ಇಂಡಿಯಾ ಕೂಟ ಗೆದ್ದರೆ ಅಗ್ನಿವೀರ ಕಸದ ಬುಟ್ಟಿಗೆ: ರಾಹುಲ್ ಗಾಂಧಿ

ಮಹೇಂದ್ರಗಢ (ಹರ್ಯಾಣ): ‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸೈನಿಕರನ್ನು ಕಾರ್ಮಿಕರನ್ನಾಗಿ ಪರಿವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್‌ ಯೋಜನೆಯನ್ನು ತೆಗೆದು ಕಸದ ಬುಟ್ಟಿಗೆ ಎಸೆಯುತ್ತೇವೆ’ ಎಂದು ಹೇಳಿದ್ದಾರೆ.

ಹರ್ಯಾಣದಲ್ಲಿ ತಮ್ಮ ಮೊದಲ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ‘ನಮ್ಮ ದೇಶದ ಯುವಕರ ಡಿಎನ್‌ಎಯಲ್ಲಿ ದೇಶಭಕ್ತಿಯಿದೆ. ಭಾರತದ ಗಡಿಗಳು, ದೇಶದ ಯುವಕರಿಂದ ಸುರಕ್ಷಿತವಾಗಿದೆ’ ಎಂದರು.

 

ಈ ವೇಳೆ ಅಗ್ನಿವೀರ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಹುತಾತ್ಮರಲ್ಲಿ ಎರಡು ವಿಧ. ಒಂದು ಸಾಮಾನ್ಯ ಯೋಧ ಮತ್ತು ಅಧಿಕಾರಿ. ಅಧಿಕಾರಿಗಳಿಗೆ ಪಿಂಚಣಿ, ‘ಹುತಾತ್ಮ’ ಪಟ್ಟ ಸಿಗುವುದು ಸೇರಿದಂತೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಆದರೆ ಅಗ್ನಿವೀರ್‌ನಲ್ಲಿ ಆಯ್ಕೆಯಾದ ಯೋಧನಿಗೆ ಪಿಂಚಣಿ ಇಲ್ಲ, ಹುತಾತ್ಮ ಸ್ಥಾನವೂ ಇಲ್ಲ’ ಎಂದು ಕಿಡಿಕಾರಿದರು.

ಆದ್ದರಿಂದ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಈ ಅಗ್ನಿವೀರ್‌ ಯೋಜನೆಯನ್ನು ತೆಗೆದುಹಾಕಿ ಹಳೆ ನೇಮಕಾತಿ ವಿಧಾನವನ್ನೇ ಮರುಜಾರಿಗೆ ಮಾಡುತ್ತೇವೆ ಎಂದು ಹೇಳಿದರು.

 

ಅಗ್ನಿವೀರ ಯೋಜನೆಯಡಿ ಯೋಧರನ್ನು ಕೇವಲ 4 ವರ್ಷದ ಮಟ್ಟಿಗೆ ನೇಮಕ ಮಾಡಿಕೊಂಡು ನಂತರ ನಿರ್ದಿಷ್ಟ ಪ್ರಮಾಣದ ಹಣ ಕೊಟ್ಟು ನಿವೃತ್ತಿ ಮಾಡಲಾಗುತ್ತದೆ. ಇದೇ ವೇಳೆ, ಬಿಜೆಪಿ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸದೇ, ಅವರಿಗೆ ಬೇಕಾದ ಕೆಲ ಶ್ರೀಮಂತರ 16 ಲಕ್ಷ ಕೋಟಿ ರು. ಸಾಲವನ್ನು ಮನ್ನಾ ಮಾಡಿದೆ ಎಂದು ರಾಹುಲ್‌ ಆರೋಪಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *