ಕನ್ನಡಿಗರ ಮೇಲೆ ಪ್ರಧಾನಿಗೆ ಏಕಿಷ್ಟು ದ್ವೇಷ..? : ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು,ಏ.23- ರಾಜ್ಯದ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡದೆ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಮತ ಕೇಳುವ ನೈತಿಕತೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದ ಬಳಿಯ ಮಹಾತ್ಮಗಾಂಧೀ ಪ್ರತಿಮೆ ಎದುರು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ನಿಂದ ನಡೆಸಲಾದ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ಅವರು, ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯವನ್ನು ಮತ್ತು ರೈತರನ್ನು ದ್ವೇಷಿಸುತ್ತಾರೆ. ರಾಜ್ಯಕ್ಕೆ ನ್ಯಾಯ ಕೊಡಿ ಎಂದರೆ ಸ್ಪಂದಿಸಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಿಯಾಗಿ ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 100 ವರ್ಷಗಳ ಬಳಿಕ ಭೀಕರ ಬರಪರಿಸ್ಥಿತಿ ಇದೆ. ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತವಾಗಿವೆ. ಸೆಪ್ಟೆಂಬರ್ 22 ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ 18,172 ಕೋಟಿ ರೂ.ಗಳ ಅನುದಾನ ಕೋರಿ ಎನ್ಡಿಆರ್ಎಫ್ನಡಿ ಮನವಿ ಸಲ್ಲಿಸಲಾಗಿತ್ತು. ಸಚಿವರಾದ ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ದೆಹಲಿಗೆ ಹೋಗಿ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದರು.
ಖುದ್ದು ತಾವು ದೆಹಲಿಗೆ ತೆರಳಿ ಪ್ರಧಾನಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅಮಿತ್ ಶಾ ಡಿ.23 ರಂದು ಸಭೆ ನಡೆಸಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.