Lok Sabha Election: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ನಟ ದರ್ಶನ್, ಎಚ್ಡಿ ಕುಮಾರಸ್ವಾಮಿ ಹೇಳಿದ್ದೇನು?
ಶಿವಮೊಗ್ಗ: ಲೋಕಸಭಾ ಚುನಾವಣೆಗೆ (Lok Sabha Election 2024) ಕೌಂಟ್ಡೌನ್ ಶುರುವಾಗಿದೆ. ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈತನ್ಮಧ್ಯೆ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ (BJP JDS Alliance) ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ರಾಘವೇಂದ್ರ ಅವರು ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ. ರಾಘವೇಂದ್ರ ಅವರು ಲೋಕಸಭಾ ಸದಸ್ಯರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮೈತ್ರಿಯ ಹೊಂದಾಣಿಕೆಯಿಂದ ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರಿಂದ ನಾಯಕ ಅವರು, ನಾಯಕ ಮಟ್ಟದಲ್ಲಿ ಈ ಹೊಂದಾಣಿಕೆ ಸುಮಧುರ ಬಾಂಧವ್ಯದಲ್ಲಿ ನಡೆಯುತ್ತಿದೆ ಎಂದರು.
ಬಿವೈ ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆಗೆ ನಾವು ಆಗಮಿಸಿದ್ದೇವೆ ಎಂದ ಕುಮಾರಸ್ವಾಮಿ, ಅವರಿಗೆ ಯಶಸ್ಸು ಸಿಗಬೇಕೆಂದು ನಮ್ಮ ಅಭಿಲಾಷೆ, ಇದು ಜನರ ಬಯಕೆ ಕೂಡ ಎಂದರು. ಬಿಜೆಪಿ ಜೆಡಿಎಸ್ ಮೈತ್ರಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳು 28 ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲುತ್ತಾರೆ ಎಂದು ಹೇಳಿದರು.
ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್ಡಿ ಕುಮಾರಸ್ವಾಮಿ, ಇದರಲ್ಲಿ ತಪ್ಪೇನಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರ ಪರ ಬೇಕಾದರೂ ಪ್ರಚಾರ ಮಾಡಬಹುದು. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಯಾರು ಯಾರ ಪರವಾಗಿಬೇಕಾದ್ರು ಪ್ರಚಾರ ಮಾಡಬಹುದು ಎಂದರು.
ಇನ್ನು, ಡಿಸಿಎಂ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಅದೆಲ್ಲಾ ನಿಧಾನವಾಗಿ ಮಾತಾನಾಡೋಣ ಬನ್ನಿ, ಆ ವಿಚಾರದ ಬಗ್ಗೆ ಆಮೇಲೆ ಚರ್ಚೆ ಮಾಡೋಣ ಎಂದರಲ್ಲದೇ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡಿ, ಪಾಪ ಪ್ರಚಾರ ಮಾಡಿದ್ದಾರೆ. ಅಧ್ಯಕ್ಷರು ಯಾರು, ಮುಖ್ಯಮಂತ್ರಿ ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಇನ್ಯಾವ ಪ್ರಚಾರ ಮಾಡಿದ್ದಾರೆಂದು ನೀವು ತಿಳಿದುಕೊಳ್ಳಿ ಎಂದರು.
ಮಂಡ್ಯದಲ್ಲಿ ದರ್ಶನ್ ಅಬ್ಬರ
ಮಂಡ್ಯ : ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ನಟ ದರ್ಶನ್ ಎಂಟ್ರಿಯಾಗಿದೆ. ಸುಮಲತಾ ಬಿಜೆಪಿಯಲ್ಲಿದ್ದರೂ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದು, ಹಲಗೂರಿಗೆ ನಟ ದರ್ಶನ್ ಬರ್ತಿದ್ದಂತೆ ಜನರು ಶಿಳ್ಳೆ ಕೇಕೆ ಹಾಕಿ ಸ್ವಾಗತಿಸಿದ್ದಾರೆ.
ನಟ ದರ್ಶನ್ಗೆ ಭಾರಿ ಗಾತ್ರದ ಗುಲಾಬಿ ಹುವಿನ ಹಾರ ಹಾಕಿ ಸ್ವಾಗತ ಮಾಡಲಾಗಿದೆ. ಈ ವೇಳೆ ಮಾತನಾಡಿದ ದರ್ಶನ್, ನಾನು ಯಾವುದೇ ಪಕ್ಷದ ಪರ ಬರಲ್ಲ, ಬರೋದೂ ಇಲ್ಲ. ನಾನೇನಿದ್ದರೂ ವ್ತಕ್ತಿಯ ಪರ. ಹಾಗಾಗಿ ಬಂದಿದ್ದೀನಿ. ಕಳೆದ ಚುನಾವಣೆಯಲ್ಲಿ ನರೇಂದ್ರಣ್ಣ ನಮಗೆ ಸಹಾಯ ಮಾಡಿದ್ದರು. ಈಗ ನಾನು ಅವರ ಕೈ ಬಲಪಡಿಸಲು ಬಂದಿದ್ದೀನಿ. ಸುಮಮ್ಮನಿಗೆ ಟಿಕೆಟ್ ಸಿಗದಿದ್ರೆ ಬಂದು ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ಬಂದಿದ್ದೇನೆ. ಸ್ಟಾರ್ ಚಂದ್ರು ಅವ್ರಿಗೆ ಮತ ನೀಡಿ ಎಂದು ಹೇಳಿದರು.
ನಂತರ ಅಲ್ಲಿ ಮಾತು ಮುಗಿಸಿ ಮುಂದಿನ ಊರಿನತ್ತ ನಟ ದರ್ಶನ್ ಹೊರಟರು. ಅವರ ಹಿಂದೆಯೇ ಅಭಿಮಾನಿಗಳು ಕೂಡ ಸಾಗಿದರು.