50 ಸಾವಿರ ರೂ ವೆಚ್ಚದಲ್ಲಿ ಮಳೆ ನೀರು ಕೊಯ್ಲಿನ ವ್ಯವಸ್ಥೆ; ನೆರೆಮನೆಯ ಬೋರ್ ಸಹ ರೀಚಾರ್ಜ್ ಆಯ್ತು ನೋಡಿ !
ಹೈಲೈಟ್ಸ್:
- ಮಳೆ ನೀರು ಕೊಯ್ಲು ಮಾದರಿ ಅಳವಡಿಸಿ ಯಶಸ್ವಿಯಾದ ಬೆಂಗಳೂರಿನ ಐಟಿ ಉದ್ಯೋಗಿ ನವೀನ್ ಸಂಪತ್ ಕೃಷ್ಣ
- 50 ಸಾವಿರ ರೂ ವೆಚ್ಚದಲ್ಲಿ ಮಳೆ ನೀರು ಸಂರಕ್ಷಣೆ ವಿವಿಧ ಕ್ರಮ ಅಳವಡಿಸಿ ನೀರಿನ ಸಂಗ್ರಹ ಮತ್ತು ಮರುಬಳಕೆ
- ಇದರಿಂದ ನೆರೆ ಮನೆಯವರಿಗೂ ಅನುಕೂಲವಾಗಿದ್ದು ಬೋರ್ ವೆಲ್ ನಲ್ಲಿ 180 ಅಡಿಗೆ ಉತ್ತಮ ನೀರು ದೊರಕಿದೆ
ಐಟಿ ಕಂಪನಿ ಉದ್ಯೋಗಿಯಾಗಿರುವ ನವೀನ್ ಸಂಪತ್ ಕೃಷ್ಣ ಅವರು ಸಹಕಾರ ನಗರದ ಸಿ.ಬ್ಲಾಕ್, 5ನೇ ಮುಖ್ಯ ರಸ್ತೆ, 23ನೇ ಅಡ್ಡ ರಸ್ತೆಯ ತಮ್ಮ ನಿವಾಸದಲ್ಲಿ 50 ಸಾವಿರ ರೂಪಾಯಿ ವೆಚ್ಚದಲ್ಲಿ ಮಳೆ ನೀರು ಸಂರಕ್ಷಣೆಯ ವಿವಿಧ ಕ್ರಮಗಳನ್ನು ಅಳವಡಿಸಿಕೊಂಡು ನೀರಿನ ಸಂಗ್ರಹ ಮತ್ತು ಮರು ಬಳಕೆಯ ವಿಷಯದಲ್ಲಿ ಮಾದರಿಯಾಗಿದ್ದಾರೆ. ಇದು ಅವರ ನೆರೆಮನೆಯವರಿಗೆ ಅನುಕೂಲ ಮಾಡಿದ್ದು ಬೋರ್ ವೆಲ್ ಕೊರೆಸಿದಾಗ 180 ಅಡಿಗೇ ನೀರು ದೊರಕಿದೆ!
ನವೀನ್ ಸಂಪತ್ ಕೃಷ್ಣ ಅವರು 998 ಚದರ ಅಡಿ ವಿಸ್ತೀರ್ಣದ ಮನೆಯ ಮೇಲ್ಚಾವಣಿಯಲ್ಲಿ 300 ಚದರ ಅಡಿಯನ್ನು ತಾರಸಿ ತೋಟಕ್ಕೆ ಮೀಸಲಿರಿಸಿದ್ದಾರೆ. ಉಳಿದ ಭಾಗದಲ್ಲಿ ಬಿದ್ದು ಹರಿಯುವ ನೀರನ್ನು, ಕುಡಿಯಲು ಮತ್ತು ಮನೆ ಬಳಕೆಗಾಗಿ ನೀರು ಸಂಗ್ರಹಿಸಲು ಮಾಡಿರುವ 8 ಸಾವಿರ ಲೀಟರ್ ಸಾಮರ್ಥ್ಯದ ಸಂಪಿಗೆ ಸೇರುವ ವ್ಯವಸ್ಥೆ ಮಾಡಿದ್ದಾರೆ. ತಾರಸಿ ಮೇಲೆ ಬೀಳುವ ಆರಂಭದ 10 ರಿಂದ 15 ನಿಮಿಷದ ಮಳೆ ತಾರಸಿಯನ್ನು ಸ್ವಚ್ಛಗೊಳಿಸಿ, ಪತ್ಯೇಕವಾಗಿ ಹೊರಗೆ ಬೀಳಲು ‘ಮೊದಲ ಮಳೆ ವಿಭಜಕ’ವನ್ನು ಮಾಡಿದ್ದಾರೆ.
ಗ್ರೇ ನೀರಿನ ಮರುಬಳಕೆ
ಶೌಚಕ್ಕೆ ನೀರನ್ನು ಹೊರತುಪಡಿಸಿ, ತಾರಸಿ ತೋಟದಲ್ಲಿ ಬೀಳುವ ನೀರು, ಸ್ನಾನ ಮಾಡಿದ, ಬಟ್ಟೆ, ಪಾತ್ರೆ ತೊಳೆದ ಮತ್ತು ಅಡುಗೆ ಮನೆ ಬಳಕೆ ನೀರನ್ನೂ ಸಂಸ್ಕರಣೆ ಮಾಡಿ, ಮರು ಬಳಕೆ ಮಾಡುವ ವ್ಯವಸ್ಥೆಯನ್ನೂ ಮನೆಯಲ್ಲಿಮಾಡಿದ್ದಾರೆ. ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ 300 ಲೀಟರ್ ಬೂದು ನೀರು ಸಂಗ್ರಹವಾಗಲು 2 ಅಡಿ ಅಗಲ, ಮೂರು ಅಡಿ ಆಳದ ‘ಬಾಫಲ್ ಚೇಂಬರ್’ ಸ್ಥಾಪಿಸಲಾಗಿದೆ. ಇದು ಸಂಸ್ಕರಣೆಗೊಂಡು ಇದೇ ಅಳತೆಯ ಇನ್ನೊಂದು ಸಂಪ್ ಮಾದರಿಯ ಗುಂಡಿಯಲ್ಲಿಸಂಗ್ರಹವಾಗಲಿದೆ.
ಇದಕ್ಕೆ ಮೋಟಾರ್ ಇಡಲಾಗಿದ್ದು, ತಾರಸಿಯಲ್ಲಿ ಪ್ರತ್ಯೇಕವಾಗಿ ಇಡಲಾಗಿರುವ 500 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ಗೆ ಅಗತ್ಯವಿದ್ದಾಗ ಪಂಪ್ ಮಾಡಿಕೊಳ್ಳಬಹುದು. ಈ ನೀರನ್ನು ತಾರಸಿ ತೋಟ ಮತ್ತು ಮನೆಯ ಪಕ್ಕದಲ್ಲಿನ ನರ್ಸರಿ ಗಿಡಗಳಿಗೆ ಬಳಕೆ ಮಾಡಲಾಗುತ್ತದೆ.
14 ವರ್ಷದಿಂದ ಜಲ ಸ್ವಾವಲಂಬಿ
ಮಳೆ ಕೊಯ್ಲು ವ್ಯವಸ್ಥೆ ಮಾಡಿ 14 ವರ್ಷಗಳಾಗಿದೆ. ಅಂದಿನಿಂದಲೂ ಜಲ ಸ್ವಾವಲಂಬಿಯಾಗುವ ಪ್ರಯತ್ನ ಯಶಸ್ಸಿನತ್ತ ಸಾಗಿದೆ ಎನ್ನುತ್ತಾರೆ ಸಹಕಾರ ನಗರದ ನವೀನ್ ಸಂಪತ್ ಕೃಷ್ಣ. ನಮ್ಮ ಮನೆಯಲ್ಲಿ ಕೊಳವೆಬಾವಿ ಇಲ್ಲ. ನಾವು ಮನೆಯಲ್ಲಿ ನಾಲ್ಕು ಜನರಿದ್ದೇವೆ. 8 ಸಾವಿರ ಲೀಟರ್ ಸಂಪ್ನಲ್ಲಿ ಒಂದು ಬಾರಿ ಮಳೆ ನೀರು ಸಂಗ್ರಹವಾದರೆ, 2 ವಾರದಿಂದ 1 ತಿಂಗಳು ಬರಲಿದೆ.
ಮಳೆಗಾಲದಲ್ಲಿ ತಿಂಗಳಿಗೆ 300 ರೂ ನೀರಿನ ಬಿಲ್ ಉಳಿತಾಯ ಸಹ ಮಾಡಬಹುದು. ಕುಡಿಯಲೂ ಶುದ್ಧ ಮಳೆ ನೀರನ್ನೇ ಬಳಸುತ್ತೇವೆ. ಸಂಪಿನಿಂದ ಹೆಚ್ಚುವರಿ ನೀರು ಇಂಗಲು ರಿಚಾರ್ಜ್ ವೆಲ್ ಮಾಡಿದ್ದೇವೆ. ಕೆಲದಿನಗಳ ಹಿಂದೆ ಮನೆ ಸಮೀಪದವರು ಕೊಳವೆ ಬಾವಿ ಕೊರೆಸಿದರು. 180 ಅಡಿಗೆ ನೀರು ಸಿಕ್ಕಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿರಬಹುದು ಎಂಬ ಖುಷಿಯಿದೆ ಎನ್ನುತ್ತಾರೆ.