Money Seized: ಬೆಂಗಳೂರಿನಲ್ಲಿ ಸಿಕ್ತು ಕೋಟಿ ಕೋಟಿ ಹಣ; ಎಣಿಕೆಗಾಗಿ ಕೌಟಿಂಗ್ ಮಷೀನ್ ತಂದ ಅಧಿಕಾರಿಗಳು!

ಇತ್ತೀಚೆಗೆ ಬಳ್ಳಾರಿಯಲ್ಲಿ ಐದು ಕೋಟಿಗೂ ಅಧಿಕ ಹಣ, ಗಟ್ಟಿ ಚಿನ್ನ, ಮೂಟೆಗಟ್ಟಲೇ ಬೆಳ್ಳಿ ಆಭರಣಗಳು ಪತ್ತೆಯಾಗಿದ್ದವು. ಇಂದು ರಾಜಧಾನಿ ಬೆಂಗಳೂರಿನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ. ಇಂದು ಜಯನಗರದ ನಾಲ್ಕನೇ ಬ್ಲಾಕ್ನಲ್ಲಿ ಎರಡು ಕಾರ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಂದು ಕಾರ್ನಲ್ಲಿ ದೊಡ್ಡ ಮೊತ್ತದ ಹಣ ಸಿಕ್ಕಿರೋ ಮಾಹಿತಿ ಲಭ್ಯವಾಗಿದೆ. ಈ ಹಣ ಮಾಜಿ ಕಾರ್ಪೋರೇಟರ್ಗೆ ಸೇರಿದ್ದು ಎನ್ನಲಾಗುತ್ತಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.

ಒಂದು ಮರ್ಸಿಡೀಸ್ ಬೆನ್ಜ್ ಮತ್ತು ಮತ್ತೊಂದು ವೋಕ್ಸ್ ವ್ಯಾಗನ್ ಕಾರ್ನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನ ನಂಬರ್ ಆಧರಿಸಿ ವಾಹನಗಳ ಮಾಲೀಕರಿಗೆ ನೋಟಿಸ್ ಸಹ ನೀಡಲಾಗಿದೆ. ಕಾರ್ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಸ್ಥಳದಿಂದಲೇ ಟೋಯಿಂಗ್ ಮಾಡಲಾಗಿದೆ.

ಒಟ್ಟು ಮೂರು ಕಾರಿನಲ್ಲಿ ಬಂದಿದ್ರು ಅನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಫಾರ್ಚೂನರ್ ಕಾರ್ನಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ಮತ್ತೋರ್ವ ದ್ವಿಚಕ್ರ ವಾಹನದಲ್ಲಿ ಬಂದಿರುವ ಬಗ್ಗೆಯೂ ತಿಳಿದು ಬಂದಿದೆ.

ಇತ್ತ ವಶಕ್ಕೆ ಪಡೆದುಕೊಂಡಿರುವ ಹಣವನ್ನ ಪೊಲೀಸ್ ಠಾಣೆಗೆ ತರಲಾಗಿದೆ. ಹಣವಿರುವ ಮೂರು ಬ್ಯಾಗ್ಗಳನ್ನು ಠಾಣೆಗೆ ತರಲಾಗಿದ್ದು, ಪೊಲೀಸರು ಎಣಿಕೆಗಾಗಿ ಎರಡು ಕೌಂಟಿಂಗ್ ಮಷೀನ್ ಸಹ ತೆಗೆದುಕೊಂಡು ಬಂದಿದ್ದಾರೆ.

ಜಯನಗರಲ್ಲಿ ಕೋಟಿ ಕೋಟಿ ಹಣ ಜಫ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಮೌನೀಶ್ ಮುದ್ಗಿಲ್ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ನಮಗೆ ಒಂದು ಕರೆ ಬಂದಿತ್ತು. ನಮ್ಮ ಅಧಿಕಾರಿ ವಿನೋದ ಪ್ರಿಯಾ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ವಾಹನದಲ್ಲಿ ಹಣ ಇರಬಹುದು ಎಂಬ ಮಾಹಿತಿ ಇತ್ತು. ತಕ್ಷಣ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಬಂದಿದ್ದೆ ಎಂದು ಹೇಳಿದರು.

ಕರೆ ಬಂದ ಮೂರು ನಿಮಿಷಕ್ಕೆ ಸ್ಪಾಟ್ ಗೆ ಬಂದಿದ್ದೀವಿ. ಸ್ಕೂಟರ್ ನಿಂದ ಫಾರ್ಚೂನರ್ ಗೆ ಹಣ ಶಿಫ್ಟ್ ಮಾಡ್ತಿದ್ದರು. ಫಾರ್ಚೂನರ್ನಲ್ಲಿ ಒಟ್ಟು ಐದು ಜನ ಇದ್ರು. ಮೇಡಂ ಸಿಂಗಲ್ ಆಗಿ ಇದ್ರು ಅವರನ್ನ ಪ್ರಶ್ನೆ ಮಾಡಿದ್ದಾರೆ. ತಕ್ಷಣ ದ್ವಿಚಕ್ರ ವಾಹನದಲ್ಲಿದ್ದ ಒಂದು ಬ್ಯಾಗ್ ಜಫ್ತಿ ಮಾಡಿದರು ಎಂದು ಹೇಳಿದರು.

ಈಗ ಹಣದ ಕೌಟಿಂಗ್ ನಡೆಯುತ್ತಿದೆ. ಬ್ಯಾಗ್ನಲ್ಲಿ ಒಂದು ಕೋಟಿಗೂ ಅಧಿಕ ಹಣ ಇದೆ. ಪರಾರಿಯಾಗಿರುವ ಫಾರ್ಚೂನರ್ ನಂಬರ್ ಸಹ ನೋಟ್ ಮಾಡಲಾಗಿದೆ. ಕಾರ್ ಮೂವ್ ಆದ್ರೂ ಮೇಡಂ ನಂಬರ್ ನೋಟ್ ಮಾಡಿದ್ದಾರೆ. ಲೇಡಿ ಸಿಂಗಮ್ ತರ ನಮ್ಮ ಅಧಿಕಾರಿ ಕಾರ್ಯಾಚರಣೆ ಮಾಡಿದ್ದಾರೆ ಎಂದು ನಡೆದ ಘಟನೆಯನ್ನು ಮೌನೀಶ್ ಮುದ್ಗಿಲ್ ವಿವರಿಸಿದರು.

ದುಡ್ಡು ಸಾಗಿಸಲಾಗುತ್ತಿದೆ ಅಂತ ಮಾಹಿತಿ ಬಂತು, ಆ ವೇಳೆ ನಾನು ಇಲ್ಲಿಯೇ ರೌಂಡ್ಸ್ ನಲ್ಲಿ ಇದ್ದೆ. ಆ ವೇಳೆ ನಾನು ಒಬ್ಬಳೆ ಇದ್ದೆ. ಸ್ಥಳಕ್ಕೆ ಬಂದಾಗ ಬ್ಯಾಗ್ ತೆಗೆದುಕೊಂಡು ಇನ್ನೊಂದು ಕಾರ್ ಗೆ ಹಾಕುತ್ತಿದ್ರು. ಬ್ಯಾಗ್ ತೋರಿಸಿ ಎಂದಾಗ ಅದರಲ್ಲಿ ಮಾವಿನ ಹಣ್ಣಿದೆ ಅಂತ ಹೇಳಿದ್ರು. ತೋರಿಸಿ ಎಂದಾಗ ಅಲ್ಲಿಂದ ಫಾರ್ಚೂನರ್ ಕಾರಿನಲ್ಲಿ ಹೊರಟು ಹೋದ್ರು. ನಂತರ ಸ್ಥಳಕ್ಕೆ ಸರ್ ಮತ್ತು ಅಧಿಕಾರಿಗಳು ಬಂದು ಹಣವನ್ನು ಸೀಜ್ ಮಾಡಿದ್ರು ಎಂದು ಚುನಾವಣಾ ಅಧಿಕಾರಿ ನಿಖಿತ ಹೇಳಿಕೆ ನೀಡಿದ್ದಾರೆ.