Hubballi: ನೇಹಾ ಕೊಲೆ ಕೇಸ್ ಮುಚ್ಚಿ ಹಾಕಲು ನಡೆದಿದ್ಯಾ ಷಡ್ಯಂತ್ರ?
ಬೆಂಗಳೂರು: ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ (Niranjan Hiremath) ಪುತ್ರಿ ನೇಹಾ ಕೊಲೆಗೆ ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದೀಗ ನೇಹಾ ಹಿರೇಮಠ್ ಕೊಲೆ (Neha Hiremath Murder Case) ಪ್ರಕರಣವನ್ನು ಮುಚ್ಚಿ ಹಾಕಲು ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಅನುಮಾನ ನೋಡಿದೆ. ಶುಕ್ರವಾರ ನ್ಯೂಸ್ 18 ಜೊತೆ ಮಾತನಾಡಿದ ನಿರಂಜನ್ ಹಿರೇಮಠ ಇಂತಹದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿ ನಾಯಕರು (BJP Leaders) ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಷ್ಟು ಮಾತ್ರವಲ್ಲದೇ ನೇಹಾ ತಂದೆ ಸಹ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಗೃಹ ಸಚಿವ ಜಿ ಪರಮೇಶ್ವರ್ (Home Minister G Parameshwar) ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನೇಹಾ ತಂದೆಯ ಆರೋಪ ಏನು?
- ಕಾಂಗ್ರೆಸ್ ಸರ್ಕಾರ ಮಗಳ ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿದೆ.
- ನನ್ನ ಮಗಳ ಮೇಲೆ ಸುಳ್ಳು ಅಪವಾದ
- ನಮ್ಮ ಕುಟುಂಬದ ತೇಜೋವಧೆ
- ಆರೋಪಿಗೆ ಬಿ ರಿಪೋರ್ಟ್ ಹಾಕಿ ಖುಲಾಸೆ ಮಾಡುವ ಹುನ್ನಾರ.
ಮೇಣದಬತ್ತಿ ಹಿಡಿದು ನೇಹಾಗೆ ಶ್ರದ್ಧಾಂಜಲಿ
ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ಎಬಿವಿಪಿಯಿಂದ ಬಿವಿಬಿ ಕಾಲೇಜು ಎದುರು ಮುಂಬತ್ತಿ ಹಿಡಿದು ಪ್ರಾರ್ಥನೆ ನಡೆಸಲಾಗಿದ್ದು, ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದು, ನೇಹಾ ಭಾವಚಿತ್ರದ ಎದುರು ಮುಂಬತ್ತಿಯೊಂದಿಗೆ ನಿಂತು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದೇ ವೇಳೆ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ.
ಏಪ್ರಿಲ್ 18ರಂದು ನೇಹಾ ಕ್ಲಾಸ್ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಎದುರಾದ ಫಯಾಜ್ ಚಾಕುವಿನಿಂದ 9 ಬಾರಿ ಇರಿದು ಕೊಲೆ ಮಾಡಿದ್ದನು. ಏಪ್ರಿಲ್ 19ರಂದು ಮರಣೋತ್ತರ ಶವಪರೀಕ್ಷೆ ನಡೆಸಿದ ಬಳಿಕ ನೇಹಾ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಆನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ಯಾರೂ ಈ ಆರೋಪಿ ಫಯಾಜ್?
ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಫಯಾಜ್ (23) ತಂದೆ ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರು. ಘಟನೆ ಬಳಿಕ ಪೋಷಕರು ಮುನವಳ್ಳಿ ತೊರೆದು ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಮೂರು ತಿಂಗಳಿನಿಂದ ತಂದೆ ಜೊತೆಯಲ್ಲಿಯೂ ಮಾತನಾಡುತ್ತಿರಲಿಲ್ಲ. ಹಣ ಬೇಕಿದ್ದಾಗ ಮಾತ್ರ ನಮಗೆ ಫೋನ್ ಮಾಡುತ್ತಿದ್ದ ಎಂದು ಬಾಬಾ ಸಾಹೇಬ್ ಹೇಳಿದ್ದಾರೆ. ಇನ್ನು ನೇಹಾ ಹತ್ಯೆ ಖಂಡಿಸಿ ಮೂರು ದಿನ ಆರೋಪಿಯ ಊರು ಮುನವಳ್ಳಿಯಲ್ಲಿ ಮೂರು ಬಂದ್ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಯ ಮನೆ ಮುಂಭಾಗ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ
ಹುಬ್ಬಳ್ಳಿಯಲ್ಲಿ ನಡೆದಿರುವ ನೇಹಾ ಹಿರೇಮಠ್ರ ಬರ್ಬರ ಕೊಲೆ ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ. ಅದೇ ರೀತಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿಯವರ ನಡೆಯೂ ಕೂಡ ಕ್ಷಮಾರ್ಹವಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಪ್ರಕರಣ ಬಿಜೆಪಿ ಕಾಣಿಸಲಿಲ್ಲವೇ?
ನೇಹಾ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ BJPಯವರಿಗೆ ಒಂದು ಪ್ರಶ್ನೆಯಿದೆ. ಕಳೆದ ಮಾರ್ಚ್ 31 ರಂದು ಪ್ರದೀಪ್ ಎಂಬಾತ ತಾನು ಪ್ರೀತಿಸುತ್ತಿದ್ದ 22 ವರ್ಷದ ರುಕ್ಸಾನಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಂದು ತುಮಕೂರಿನಲ್ಲಿ ಸುಟ್ಟು ಹಾಕಿದ್ದ. ಜೊತೆಗೆ ಆಕೆಯ ಎಳೆಯ ಮಗುವನ್ನು ಬೆಂಗಳೂರಿನ ಕೈಗಾಡಿಯೊಂದರ ಮೇಲೆ ಅನಾಥವಾಗಿ ಮಲಗಿಸಿ ಹೋಗಿದ್ದ. ಈ ಬಗ್ಗೆ BJPಯವರು ಇಲ್ಲಿಯವರೆಗೂ ಸೊಲ್ಲೆತ್ತಿಲ್ಲ. BJPಯವರ ಕಣ್ಣಿಗೆ ಈ ಪ್ರಕರಣ ಕ್ರೌರ್ಯದ ಪರಮಾವಧಿ ಎನ್ನಿಸಲಿಲ್ಲವೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಕೊಲೆ ಮಾಡಿದವರ ಧರ್ಮ ಇದಕ್ಕೆ ಕಾರಣವಲ್ಲವೇ?
ಫಯಾಜ್ ಎಂಬ ಕ್ರಿಮಿಯಿಂದ ಹತ್ಯೆಯಾದ ನೇಹಾ ಹಾಗೂ ಪ್ರದೀಪ್ ಎಂಬ ದುರುಳನಿಂದ ಕೊಲೆಯಾದ ರುಕ್ಸಾನಾ ಎರಡೂ ಹೆಣ್ಣು ಜೀವಗಳೆ. ಹತ್ಯೆಯಾದ ನೇಹಾ ಪ್ರಕರಣವನ್ನು ರಾಜಕೀಯಗೊಳಿಸಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ BJPಯವರು ರುಕ್ಸಾನಾ ಪ್ರಕರಣದಲ್ಲೂ ಇದೇ ರೀತಿ ವರ್ತಿಸಿದ್ದರೆ ಭೇಷ್ ಎನ್ನಬಹುದಿತ್ತು. ಕೊಲೆಯಾದ ರುಕ್ಸಾನಾಳ ಬಗ್ಗೆ ಚುರುಕ್ ಎನ್ನದ BJPಯವರ ಕರುಳು ನೇಹಾ ವಿಚಾರದಲ್ಲಿ ಮಾತ್ರ ಯಾಕೆ ಹೆಂಗರುಳಾಗಿದೆ.? ಕೊಲೆಯಾದವರ ಹಾಗೂ ಕೊಲೆ ಮಾಡಿದವರ ಧರ್ಮ ಇದಕ್ಕೆ ಕಾರಣವಲ್ಲವೇ ಎಂದು ಕೇಳಿದ್ದಾರೆ.
ಬಿಜೆಪಿಯವರದ್ದು ಮೊಸಳೆ ಕಣ್ಣೀರು
ನೇಹಾ ಪ್ರಕರಣದಲ್ಲಿ ಬಿಜೆಪಿಯವರದ್ದು ಮೊಸಳೆ ಕಣ್ಣೀರೆ ಹೊರತು ಬೇರೆನೂ ಅಲ್ಲ. ನೇಹಾ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನಿನ ಕುಣಿಕೆ ತೊಡಿಸಿದ್ದಾರೆ. ಇಂತಹ ಹೀನ ಕೃತ್ಯ ಎಸಗಿದ ಫಯಾಜ್ ಎಂಬ ದುರುಳನಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು. ಹೆಣದ ಮೇಲೆ ರಾಜಕೀಯ ಮಾಡುವುದಲ್ಲ. ಹೀಗೆ ರಾಜಕೀಯ ಮಾಡುವುದರಿಂದ ನೊಂದ ನೇಹಾ ಕುಟುಂಬ ಇನ್ನಷ್ಟು ದುಃಖ ಹಾಗೂ ಮಾನಸಿಕ ಆಘಾತಗೊಳಗಾಗಲಿದೆ ಎಂಬ ಕನಿಷ್ಠ ಪ್ರಜ್ಞೆ BJPಯವರಿಗಿರಬೇಕು. ತೀರಾ ವಾಕರಿಕೆ ಬರುವಂತೆ ವರ್ತಿಸಬಾರದು ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.