಣ್ ಸಿಂಗ್​ ಮೊರಾರ್ಜಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದುಕೊಂಡಾಗ ಜನತಾ ಸರ್ಕಾರ ಮುರಿದುಬಿತ್ತು.

1979ರ ಜುಲೈ 24ರಂದು ಚರಣ್ ಸಿಂಗ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಶೇಷವೆಂದರೆ ತನ್ನನ್ನು ಬಂಧಿಸಲು ಸಿಬಿಐ ತಂಡವನ್ನು ಕಳುಹಿಸಿದ್ದ ಚರಣ್ ಸಿಂಗ್​ ಸರ್ಕಾರಕ್ಕೆ ಇಂದಿರಾ ಗಾಂಧಿ ಬೆಂಬಲ ನೀಡಿದ್ರು. ಈ ಸರ್ಕಾರವೂ ಬಹು ಕಾಲ ಉಳಿಯಲಿಲ್ಲ. ಕೇವಲ 24 ತಿಂಗಳಲ್ಲೇ ಇಂದಿರಾ ಗಾಂಧಿ ಚರಣ್​ ಸಿಂಗ್​ಗೆ ನೀಡಿದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡರು. ಗದ್ದುಗೆಗೇರಿದ 34 ತಿಂಗಳ ಬಳಿಕ ಜನತಾ ಸರ್ಕಾರ ಪತನವಾಯಿತು. ಮತ್ತು 1979ರ ಆಗಸ್ಟ್​ 22ರಂದು ಲೋಕಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಲಾಯಿತು. 6 ತಿಂಗಳಿಗೂ ಮುನ್ನವೇ ಅಂದರೆ 1980ರ ಜನವರಿ 3ರಿಂದ 6ರವರೆಗೆ 6ನೇ ಲೋಕಸಭೆ ಚುನಾವಣೆಯೂ ನಡೆಯಿತು.

1977ರ ಚುನಾವಣೆಯ ಬಳಿಕ ಇಂದಿರಾ ಕಸದ ಬುಟ್ಟಿಗೆ ಸೇರುತ್ತಾರೆ ಎಂದಿದ್ದ ಅಟಲ್​ಬಿಹಾರಿ ವಾಜಪೇಯಿ ಅವರ ಮಾತನ್ನು 1980ರ ಚುನಾವಣೆಯ ಫಲಿತಾಂಶ ಸುಳ್ಳಾಗಿಸಿತು. ದೇಶದ ಇತಿಹಾಸದಲ್ಲೇ ನಡೆದ ಮೊದಲ ಸಮ್ಮಿಶ್ರ ಸರ್ಕಾರದ ಪ್ರಯೋಗ ಕೇವಲ 3 ವರ್ಷದೊಳಗೇ ವಿಫಲವಾಗಿತ್ತು. ಜನ ಸ್ಥಿರವಾದ ಸರ್ಕಾರವನ್ನು ಬಯಸುತ್ತಿದ್ರು.. ಆಗ ಅವರಿಗೆ ಇಂದಿರಾ ಗಾಂಧಿಯೇ ಹೊಸ ಆಶಾಕಿರಣವಾಗಿ ಕಾಣಿಸಿದರು. 1980ರ ಚುನಾವಣೆಯ ಪ್ರಚಾರ ಕಣದಲ್ಲಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋದು, ಹಣದುಬ್ಬರ ನಿಯಂತ್ರಣ, ಸದೃಢ ಸರ್ಕಾರದ ಘೋಷಣೆಗಳೇ ಹೆಚ್ಚಾಗಿ ಕಾಣಿಸಿಕೊಂಡಿತ್ತು.

 

ಮತ್ತೆ ಪ್ರಧಾನಿಯಾದರು ಇಂದಿರಾ ಗಾಂಧಿ!

ನಿರೀಕ್ಷಿಸಿದಂತೆ ಲೋಕಸಭೆಯ ಒಟ್ಟು 529 ಸೀಟುಗಳಲ್ಲಿ 351 ಸೀಟುಗಳಲ್ಲಿ ಕಾಂಗ್ರೆಸ್​ ಗೆಲುವನ್ನು ಪಡೆದುಕೊಂಡಿತು. ಇಂದಿರಾ ಗಾಂಧಿ ಮೂರನೇ ಎರಡರಷ್ಟು ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿದ್ರು. 1977ರ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಇಂದಿರಾ ಕಾಂಗ್ರೆಸ್ ಈ ಬಾರಿ ಆ ರಾಜ್ಯಗಳಲ್ಲೇ ಅತಿ ಹೆಚ್ಚು ಸೀಟುಗಳನ್ನು ಪಡೆದುಕೊಂಡಿತು.

ಉತ್ತರಪ್ರದೇಶದಲ್ಲಿ 51, ಬಿಹಾರದಲ್ಲಿ 30. ಹರಿಯಾಣದಲ್ಲಿ 5, ಹಿಮಾಚಲಪ್ರದೇಶದಲ್ಲಿ 4 ಸೀಟುಗಳಲ್ಲಿ ಇಂದಿರಾ ಕಾಂಗ್ರೆಸ್​ ಜಯಭೇರಿ ಬಾರಿಸಿತ್ತು. ಕಳೆದ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಕಾಂಗ್ರೆಸ್​ ಒಂದೇ ಒಂದು ಸ್ಥಾನವನ್ನೂ ಪಡೆದುಕೊಂಡಿರಲಿಲ್ಲ. ಮಹಾರಾಷ್ಟ್ರದಲ್ಲಿ 39, ತಮಿಳುನಾಡಲ್ಲಿ 20, ಕರ್ನಾಟಕದಲ್ಲಿ 27 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿತ್ತು.

ಜನತಾ ಒಕ್ಕೂಟ ಈ ಬಾರಿ ಹೀನಾಯವಾಗಿ ಸೋಲುಂಡಿತ್ತು. ಜನತಾ ಪಕ್ಷ ಸ್ಪರ್ಧಿಸಿದ 433 ಕ್ಷೇತ್ರಗಳಲ್ಲಿ ಕೇವಲ 31ರಲ್ಲಷ್ಟೇ ಗೆಲುವು ಕಂಡಿತ್ತು. ಚರಣ್ ಸಿಂಗ್​ ನೇತೃತ್ವದ ಜನತಾ ಪಕ್ಷ ಸೆಕ್ಯುಲರ್​ 41 ಸ್ಥಾನ ಪಡೆದುಕೊಂಡಿತ್ತು. ಆದರೆ ಈ ಚುನಾವಣೆಗೆ ಮುನ್ನ ಇಂದಿರಾ ಗಾಂಧಿಗೆ ಕರ್ನಾಟಕದಿಂದಲೇ ದೊಡ್ಡ ಆಘಾತ ಎದುರಾಗಿತ್ತು. ಇಂದಿರಾ ಅವರ ಬಹುಕಾಲದ ಆಪ್ತ ದೇವರಾಜ ಅರಸ್​ ಇಂದಿರಾ ಪಕ್ಷ ತೊರೆದು ಬೇರೊಂದು ಪಕ್ಷ ಕಟ್ಟಿದರು. ಸಂಜಯ್ ಗಾಂಧಿ ಮರಳಿ ಪಕ್ಷಕ್ಕೆ ಬಂದದ್ದೇ ತಾನು​ ಪಕ್ಷ ತೊರೆಯಲು ಕಾರಣ ಎಂದರು. ದೇವರಾಜು ಅರಸು ಅವರ ಪಕ್ಷ ಆ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಗೆದ್ದಿತ್ತು.

1980ರ ಜನವರಿ 14ರಂದು ಇಂದಿರಾ ಗಾಂಧಿ ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಿಜವಾಗಲೂ ಅವರು ಪುಟಿದೆದ್ದಿದ್ದರು. ತಮ್ಮ ಸಾಧನೆಗಾಗಿ ಖುಷಿಪಟ್ಟರು, ಸಂಜಯ್​ನ ಸಾಧನೆಯನ್ನು ಇನ್ನೂ ಹೆಚ್ಚು ಸಂಭ್ರಮಿಸಿದರು. ಅಮೇಠಿ ಕ್ಷೇತ್ರದಿಂದ ಸಂಜಯ್ ಭರ್ಜರಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಸಂಜಯ್​ ಅವರೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು.  ಈ ಬಾರಿ 1977ರಿಗಿಂತಲೂ ಹೆಚ್ಚು ಅಂದರೆ 353 ಸ್ಥಾನಗಳನ್ನು ಪಡೆದಿದ್ದರು. ಅದರಲ್ಲೂ 234 ಸಂಸದರು ಮೊದಲ ಬಾರಿ ರಾಜಕೀಯಕ್ಕೆ ಪ್ರವೇಶಿಸಿದವರು.

 

ಲೋಕಸಭಾ ಚುನಾವಣೆಯ ಆರು ತಿಂಗಳ ನಂತರ, ಇಂದಿರಾ 9 ರಾಜ್ಯ ಸರ್ಕಾರಗಳನ್ನು ವಜಾ ಮಾಡಿದರು.  1977ರಲ್ಲಿ ಜನತಾ ಸರ್ಕಾರವು ಮಾಡಿದಂತೆ ಈ ರಾಜ್ಯ ಸರ್ಕಾರಗಳು ಕೂಡಾ ಜನಮತವನ್ನು ಕಳೆದುಕೊಂಡಿದೆ ಎಂಬ ಆಧಾರದಲ್ಲಿ ಈ ಸರ್ಕಾರಗಳನ್ನು ವಜಾ ಮಾಡಲಾಗಿತ್ತು. ಇವುಗಳಲ್ಲಿ ತಮಿಳುನಾಡನ್ನು ಹೊರತುಪಡಿಸಿ ಉಳಿದ 8 ರಾಜ್ಯಗಳಲ್ಲಿ ಕಾಂಗ್ರೆಸ್​ ಮರಳಿ ಅಧಿಕಾರಕ್ಕೆ ಬಂದಿತ್ತು. ಸಂಜಯ್​ ತಮಗೆ ಆಪ್ತರಾದ ನಾಯಕರನ್ನೇ ಈ ರಾಜ್ಯಗಳ ಮುಖ್ಯಮಂತ್ರಿಗಳಾಗಿ ನೇಮಕಗೊಳಿಸಿದರು. ಉತ್ತರಪ್ರದೇಶದ ಸಿಎಂ ಆಗಬೇಕೆಂದು ಸಂಜಯ್ ಪ್ರಯತ್ನಿಸಿದರು. ಆದರೆ ಆ ಪ್ರಯತ್ನಕ್ಕೆ ಇಂದಿರಾ ಸೊಪ್ಪುಹಾಕಲೇ ಇಲ್ಲ. ಯಾಕೆಂದರೆ ಈ ಬಾರಿ ಇಂದಿರಾ ತುಂಬಾ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *