ನನ್ನ ಸ್ಪರ್ಧೆ ಯಾವುದೇ ಪಕ್ಷದ ವಿರುದ್ಧ ಅಲ್ಲ, ನನಗೆ ಯಾವುದೇ ಪಕ್ಷದ ಬೆಂಬಲವಿಲ್ಲ: ದಿಂಗಾಲೇಶ್ವರಶ್ರೀ

ಹೈಲೈಟ್ಸ್‌:

  • ನನ್ನ ಸ್ಪರ್ಧೆ ಯಾವುದೇ ಪಕ್ಷದ ವಿರುದ್ಧ ಅಲ್ಲ, ಯಾವುದೇ ಪಕ್ಷದ ಬೆಂಬಲ ಇಲ್ಲ ಎಂದ ದಿಂಗಾಲೇಶ್ವರ ಶ್ರೀ
  • ದಾಸ್ಯತ್ವದಲ್ಲಿ ಬದುಕುತ್ತಿರುವ ಜನರಿಗೆ ಅದರಿಂದ ಮುಕ್ತಿ ಕೊಡುವ ಸಲುವಾಗಿ ಸ್ಪರ್ಧಿಸುತ್ತಿದ್ದೇನೆ
  • ಈ ಮೂಲಕ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸ್ವಾಮೀಜಿ

ಹುಬ್ಬಳ್ಳಿ: ನನ್ನ ಸ್ಪರ್ಧೆಗೆ ಯಾವುದೇ ಪಕ್ಷದ ಬೆಂಬಲ ಇಲ್ಲ. ಕ್ಷೇತ್ರದ ಜನರೇ ನನಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ, ಭ್ರಷ್ಟ ವ್ಯವಸ್ಥೆ ವಿರುದ್ಧ. ಮನುಷ್ಯ ತುಳಿದಾಳುವ ಕೆಟ್ಟ ಸಂಸ್ಕೃತಿ ವಿರುದ್ಧ ಹೋರಾಟ ಮಾಡಲು ಬಂದಿದ್ದೇನೆ. ಬಹಳಷ್ಟು ಜನರು ಅಸ್ತಿತ್ವ ಕಳೆದುಕೊಂಡು ದಾಸ್ಯತ್ವದಲ್ಲಿ ಬದುಕುತ್ತಿದ್ದಾರೆ. ಇದಕ್ಕೆ ಮುಕ್ತಿ ಕೊಡಲು ಕಣಕ್ಕಿಳಿದಿದ್ದೇನೆ ಎಂದರು.

ಜೋಶಿಯಿಂದ ಸ್ವಜನ ಪಕ್ಷಪಾತ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ತಮ್ಮನ್ನು ಬಿಟ್ಟು ಬೇರೆಯವರನ್ನು ಬೆಳೆಯಲು ಬಿಡುತ್ತಿಲ್ಲ. ಒಳ್ಳೆಯ ವಿಚಾರ ಇಟ್ಟುಕೊಂಡು ಕಣಕ್ಕೆ ಇಳಿದಿದ್ದೇನೆ. ಬಡವರಿಗೆ ಅನ್ನ, ಬಟ್ಟೆ, ನೀರು ಇಲ್ಲ. ರೈತರನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ನಾಯಕರು ಮಠಗಳತ್ತ ಗಮನ ನೀಡದೇ ಕೇವಲ ಚುನಾವಣೆಗೆ ಮಾತ್ರ ಮಠ ಹಾಗೂ ಸ್ವಾಮಿಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಮಠಾಧೀಶರು ಹಾಗೂ ಭಕ್ತರು ಅವರ ಕುತಂತ್ರಕ್ಕೆ ಬಲಿಯಾದಲ್ಲಿ ಮುಂದಿನ ಭವಿಷ್ಯ ಕಠಿಣವಾಗಿರಲಿದೆ ಎಂದು ಎಚ್ಚರಿಸಿದರು.

ಅಧಿಕಾರ ಬಂದ ಸಂದರ್ಭದಲ್ಲಿ ಅಧಿಕಾರ, ಹಣ ಹಾಗೂ ಅಹಂ ಭಾವ ತಾಳಿದಲ್ಲಿ ಆಗ ಮತದಾರರು ಅಂಕುಶ ಹಾಕುತ್ತಾರೆ ಎಂಬುದು ಅವರಿಗೆ ತಿಳಿಯಬೇಕು. ಧಾರವಾಡ ಎಂಪಿಯ ಗುಣ ಮತ್ತು ಲಿಂಗಾಯತ ವಿರೋಧಿ ಗುಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಾಗಿಲ್ಲ. ಅದನ್ನು ತಿಳಿಸುವ ಪ್ರಯತ್ನ ಯಾರೂ ಮಾಡಿಲ್ಲ. ರೈತರಿಗೆ ಮಹದಾಯಿ ಯೋಜನೆ ಜಾರಿ ಮಾಡದೇ, ರೈತ ವಿರೋಧಿ ನಾಯಕರಾಗಿದ್ದಾರೆ.

ಜೋಶಿ ಮೂಲೆಗುಂಪಾಗ್ತಾರೆ

ಈ ನಾಡಿನಲ್ಲಿ ರೈತರು, ಬಹು ಸಂಖ್ಯಾತರು, ವ್ಯಾಪಾರಿಗಳು, ಮಹಿಳೆಯರು ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಧಾರವಾಡ ಜನತೆ 20 ವರ್ಷ ಅವಕಾಶ ನೀಡಿದ್ದರೂ ಯಾವುದೇ ಕೆಲಸ ಮಾಡಿಲ್ಲ. ಬರುವ ದಿನದಲ್ಲಿ ಜೋಶಿ ಮೂಲೆ ಗುಂಪು ಆಗುತ್ತಾರೆ. ಧಾರವಾಡ ಜಿಲ್ಲೆಗೆ ಏನನ್ನೂ ಮಾಡಿಲ್ಲ ಎಂದು ದೂರಿದರು.

ನಾವು ಹಿಂದೆ ಮಠಕ್ಕೆ ಭಿಕ್ಷೆ ಕೇಳುತ್ತಿದ್ದೆವು. ಈಗ ಮತ ಭಿಕ್ಷೆ ಬೇಡುತ್ತಿದ್ದೇವೆ. ನಮಗೆ ಮತ ಭಿಕ್ಷೆ ನೀಡಿದಲ್ಲಿ ನಾನು ಜನರ ಸೇವೆ ಮಾಡುತ್ತೇನೆ. ನಾನು ಮಠಾಧೀಶನಾದ ಕಾರಣಕ್ಕೆ ಯಾವುದೇ ಆಸೆ, ಆಕಾಂಕ್ಷೆ ಇಲ್ಲ. ನಾನು ಬಡವರು, ರೈತರು, ನೊಂದವರ ಪರವಾಗಿ ಸೇವೆ ಮಾಡುತ್ತೇನೆ. ಮತದಾರರಿಗೆ ಪಕ್ಷ ಹಾಗೂ ಹೈಕಮಾಂಡ್ ಅನಿವಾರ್ಯವಲ್ಲ. ಮತದಾರರು ಪಕ್ಷಕ್ಕೆ ಅನಿವಾರ್ಯ ಇರುತ್ತಾರೆ ಎಂದು ತಿಳಿಸಿದರು.

ಪ್ರಹ್ಲಾದ ಜೋಶಿಗೆ ಹಿಂದೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಾಗ ಪಕ್ಷವನ್ನು ಮೂಲೆ ಗುಂಪು ಮಾಡಿದ್ದಾರೆ. ಈಗ ಜಿಲ್ಲೆಯನ್ನು ಮೂಲೆ ಗುಂಪು ಮಾಡಿದ್ದು, ಅವರನ್ನು ಈ ಬಾರಿ ಮನೆಗೆ ಕಳಿಸುವ ಜವಾಬ್ದಾರಿ ಮತದಾರರ ಮೇಲಿದೆ. ಅವರ ದುರಾಡಳಿತದಿಂದಾಗಿ ಜೋಶಿ ವಿರುದ್ಧ ಚುನಾವಣೆಗೆ ಸ್ಪರ್ಧಿಸುವ ವಿಚಾರ, ಸಲಹೆ ಭಕ್ತರಿಂದ ಬಂದಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆ ಇಲ್ಲ. 20 ವರ್ಷ ಜೋಶಿ ಅವರನ್ನು ಪಲ್ಲಕ್ಕಿ ಮೇಲೆ ಕುಳ್ಳಿರಿಸಿ ಮೆರೆಸಿದವರನ್ನು ಮೂಲೆ ಗುಂಪು ಮಾಡಿದ್ದಾರೆ. ಏ. 18 ರಂದು ನಾಮಪತ್ರ ಸಲ್ಲಿಸುವ ದಿನ ಧಾರವಾಡದಲ್ಲಿ ಇತಿಹಾಸ ಸೃಷ್ಟಿಸುವಂತಾಗಬೇಕು ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *