ನಿಮ್ಮ ಮೋದಿಗೆ ಕನ್ನಡ ಬರುತ್ತಾ? ಟ್ರೋಲ್ಗಳಿಂದ ಯಾವನ್ ಹೊಟ್ಟೆನೂ ತುಂಬಲ್ಲ : ಟ್ರೋಲರ್ಗಳಿಗೆ ಮಧು ಬಂಗಾರಪ್ಪ ತಿರುಗೇಟು
ಹೈಲೈಟ್ಸ್:
- ಟ್ರೋಲರ್ಗಳ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ
- ನಿಮ್ಮ ಮೋದಿಗೆ ಕನ್ನಡ ಬರುತ್ತಾ? ಮೊದಲು ಅದನ್ನು ತಿಳ್ಕೊಳ್ಳಿ ಎಂದ ಸಚಿವ
- ನಿಮ್ಮ ಟ್ರೋಲ್ಗಳಿಂದ ಯಾವನ್ ಹೊಟ್ಟೆನೂ ತುಂಬಲ್ಲ ಎಂದು ಕಿಡಿ
ಚಿಕ್ಕಮಗಳೂರು : ನಿಮ್ಮ ನರೇಂದ್ರ ಮೋದಿ ಅವರಿಗೆ ಕನ್ನಡ ಬರುತ್ತಾ? ಇಲ್ಲಿ ಬಂದು ಕನ್ನಡ ಮಾತಾಡ್ತಾರೆ, ತಮಿಳುನಾಡಿಗೆ ಹೋಗಿ ತಮಿಳಲ್ಲಿ ಮಾತಾಡ್ತಾರೆ. ಯಾರೋ ಬರೆದು ಕೊಟ್ಟಿದ್ದನ್ನು ಹೇಳ್ತಾರೆ, ಅದನ್ನು ತಿಳ್ಕೊಳ್ಳಿ. ನನ್ನ ಕನ್ನಡವನ್ನು ಟ್ರೋಲ್ ಮಾಡುವುದರಿಂದ ನಿಮ್ಮ ಹೊಟ್ಟೆ ಏನು ತುಂಬಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಮೂಲಕ ತಮಗೆ ಕನ್ನಡ ಬರಲ್ಲ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದರು.
ಚಿಕ್ಕಮಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಕನ್ನಡ ಓದೋದು ಸ್ವಲ್ಪ ಕಷ್ಟ. ಆದರೆ, ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತೀನಿ. ಈಗ ಏನಾದ್ರೂ ತಡವರಿಸುತ್ತಿದ್ದೇನಾ? ಟ್ರೋಲ್ ಮಾಡೋರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ಶಾಪ ಹಾಕ್ತೀನಿ ಅಂದಿದ್ದೆ, ಅನಿವಾರ್ಯವಾಗಿ ಅದನ್ನು ಮತ್ತೆ ಹೇಳಬೇಕಾಗುತ್ತದೆ ಎಂದು ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿದರು.
ನನ್ನ ಕನ್ನಡವನ್ನು ಟ್ರೋಲ್ ಮಾಡುವ ಬದಲು ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯದು ಇದೆ ಅದನ್ನು ಟ್ರೋಲ್ ಮಾಡಿ. ನಾನೇನು ನಿಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡಲ್ಲ, ನನ್ನ ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಕೇವಲ ಶಿಕ್ಷಣ ಇಲಾಖೆಯನ್ನು ನಡೆಸುತ್ತೇನೆ ಅಷ್ಟೇ. ಯಾವುದೇ ಪೋಷಕರು, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಈ ಟ್ರೋಲ್ನಿಂದ ಯಾವನ ಹೊಟ್ಟೆನೂ ತುಂಬಲ್ಲ, ಯಾರಿಗೂ ಏನು ಬರಲ್ಲ ಎಂದು ವಾಗ್ದಾಳಿ ನಡೆಸಿದರು.