10 ವರ್ಷಗಳಿಂದ ಪ್ರೆಸ್ ಮೀಟ್ ಮಾಡದೇ ಇರುವುದಕ್ಕೆ ಕಡೆಗೂ ಕಾರಣ ನೀಡಿದ ಪ್ರಧಾನಿ ಮೋದಿ!
ಹೈಲೈಟ್ಸ್:
- ಕಳೆದ 10 ವರ್ಷಗಳಿಂದ ಸುದ್ದಿಗೋಷ್ಠಿ ನಡೆಸದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮರ್ಥನೆ.
- ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ.
- ಮಾಧ್ಯಮಗಳು ಹಾಗೂ ಪತ್ರಕರ್ತರು ಹಿಂದಿನಂತಿಲ್ಲ ಎಂದು ಹೇಳಿಕೆ.
ನವದೆಹಲಿ: ನರೇಂದ್ರ ಮೋದಿಯವರು ಕೇಂದ್ರದಲ್ಲಿ ಪ್ರಧಾನಿಯಾಗಿ 10 ವರ್ಷಗಳಾದವು. ಇಲ್ಲಿಯವರೆಗೆ ಒಂದಾದರೂ ಸುದ್ದಿಗೋಷ್ಠಿ ನಡೆಸಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಹೀಗೆ, ಸುದೀರ್ಘ 10 ವರ್ಷಗಳವರೆಗೆ ಪ್ರಧಾನಿಯಾಗಿದ್ದರೂ ಮಾಧ್ಯಮಗಳಿಗೆ ಒಮ್ಮೆಯಾದರೂ ಮುಖಾಮುಖಿಯಾಗದೇ ಇರುವಂಥ ಪ್ರಧಾನಿಯನ್ನು ನಾವೆಂದೂ ಹಿಂದೆಂದೂ ನೋಡಿರಲಿಲ್ಲ ಎಂದು ವಿಪಕ್ಷಗಳು ಸತತವಾಗಿ ಮಾಡುತ್ತಿದ್ದ ಟೀಕೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಬಾಯಿಬಿಟ್ಟಿದ್ದಾರೆ.
ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಮಾಧ್ಯಮಗಳು ಈಗ ಮೊದಲಿನಂತೆ ಪತ್ರಿಕಾ ಧರ್ಮವನ್ನು ಪಾಲಿಸುತ್ತಿಲ್ಲ. ಪ್ರತಿಯೊಬ್ಬ ಪತ್ರಕರ್ತನೂ ತನ್ನದೇ ದೃಷ್ಟಿಕೋನವನ್ನ ತನ್ನ ಪತ್ರಿಕಾ ವೃತ್ತಿಯಲ್ಲಿ ಬೆರೆಸುತ್ತಿದ್ದಾನೆ. ಅದರಿಂದಾಗಿ, ಆತನ ವಿಚಾರಗಳೇ ಆತನ ವರದಿಗಳಲ್ಲಿ ಮೇಳೈಸುತ್ತವೆಯೇ ಹೊರತು ಅನ್ಯರ ವಿಚಾರಗಳಿಗೆ ಅಲ್ಲಿ ಪ್ರಾಮುಖ್ಯತೆಯಾಗಲೀ, ಬೆಲೆಯಾಗಲೀ ಸಿಗುತ್ತಿಲ್ಲ. ಅದೇ ಕಾರಣಕ್ಕಾಗಿಯೇ. ನಿಷ್ಪಕ್ಷಪಾತ ಪತ್ರಿಕೋದ್ಯಮ ಈಗ ಇಲ್ಲ. ಹಾಗಾಗಿಯೇ ನಾನು ಯಾವುದೇ ಸುದ್ದಿಗೋಷ್ಠಿಗಳನ್ನು ನಡೆಸುತ್ತಿಲ್ಲ’’ ಎಂದು ಹೇಳಿದ್ದಾರೆ.