ಅಂಬೇಡ್ಕರ್‌ ಇಲ್ಲದಿದ್ದರೆ ಎಸ್ಸಿ, ಎಸ್ಟಿಗೆ ನೆಹರು ಮೀಸಲು ನೀಡುತ್ತಿರಲಿಲ್ಲ: ಮೋದಿ

ಮೋತಿಹಾರಿ: ಸಂವಿಧಾನ ನಿರ್ಮಾತೃ ಬಿ.ಆರ್. ಅಂಬೇಡ್ಕರ್‌ ಇಲ್ಲದಿದ್ದರೆ, ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿಯನ್ನೇ ನೀಡುತ್ತಿರಲಿಲ್ಲ. ನೆಹರೂ ಮಾತ್ರವಲ್ಲದೇ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಕೂಡಾ ಮೀಸಲಿಗೆ ವಿರುದ್ಧವಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ‘ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮೂಲಕ ಹಿಂದುಳಿದ ವರ್ಗಗಳ ಮೀಸಲು ಕಸಿಯಲಿದೆ’ ಎಂಬ ವಿಪಕ್ಷ ಕಾಂಗ್ರೆಸ್‌ನ ಆರೋಪಕ್ಕೆ ಮೋದಿ ಈ ತಿರುಗೇಟು ನೀಡಿದ್ದಾರೆ.

ಮಹಾತ್ಮ ಗಾಂಧಿ ಅವರ ಕರ್ಮಭೂಮಿ ಪೂರ್ವ ಚಂಪಾರಣ್ಯ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಸಮಾನತೆ ದೃಷ್ಟಿಯಿಂದ ಶೋಷಿತ ವರ್ಗಗಗಳಾದ ಎಸ್‌ಸಿ-ಎಸ್‌ಟಿಗಳಿಗೆ ಸಂವಿಧಾನದಲ್ಲಿ ಮೀಸಲು ಕಲ್ಪಿಸಿದರು. ಒಂದು ವೇಳೆ ಅಂಬೇಡ್ಕರ್‌ ಇಲ್ಲದಿದ್ದರೆ ಶೋಷಿತ ವರ್ಗಕ್ಕೆ ಮೀಸಲು ನೀಡುವ ಬದಲು ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಮೀಸಲು ಕಲ್ಪಿಸುತ್ತಿದ್ದರು. ಎಸ್‌ಸಿ, ಎಸ್ಟಿಗೆ ಮೀಸಲಿಗೆ ತಾವು ವಿರೋಧ ಹೊಂದಿರುವ ವಿಷಯವನ್ನು ಸ್ವತಃ ನೆಹರೂ ಅವರೇ ಅಂದಿನ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ತಿಳಿಸಿದ್ದರು ಎಂದು ನೆಹರೂ ಬರೆದ ಪತ್ರವನ್ನು ಮೋದಿ ಓದಿ ಹೇಳಿದರು.

ಜೊತೆಗೆ ಈಗಲೂ ಸಹ ಇಂಡಿಯಾ ಕೂಟದ ನಾಯಕರು ತಮ್ಮ ಅಲ್ಪಸಂಖ್ಯಾತರ ತುಷ್ಟೀಕರಣದ ಕಾರ್ಯಸಾಧನೆಗಾಗಿ ಸಂವಿಧಾನವನ್ನೇ ಬದಲಿಸುವ ಸಂಚು ನಡೆಸುತ್ತಿದ್ದಾರೆ. ಈ ರೀತಿ ಭ್ರಷ್ಟಾಚಾರ, ತುಷ್ಟೀಕರಣ, ವೋಟ್‌ ಜಿಹಾದ್‌ನಂತಹ ಇಂಡಿ ಕೂಟದ ಪಾಪಕೃತ್ಯಗಳು ದೇಶದ ಪ್ರಗತಿಗೆ ಮಾರಕವಾಗಿವೆ’ ಎಂದು ಆರೋಪಿಸಿದರು.

ವಿಪಕ್ಷ ನಾಯಕರಿಗೆ ಚಾಟಿ:

ಇದೇ ವೇಳೆ ಪ್ರತಿಪಕ್ಷ ನಾಯಕರನ್ನು ತರಾಟೆಗೆ ತೆಗೆದುಕೊಂಡ ಮೋದಿ, ‘ಕೆಲವು ವಿಪಕ್ಷ ನಾಯಕರು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾರೆ. ಅವರಿಗೆ ಬಡವರ ಕಷ್ಟ ತಿಳಿಯದು. ಹೀಗಾಗಿ ಭಾರತದಲ್ಲಿ ಬಡವರು ತುತ್ತು ಅನ್ನಕ್ಕೆ ಕಷ್ಟ ಪಡುತ್ತಿದ್ದ ವೇಳೆ ಅವರು ಸ್ವಿಸ್‌ ಬ್ಯಾಂಕ್‌ನಲ್ಲಿ ತಮ್ಮ ಹಣ ಹೂಡುವುದರಲ್ಲಿ ನಿರತರಾಗಿದ್ದರು’ ಎಂದು ದೂರಿದರು.

 

‘ಜೊತೆಗೆ ನಾನು ವಾರಾಣಸಿಯಲ್ಲಿ ಸ್ಪರ್ಧಿಸುವ ಮೂಲಕ ನನ್ನ ಗೋರಿಯನ್ನು ನಾನೇ ತೋಡಿಕೊಳ್ಳುತ್ತಿರುವುದಾಗಿ ತಿಳಿಸುತ್ತಾರೆ. ಈ ಮೂಲಕ ಸನಾತನ ಧರ್ಮಕ್ಕೆ ಅವಮಾನ ಮಾಡಿದ ಅವರಿಗೆ ಬಡವರ ಏಳಿಗೆಗಾಗಿ ನಾನು ಕಷ್ಟ ಪಡುತ್ತಿರುವುದು ಕಣ್ಣಿಗೆ ಕಾಣುವುದಿಲ್ಲ. ಮೊದಲ 10 ವರ್ಷಗಳನ್ನು ನಾನು ಹಿಂದಿನ ಸರ್ಕಾರದ ಹುಳುಕುಗಳನ್ನು ಸರಿಪಡಿಸಲು ಬಳಸಿದ್ದು, ಮುಂದಿನ ಅವಧಿಯಲ್ಲಿ ಅಭಿವೃದ್ಧಿಯ ತಿ ಮತ್ತಷ್ಟು ಹೆಚ್ಚಲಿದೆ’ ಎಂದು ವಾಗ್ದಾನ ನೀಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *