ಕೇದಾರ ದರ್ಶನಕ್ಕಾಗಿ 1,700 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಔರಾದ್‌ನ ಶಿವಭಕ್ತ!

ಹೈಲೈಟ್ಸ್‌:

  • ಔರಾದ್‌ನ ಶಿವಭಕ್ತನೊಬ್ಬ ಕೇದಾರನಾಥಕ್ಕೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ
  • ಕೇದಾರ ದರ್ಶನಕ್ಕಾಗಿ 1,700 ಕಿ.ಮೀ. ಕಾಲ್ನಡಿಗೆ
  • ಔರಾದ್‌ನಿಂದ ಕೇದಾರನಾಥವರೆಗೆ ಯಾತ್ರೆ , 36 ದಿನದಲ್ಲಿ 1700 ಕಿ.ಮೀ. ಪಾದಯಾತ್ರೆ

ಬೀದರ್‌: ವಿಮಾನ, ರೈಲು, ಸಾರಿಗೆ ಬಸ್‌ ಅಥವಾ ಖಾಸಗಿ ವಾಹನಗಳಲ್ಲಿ ಯಾತ್ರೆ (ಪ್ರವಾಸ) ಮಾಡುವುದು ಸಾಮಾನ್ಯ. ಆದರೆ ಜಿಧಿಲ್ಲೆಯ ಶಿವಭಕ್ತನೊಬ್ಬ ಗಡಿ ಭಾಗದ ಔರಾದ್‌ನಿಂದ ಉತ್ತರಾಖಂಡದ ಪುಣ್ಯಕ್ಷೇತ್ರ ಕೇದಾರನಾಥ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಔರಾದ್‌ ತಾಲೂಕಿನ ಯನಗುಂದಾ ಗ್ರಾಮದ ನಿವಾಸಿ ಧನರಾಜ ಮಾದಪ್ಪ ಸಂಗೋಳಗಿ (37) ಎಂಬ ಶಿವಭಕ್ತನು ತನ್ನ ಸ್ನೇಹಿತರಾದ ಏಕಂಬಾ ಗ್ರಾಮದ ಸಿಕ್ಕಂದರ್‌ ಮತ್ತು ಸಂತೋಷ ಜತೆ ಗೂಡಿ ಔರಾದ್‌ ಪಟ್ಟಣದಿಂದ ಕೇದಾರನಾಥ ದೇವಸ್ಥಾನದವರಿಗೆ ಸುಮಾರು 1700 ಕಿ.ಮೀ. ಪಾದಯಾತ್ರೆ ಮೂಲಕ ಕ್ರಮಿಸಿ ಪರಮೇಶ್ವರನ ದರ್ಶನ ಪಡೆದು ಧನ್ಯತೆ ಮೆರೆದಿದ್ದಾರೆ.

ಕೇದಾರನಾಥನ ದರ್ಶನಕ್ಕಾಗಿ ಕಳೆದ ಏ.4 ರಂದು ಔರಾದ್‌ನಿಂದ ಕೈಗೊಂಡ ಪಾದಯಾತ್ರೆಯು ಮೇ 9 ರಂದು ಮಧ್ಯಾಹ್ನ 12 ಗಂಟೆಗೆ ತಲುಪಿದ್ದು, ರಾತ್ರಿ ವೇಳೆ ತಾತ್ಕಾಲಿಕ ನಿರ್ಮಿಸಲಾದ ಟೆಂಟ್‌ನಲ್ಲಿ ವಾಸ್ತವ್ಯ ಮಾಡಿ ‘ಚಾರ್‌ ಧಾಮ್‌’ ಯಾತ್ರೆಯ ಮೊದಲ ದಿನ ಮೇ 10ರಂದು ಬೆಳಗ್ಗೆ 6ಕ್ಕೆ ಸರತಿ ಸಾಲಿನಲ್ಲಿ ನಿಂತು ಮಧ್ಯಾಹ್ನ 12 ಗಂಟೆಗೆ ಕೈಲಾಸಪತಿಯ ದರ್ಶನ ಪಡೆದಿದ್ದಾರೆ.

ಪಾದಯಾತ್ರೆ ಕೈಗೊಂಡ ಈ ಮೂವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದ್ದು, ದಾರಿ ಮಧ್ಯೆ ತಮ್ಮನ್ನು ಭೇಟಿಯಾಗುತ್ತಿರುವವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪಾದಯಾತ್ರೆಯಲ್ಲಿ ತೊಡಗಿದ್ದಾಗ ಯಾವುದೇ ರೀತಿ ಅನಾಹುತಗಳು ಸಂಭವಿಸಿಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಮಾಡಿದ ಸಂಕಲ್ಪದೊಂದಿಗೆ ಪಾದಯಾತ್ರೆ ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಧನರಾಜ ಸಂಗೋಳಗೆ ‘ವಿಕ’ ಪ್ರತಿನಿಧಿಗೆ ಮೊಬೈಲ್‌ ಕರೆ ಮಾಡುವ ಮೂಲಕ ತಿಳಿಸಿದ್ದಾರೆ.

36 ದಿನ 1700 ಕಿ.ಮೀ.ನಡಿಗೆ!

ಏ.4 ರಂದು ಯನಗುಂದಾ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದು ಸಂಕಲ್ಪದೊಂದಿಗೆ ಚಿಕ್ಕದಾದ ಏಕೈಕ ಕೈಚೀಲದೊಂದಿಗೆ ಪಾದಯಾತ್ರೆ ಹೊರಟ ಧನರಾಜನು ತನ್ನ ಇಬ್ಬರ ಸ್ನೇಹಿತರ ಬೈಕ್‌ ಮೇಲೆ ಚೀಲ ಇಧಿಟ್ಟು ಮುನ್ನಡೆದು ಔರಾದ್‌ ಮಾರ್ಗವಾಗಿ ದೇಗಲೂರಿನ ದೇವಸ್ಥಾನವೊಂದರಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದರು. ಮೊದಲ ದಿನವೇ ಬರೋಬರಿ 50 ಕಿ.ಮೀ.ಕ್ರಮಿಸಿ ಗಮನ ಸೆಳೆದಿದ್ದರು.

ಪ್ರತಿದಿನ 3:30ಕ್ಕೆ ಎದ್ದು ಸ್ನಾನ, ಇಷ್ಟಲಿಂಗ ಪೂಜೆ ಮಾಡಿಕೊಂಡು 4ಕ್ಕೆ ಪಾದಯಾತ್ರೆ ಆರಂಭಿಸಿ 7.30ಕ್ಕೆ ಸೂಕ್ತ ಜಾಗದಲ್ಲಿ ವಿಶ್ರಾಂತಿ ಪಡೆದು ಉಪಹಾರ ಅಥವಾ ಚಹಾ ಸೇವಿಸಿ ಮತ್ತೆ ಹೊರಟು 12 ಗಂಟೆಗೆ ಊಟ ಮಾಡಿ ದಣಿಯು ಆರಿಸಿಕೊಂಡು ಮತ್ತೆ ಸಂಜೆ 4ರಿಂದ ಹೊರಟು ರಾತ್ರಿ 8 ಗಂಟೆಯವರೆಗೆ ಪಾದಯಾತ್ರೆ ನಡೆಸಿ ಬಳಿಕ ಊಟ ಮುಗಿಸಿ ಅಲ್ಲಿಯೇ ರಾತ್ರಿ ವಾಸ್ತವ್ಯ ಮಾಡುತ್ತಿದ್ದೆವು. ಹೀಗೆ ನಮ್ಮ ದಿನಚರಿ ಇತ್ತು ಎನ್ನುತ್ತಾರೆ ಧನರಾಜ.

ಪತ್ನಿ, ತಾಯಿಗೆ ತಿಳಿಸಿದೇ ಯಾತ್ರೆ

ತಾನು ಮಾಡಿದ ಸಂಕಲ್ಪಕ್ಕೆ ಕುಟುಂಬ ಸದಸ್ಯರು ಅಡ್ಡಿಯಾಗಬಹುದು ಎಂಬ ಆತಂಕದಿಂದ 37 ವಯಸ್ಸು ಆಸುಪಾಸಿನ ಯುವಕ ಧನರಾಜ ಅವರು ಧರ್ಮಪತ್ನಿ ಮತ್ತು ಹೆತ್ತವಳಿಗೂ ತಿಳಿಸದೇ ಕೇದಾರನಾಥ ತೀರ್ಥ ಯಾತ್ರೆಗೆ ಪ್ರಯಾಣ ಬೆಳೆಸಿರುವುದು ವಿಶೇಷ.

ಧನರಾಜನಿಗೆ ತಂದೆ ಇಲ್ಲ. ತಾಯಿ ಇದ್ದಾರೆ. ಪತ್ನಿ ಅಶ್ವಿನಿ, ದಾಕ್ಷಾಯಿಣಿ, ನಂದಕುಮಾರ ಎಂಬ ಇಬ್ಬರು ಮಕ್ಕಳಿದ್ದಾರೆ. ಬೀದರ್‌, ಔರಾದ್‌ ಮತ್ತು ಹೆಡಗಾಪುರದಲ್ಲಿ ಶಾಮಿಯಾನ (ಟೆಂಟ್‌ ಹೌಸ್‌) ಅಂಗಡಿ ಹೊಂದಿದ್ದಾರೆ.

ಬದ್ರಿನಾಥನತ್ತ ಹೊರಟ ಯಾತ್ರೆ

ಪವಿತ್ರ ತಾಣವಾದ ಕೇದಾರನಾಥ ದರ್ಶನ ಮುಗಿಸಿದ ಧನರಾಜ ಮತ್ತು ಆತನ ಸ್ನೇಹಿತರು ಮೇ 11 (ಶನಿವಾರ) ಖಾಸಗಿ ವಾಹನ ಮೂಲಕ ಬದ್ರಿನಾಥ ಮಂದಿರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ಹರಿದ್ವಾರಕ್ಕೆ ತೆರಳಿ ಗಂಗಾ ಆರತಿ ವೀಕ್ಷಣೆ ಮತ್ತು ದರ್ಶನ ಪಡೆದು ಮೇ 16ರಂದು ತಾಯ್ನಾಡಿಗೆ ಆಗಮಿಸಲಿದ್ದಾರೆ.

ವಿಕ ಕಳಕಳಿ

12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ದೇವಸ್ಥಾನ ಭಕ್ತರ ಪ್ರವೇಶ ಮತ್ತು ದರ್ಶನಕ್ಕೆ ಶುಕ್ರವಾರ ತೆರೆಯಲಾಗಿದೆ. ಅಲ್ಲಿಗೆ ಪ್ರಯಾಣ ಬೆಳೆಸುವ ಮುನ್ನ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದು ವಿಕ ಕಳಕಳಿ ಆಗಿದೆ.

ಪಾದಯಾತ್ರೆ ಮೂಲಕ ಕೇದಾರನಾಥ ದರ್ಶನ ಪಡೆಯಬೇಕೆಂಬ ಸಂಕಲ್ಪ ಹೊಂದಿದ್ದೆ. ಅದರಂತೆ ಏ.4ರಂದು ಸ್ನೇಹಿತರಿಬ್ಬರ ನೆರವಿನಿಂದ 36ದಿನ ಕಾಲ್ನಡಿಗೆ ಮೂಲಕ 1700 ಕಿ.ಮೀ.ಕ್ರಮಿಸಿ ಕೈಲಾಸಪತಿಯ ದರ್ಶನ ಪಡೆದಿದ್ದೇನೆ. ಬಹಳ ಖುಷಿ ಮತ್ತು ಆನಂದೋತ್ಸವ ಅನುಭವ ಆಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *