ಬೆಂಗಳೂರು ರೇವ್ ಪಾರ್ಟಿ: ಡ್ರಗ್ ಸೇವನೆ ಮಾಡಿದ ತೆಲಗು ನಟಿ ಬಂಧಿಸದಂತೆ ಸಿಸಿಬಿ ಪೊಲೀಸರ ಮೇಲೆ ರಾಜಕಾರಣಿಗಳಿಂದ ಒತ್ತಡ
ಹೈಲೈಟ್ಸ್:
- ರೇವ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾ ಅಲಿಯಾಸ್ ಕೃಷ್ಣವೇಣಿಗೆ ನೋಟಿಸ್ ಜಾರಿ.
- ನಟಿ ಡ್ರಗ್ಸ್ ಸೇವಿಸಿದ್ದ ಸಂಗತಿ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
- ಆಂಧ್ರಪ್ರದೇಶದ ಹಲವು ಪ್ರಭಾವಿ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಹೇಮಾ ಅವರನ್ನು ಬಂಧಿಸದಂತೆ ಒತ್ತಡ.
ಬೆಂಗಳೂರು: ರೇವ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾ ಅಲಿಯಾಸ್ ಕೃಷ್ಣವೇಣಿ ಅವರಿಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಅವರನ್ನು ಬಂಧಿಸದಂತೆ ಆಂಧ್ರಪ್ರದೇಶದ ರಾಜಕಾರಣಿಗಳಿಂದ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ಬಂದಿದೆ.
ರಾಜಧಾನಿಯ ಹೊರವಲಯದ ಜಿ.ಆರ್.ಫಾರ್ಮ್ ಹೌಸ್ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ಹಾಗೂ ಇತರರು ಡ್ರಗ್ಸ್ ಸೇವಿಸಿದ್ದ ಸಂಗತಿ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ, ಸಿಸಿಬಿ ಪೊಲೀಸರು ಹೇಮಾ ಸೇರಿದಂತೆ ಎಂಟು ಮಂದಿಗೆ ಮೇ 27 ರಂದು ವಿಚಾರಣೆಗೆ ಬರಬೇಕೆಂದು ನೋಟಿಸ್ ಜಾರಿ ಮಾಡಿದ್ದರು.
ರಾಜಕಾರಣಿಗಳಿಂದ ನಿರಂತರ ಕರೆ
ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಹಲವು ಪ್ರಭಾವಿ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಹೇಮಾ ಅವರನ್ನು ಬಂಧಿಸದಂತೆ ಒತ್ತಡ ಹಾಕಿದ್ದಾರೆ. ಹೇಮಾ ತಮ್ಮ ಪ್ರಭಾವ ಬಳಸಿ ರಾಜಕಾರಣಿಗಳಿಂದ ನಿರಂತರವಾಗಿ ಕರೆ ಮಾಡಿಸುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ರೇವ್ ಪಾರ್ಟಿ ಸಂಬಂಧ ಎಲ್ಲಾಆಯಾಮಗಳಲ್ಲೂತನಿಖೆ ನಡೆಸಲಾಗುತ್ತಿದೆ. ಡ್ರಗ್ ಪೆಡ್ಲರ್ ಸಿದ್ದಿಕ್ ಮತ್ತು ನಾಗಬಾಬುನಿಂದ ಡ್ರಗ್ಸ್ ಖರೀದಿಸಿರುವುದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳು ಸಿಕ್ಕಿವೆ. ಕೆಲವು ಪೆಡ್ಲರ್ಗಳ ಮೊಬೈಲ್ಗೆ ವಾಟ್ಸಾಪ್ ಸಂದೇಶ ಕಳುಹಿಸಿ ಡ್ರಗ್ಸ್ ತರಿಸಿಕೊಳ್ಳಲಾಗಿತ್ತು. ಪಾರ್ಟಿಯಲ್ಲಿಎಂಡಿಎಂಎ, ಕೊಕೇನ್, ಗಾಂಜಾ, ಹೈಡ್ರೋ ಗಾಂಜಾ, ಎಕ್ಸ್ಟೆಸಿ ಪಿಲ್ಸ್ ಸೇರಿದಂತೆ ಹಲವು ಮಾದರಿಯ ಡ್ರಗ್ಸ್ ಸೇವನೆ ಮಾಡಿರುವುದು ಗೊತ್ತಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪಾರ್ಟಿಗೆ 50 ಲಕ್ಷ ರೂ. ಖರ್ಚು
ಹೈದರಾಬಾದ್ನ ವಾಸು ಎಂಬ ವ್ಯಕ್ತಿಯ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಿರುವ ಮಾಹಿತಿಯಿದೆ. ರೇವ್ ಪಾರ್ಟಿಯಲ್ಲಿ73 ಪುರುಷರು ಮತ್ತು 30 ಮಂದಿ ಮಹಿಳೆಯರು ಭಾಗಿಯಾಗಿದ್ದರು. ಇವರೆಲ್ಲರ ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಬೆಟ್ಟಿಂಗ್ ದಂಧೆ
ಪಾರ್ಟಿಯಲ್ಲಿ ಡ್ರಗ್ಸ್ ಸೇವನೆಯಷ್ಟೇ ಆಗಿಲ್ಲ. ಬೆಟ್ಟಿಂಗ್ ಮತ್ತು ಸೆಕ್ಸ್ ದಂಧೆ ಸಹ ನಡೆಯುತ್ತಿತ್ತು ಎಂದು ಸಿಸಿಬಿ ಮೂಲಗಳು ಹೇಳಿವೆ. ಆಂಧ್ರಪ್ರದೇಶ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ, ಐಪಿಎಲ್ ಕ್ರಿಕೆಟ್ ಮೇಲೆ ಬೆಟ್ಟಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿಗಳ ಏಳು ಬ್ಯಾಂಕ್ ಖಾತೆಗಳಲ್ಲಿದ್ದ 86 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.