Lok Sabha Election: ನಿಲ್ಲದ ಎಚ್‌ಡಿಕೆ-ಡಿಕೆಶಿ ವಾಕ್ಸಮರ, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿಸಿಎಂ

ಬೆಳಗಾವಿ: ಗ್ಯಾರಂಟಿ ಯೋಜನೆಯಿಂದ (Guarantee Shceme) ಹಳ್ಳಿಯ ಹೆಣ್ಮಕ್ಕಳು ಸ್ಬಲ್ಪ ದಾರಿ ತಪ್ಪುತ್ತಿದ್ದಾರೆ ಎಂಬ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ್ದರು. ಈ ವೇಳೆ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಡಿಕೆಶಿ (DK Shivakumar) ಕೂಡ ಎಚ್‌ಡಿಕೆ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.

ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪಿಕ್ ಪಾಕೆಟ್ ಮಾಡಿ ಅವನಿಗೆ (ಕುಮಾರಸ್ವಾಮಿ) ರೂಢಿ ಅಲ್ವಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಅಪ್ಪ ಮಗನ ಬಗ್ಗೆ ಒಂದು ವರ್ಷದ ಹಿಂದೆ ಅಮಿತ್ ಶಾ, ಬಿಜೆಪಿಯವರು ಏನ್ ಮಾತಾನಾಡಿದ್ರು ಎಂದು ಪ್ರಶ್ನಿಸಿದ ಡಿಕೆಶಿ, ಯಾರು ಚೂರಿ ಹಾಕಿ ಇಳಿಸಿದ್ರೋ ಅವರ ಜೊತೆಗೆ ನೆಂಟಸ್ಥನ ಮಾಡಿಕೊಂಡಿದ್ದಾರೆ. ಇವತ್ತು ಇಬ್ಬರು ತಬ್ಬಿಕೊಂಡಿದ್ದಾರೆ. ಮರ್ಡರ್ ಮಾಡಿ ವಿಷಾದ ಅಂತ ಹೇಳಿದ್ರೆ ಆಗುತ್ತಾ ಎಂದು ಪ್ರಶ್ನಿಸಿದರು.

ಮಿಸ್ಟರ್ ಎಚ್‌ಡಿ ಕುಮಾರಸ್ವಾಮಿ. ನೀವು ಚುನಾವಣೆಯಲ್ಲಿ ಗೆಲ್ಲಲ್ಲ ಎಂದ ಡಿಸಿಎಂ ಡಿ ಕೆ ಶಿವಕುಮಾರ್, ಹೆದರಿ ಪಕ್ಕದ ಕ್ಷೇತ್ರಕ್ಕೆ ಹೋಗಿದ್ದೀರಿ. ನೀನು ಮೋಸಗಾರ, ಸುಳ್ಳುಗಾರ. 48 ಎಕರೆ ಇದೆಯೋ ಒಂದು ಸಾವಿರ ಇದೆಯೋ ಎಲ್ಲದರ ಬಗ್ಗೆ ‌ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಎಂದರಲ್ಲದೇ, ಬಾರಯ್ಯ ಎಂದು ವಿಧಾನಸಭೆಯಲ್ಲಿ ಕರೆದೆ‌. ಬರಲಿಲ್ಲ ಹೋಗಿ ಬಿಟ್ಟ ಎಂದರು.

ಹೆಣ್ಣು ಕುಟುಂಬದ ಕಣ್ಣು. ಕುಟುಂಬಕ್ಕೆ ಒಳ್ಳೆಯದಾಗಿಲಿ ಎಂದು ಎರಡು ಸಾವಿರ ಹಣ ಕೊಟ್ಟಿದ್ದೀವಿ ಎಂದ ಡಿಸಿಎಂ ಡಿಕೆ ಶಿವಕುಮಾರ್, ಹೆಣ್ಣುಮಕ್ಕಳು ಏನ್ ದಡ್ಡರಾ? ಮಹಿಳೆಯರಿಗೆ ಸ್ವಾಭಿಮಾನದ ಪ್ರಶ್ನೆ ಇದು. ಬದುಕಿನಲ್ಲಿ ಶಕ್ತಿ ಕೊಡಲು ಕೊಟ್ಟ ಕಾರ್ಯಕ್ರಮ ಇದು. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಹಿಳೆಯರು ಹೋರಾಟ ಮಾಡಲೇಬೇಕು. ಪ್ರತಿಯೊಂದು ಮಹಿಳಾ ಸಂಘಟನೆಗಳು ಪಕ್ಷ ಭೇದ ಮರೆತು ಸ್ವಾಭಿಮಾನ ಉಳಿಸಿಕೊಳ್ಳಬೇಕು. ಪ್ರತಿಭಟನೆ ಮಾಡಲು ನಾನು ಕರೆ ಕೊಡುತ್ತೇನೆ. ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಿ ಖಂಡಿಸಬೇಕು. ಹೆಣ್ಣುಮಕ್ಕಳ ಪರ ನಾವು ನಿಲ್ಲಬೇಕು ಎಂದರು.

ಎಚ್‌ಡಿ ಕುಮಾರಸ್ವಾಮಿ ಹೆಣ್ಣುಮಕ್ಕಳಿಗೆ ಕಪ್ಪು ಚುಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಡಿಕೆಶಿ, 1.2 ಕೋಟಿ ಮಹಿಳೆಯರು ಪ್ರತಿಭಟನೆ ಮಾಡಿ, ತಕ್ಕ ಪಾಠ ಕಲಿಸಿ. ವಿಷಾದ, ತಪ್ಪಾಯಿತು ಎನ್ನುವ ಡ್ರಾಮಾ ಬೇಡ. ಬಿಜೆಪಿ ಫಲಾನುಭವಿಗಳು ಗ್ಯಾರಂಟಿ ವಾಪಸ್ ಕೊಡಿಸುವ ಕರೆ ಕೊಡಲಿ‌. ಎಚ್ ಡಿ ಕುಮಾರಸ್ವಾಮಿ ಮಾತು ಕೇಳಿ ಐದು ಜನರು ಗ್ಯಾರಂಟಿ ಬಿಡಲ್ಲ ಎಂದರು.

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್ ವಿರುದ್ಧವೂ ಹರಿಹಾಯ್ದ ಡಿಕೆಶಿ, ಸಂಜಯ ಪಾಟೀಲ್‌ಗೆ ಈಗ ಉತ್ತರ ಸಿಕ್ಕಿದೆ. ಇಂತಹ ನೂರು ಮಾಜಿ ಶಾಸಕರನ್ನು ಅರಿಗಿಸಿಕೊಳ್ಳುವ ಶಕ್ತಿ ನಮ್ಮ ಮಂತ್ರಿಗೆ ಇದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪರ ಬ್ಯಾಟ್ ಬೀಸಿದರು.

ಇನ್ನು, ಧಾರವಾಡದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಲ್ಲ ಎಂದ ಡಿಕೆಶಿ, ಸಸರಳತೆ ಇರುವ ವ್ಯಕ್ತಿಗೆ ಸೀಟು ಕೊಟ್ಟಿದ್ದೇವೆ, ನಾವು ಗೆಲ್ಲುತ್ತೇವೆ. ಅವರ ಆಶೀರ್ವಾದ ನಮಗೆ ಇರಲಿ, ಈಗ ಬದಲಾವಣೆ ಇಲ್ಲ ಎಂದರು. ರಮೇಶ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ಲೇವಲ್‌ಗೆ ಯಾರಾದ್ರೂ ಮಾತನಾಡಿದ್ರೆ ಮಾತನಾಡುತ್ತೇನೆ. ನಾನು ನನಗೆ ಮ್ಯಾಚ್ ಆಗುವವರ ಹೇಳಿಕೆಗೆ ಮಾತ್ರ ಉತ್ತರಿಸ್ತೀನಿ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿ ಹೇಳಿಕೆಯನ್ನು ತಿರಸ್ಕರಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *