ರೈಲು ಚಾಲಕಿಯರಲ್ಲಿ ಗರ್ಭಪಾತ ಹೆಚ್ಚಳ; ಹೆರಿಗೆ ರಜೆಯೂ ಸಿಗಲ್ಲ, ಹಗುರ ಕೆಲಸಕ್ಕೂ ನಿಯೋಜನೆ ಇಲ್ಲ

ಹೈಲೈಟ್ಸ್‌:

  • ರೈಲು ಚಾಲಕಿಯರಲ್ಲಿ ಗರ್ಭಪಾತ ಹೆಚ್ಚಳ ಎಂದು ಭಾರತೀಯ ರೈಲ್ವೆ ಲೋಕೊ ರನ್ನಿಂಗ್‌ಮೆನ್‌ ಆರ್ಗನೈಸೇಶನ್‌ ಕಳವಳ.
  • ಹೆರಿಗೆ ರಜೆಯೂ ಸಿಗಲ್ಲ, ಹಗುರ ಕೆಲಸಕ್ಕೂ ನಿಯೋಜನೆ ಇಲ್ಲ ಎಂದು ಬೇಸರ.
  • ಮಹಿಳಾ ಲೋಕೊ ಪೈಲಟ್‌ಗಳ ಅಳಲು ಕೇಳುವವರಿಲ್ಲ.

ಹೊಸದಿಲ್ಲಿ: ಕರ್ತವ್ಯನಿರತ ರೈಲು ಚಾಲಕಿ (ಲೋಕೊ ಪೈಲಟ್‌)ಯರಲ್ಲಿ ಗರ್ಭಪಾತದ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ಭಾರತೀಯ ರೈಲ್ವೆ ಲೋಕೊ ರನ್ನಿಂಗ್‌ಮೆನ್‌ ಆರ್ಗನೈಸೇಶನ್‌ನ (ಐಆರ್‌ಎಲ್‌ಆರ್‌ಒ) ಮಹಿಳಾ ಘಟಕ ಕಳವಳ ವ್ಯಕ್ತಪಡಿಸಿದೆ.

”ತಡರಾತ್ರಿ ಪಾಳಿಯಲ್ಲಿ ಕರ್ತವ್ಯನಿರತ ಮಹಿಳಾ ಲೋಕೊ ಪೈಲಟ್‌ ಅಥವಾ ಸಹಾಯಕ ಮಹಿಳಾ ಲೋಕೊ ಪೈಲಟ್‌ಗಳು, ಅಲಾರಾಂ ಚೈನ್‌ ಪುಲ್ಲಿಂಗ್‌ ಸಂದರ್ಭದಲ್ಲಿ, ಸಂಬಂಧಪಟ್ಟ ಕೋಚ್‌ಗೆ ತೆರಳಬೇಕಿದೆ. ಇಂಥ ಸಂದರ್ಭದಲ್ಲಿ ಕೋಚ್‌ನತ್ತ ಧಾವಿಸುವಾಗ ಸಮತೋಲನ ತಪ್ಪಿ ಕೆಳಗೆ ಬಿದ್ದ ಹಲವು ಪ್ರಕರಣಗಳೂ ಇವೆ. ಎಂಜಿನ್‌ಗೆ ಸಿಕ್ಕು ಪ್ರಾಣಿಗಳು ಸಾವನ್ನಪ್ಪಿದ ಸಂದರ್ಭಗಳಲ್ಲೂ ಅವುಗಳ ದೇಹವನ್ನು ಹಳಿಯಿಂದ ಬೇರ್ಪಡಿಸಲು ಮಹಿಳಾ ಎಎಲ್‌ಪಿಗಳು ಧಾವಿಸಬೇಕಿದೆ.

ವಾಸ್ತವದಲ್ಲಿ ಇವೆಲ್ಲ ಮಹಿಳೆಯರಿಗೆ ದೈಹಿಕ ಪರಿಶ್ರಮ ಮತ್ತು ಭಾವನಾತ್ಮಕವಾಗಿ ಬಾಧಿಸುವಂತಹ ಕೆಲಸಗಳಾಗಿವೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಆಗಷ್ಟೇ ಹೆರಿಗೆಯಾಗಿ ಕರ್ತವ್ಯಕ್ಕೆ ಮರಳುವ ಮಹಿಳಾ ಲೋಕೊಪೈಲಟ್‌ಗಳಿಗೆ ಸಮಸ್ಯೆಯಾಗಿದೆ,” ಎಂದು ರೈಲ್ವೆ ಮಂಡಳಿಗೆ ನೀಡಿರುವ ಮನವಿಯಲ್ಲಿ ಐಆರ್‌ಎಲ್‌ಆರ್‌ಒ ಮಹಿಳಾ ಘಟಕ ವಿವರಿಸಿದೆ.

”ಗರ್ಭಿಣಿ ಅಥವಾ ಬಾಣಂತಿಯರನ್ನು ತಾತ್ಕಾಲಿಕವಾಗಿ ಬೇರೆ ಕೆಲಸಕ್ಕೆ ನಿಯೋಜಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರೆ, ರೈಲ್ವೆ ನೀತಿಯಲ್ಲಿಇದಕ್ಕೆ ಅವಕಾಶವಿಲ್ಲಎಂದು ಅವರು ನಿರಾಕರಿಸುತ್ತಾರೆ. ಹೆರಿಗೆ ಪ್ರಯೋಜನ ಕಾಯಿದೆಯಡಿ ಉದ್ಯೋಗದಾತರು ಗರ್ಭಿಣಿಯರಿಗೆ ಪ್ರಯಾಸಕರ ಕೆಲಸ ನೀಡುವಂತಿಲ್ಲ. ಹೆರಿಗೆಗೆ ಮುನ್ನ ಮತ್ತು ಹೆರಿಗೆ ನಂತರದ ನಿರ್ದಿಷ್ಟ ಸಮಯದವರೆಗೆ ಇಂಥ ಮಹಿಳೆಯರಿಗೆ ಸ್ಟೇಷನ್‌ನಲ್ಲೇ ಸುಲಭವಾಗಿ ಮಾಡಬಹುದಾದ ಕೆಲಸ ನೀಡಬೇಕು. ಇದಕ್ಕಾಗಿ ಸೂಕ್ತ ಮಾರ್ಗಸೂಚಿ ರಚಿಸಬೇಕು,” ಎಂದು ಆಗ್ರಹಿಸಲಾಗಿದೆ.

ಕಾನೂನು ಉಲ್ಲಂಘನೆ

ಲೋಕೊ ಪೈಲಟ್‌ ಕೆಲಸ ಪ್ರಯಾಸದಾಯಕವಾಗಿದೆ ಎಂದು ರೈಲ್ವೆ ಕಾಯಿದೆಯಲ್ಲಿಯೇ ಹೇಳಲಾಗಿದೆ. ಗರ್ಭಿಣಿಯರಿಂದ ಕಷ್ಟದ ಕೆಲಸ ಮಾಡುವಂತೆ ಮಹಿಳಾ ಉದ್ಯೋಗಿಗಳನ್ನು ಕೇಳುವುದು ಹೆರಿಗೆ ಪ್ರಯೋಜನ ಕಾಯಿದೆಯ ಸೆಕ್ಷನ್‌ 4ರ ಉಲ್ಲಂಘನೆಯಾಗಿದೆ ಎನ್ನುವುದು ಗಮನಾರ್ಹ.

ಶಿಶು ಶುಶ್ರೂಷೆ ಸೌಲಭ್ಯವಿಲ್ಲ

11 ಗಂಟೆಗಳ ಚಾಲನೆ ಅವಧಿಯಲ್ಲಿಶುಶ್ರೂಷಾ ವಿರಾಮ, ಹೆರಿಗೆ ಬಳಿಕ ಮಗುವಿಗೆ 15 ತಿಂಗಳವರೆಗೆ ಶುಶ್ರೂಷೆ ಸೌಲಭ್ಯಗಳಾವೂ ಮಹಿಳಾ ಲೋಕೊಪೈಲಟ್‌ಗಳಿಗೆ ಇಲ್ಲ. ಕೆಲವೊಮ್ಮೆ ಹೊರ ರಾಜ್ಯಗಳಿಗೆ ಕರ್ತವ್ಯಕ್ಕೆ ತೆರಳಿದರೆ ಮನೆಗೆ ಹಿಂದಿರುಗಲು ಮೂರು ದಿನ ಹಿಡಿಯುತ್ತದೆ. ಇಂಥ ಸಂದರ್ಭದಲ್ಲಿಹಲವರು ಅನಿವಾರ್ಯವಾಗಿ ಗಳಿಕೆ ರಜೆ ಅಥವಾ ವೇತನ ರಹಿತ ರಜೆ ಹಾಕುತ್ತಾರೆ. ಮಾತೃತ್ವ ಪ್ರಯೋಜನ ಕಾಯಿದೆ 1961ರ ವಿಭಾಗ 4 ಮತ್ತು ಸೆಕ್ಷನ್‌ 11ರ ಉಲ್ಲಂಘನೆ ಇಲ್ಲಿ ಸ್ಪಷ್ಟವಾಗಿ ಆಗುತ್ತಿದೆ ಎಂದು ಕೇಂದ್ರ ಸರ್ಕಾರ ದ ಮುಖ್ಯ ಕಾರ್ಮಿಕ ಆಯುಕ್ತರಿಗೂ ಐಆರ್‌ಎಲ್‌ಆರ್‌ಒ ಮಹಿಳಾ ಘಟಕ ದೂರು ಸಲ್ಲಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *