ನರೇಂದ್ರ ಮೋದಿ ವರ್ಚಸ್ಸು ಕುಗ್ಗಿದೆ, ಈ ಭಾರಿ ಪ್ರಬಲ ಪ್ರತಿಪಕ್ಷ ಬರಲಿದೆ: ದ್ವಾರಕನಾಥ್‌ ಗುರೂಜಿ ಭವಿಷ್ಯ

ಹೈಲೈಟ್ಸ್‌:

  • ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ವಂತ ಬಲದಿಂದ ಬಹುಮತ ಪಡೆಯುವುದು ಕಷ್ಟ
  • ಎನ್‌ಡಿಎ ಮೈತ್ರಿಕೂಟ ಬಲ 300-302 ಸ್ಥಾನಗಳನ್ನು ಗೆಲ್ಲಬಹುದು ಎಂದು ಗುರೂಜಿ ಭವಿಷ್ಯ
  • ದೇವರು ಕೊಟ್ಟ ಅವಕಾಶವನ್ನು ನರೇಂದ್ರ ಮೋದಿ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿದ್ದಾರೆ

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಫಲಿತಾಂಶ ಈ ಭಾರಿ ಕುತೂಹಲ ಮೂಡಿಸಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು 400 ಸೀಟು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಆ ಸಂಖ್ಯೆಯ ಹತ್ತಿರ ಸುಳಿಯುವುದು ಕಷ್ಟ. ಮಿತ್ರಪಕ್ಷಗಳ ಸಹಾಯ ಇಲ್ಲದೇ ಬಿಜೆಪಿಯೊಂದೇ ಅಧಿಕಾರ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲ. ಎನ್‌ಡಿಎ ಮೈತ್ರಿಕೂಟ ಬಲ 300-302 ಸ್ಥಾನಗಳನ್ನು ಗೆಲ್ಲಬಹುದು ಎಂದು ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಕೊನೆಯ ಹಂತದ ಮತದಾನ ಬಳಿಕ ಫಲಿತಾಂಶ ಪ್ರಕಟಣೆಗೆ ಇನ್ನು ಆರು ದಿನ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ದ್ವಾರಕನಾಥ್‌ ಗುರೂಜಿ ಅವರು ಗ್ರಹಗತಿಗಳ ಆಧಾರದ ಮೇಲೆ ದೇಶದ ರಾಜಕೀಯ ಭವಿಷ್ಯ ಕುರಿತು ವಿಜಯ ಕರ್ನಾಟಕದ ಜತೆ ಮಾತನಾಡಿದ ಅವರು,”ಬಿಜೆಪಿ ಪಕ್ಷವೊಂದೇ ಬಹುಮತ ಪಡೆದು ಸರಕಾರ ರಚಿಸಲು ಸಾಧ್ಯವಿಲ್ಲ. ಮೈತ್ರಿ ಪಕ್ಷಗಳ ಬೆಂಬಲ ಪಡೆಯಲೇ ಬೇಕಿದೆ. ಈ ಬಾರಿ ಪ್ರಬಲ ಪ್ರತಿಪಕ್ಷ ಲೋಕಸಭೆಯಲ್ಲಿ ಇರಲಿದೆ,” ಎಂದು ಹೇಳಿದರು.

”ನಾನು ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿಯಲ್ಲ. ಆದರೆ ಗ್ರಹಗಳ ವಿಶ್ಲೇಷಣೆ ಆಧರಿಸಿ ಹೇಳುವುದಾದರೆ, ಜೂನ್ 4ರಂದು ಫಲಿತಾಂಶ ಹೊರಬಿದ್ದರೂ ಕೇಂದ್ರದಲ್ಲಿ ಸರಕಾರ ರಚನೆ ವಿಳಂಬವಾಗಲಿದೆ. ಪ್ರಧಾನಿ ಅಭ್ಯರ್ಥಿ ಆಯ್ಕೆಯೂ ಚರ್ಚೆಗೆ ಗ್ರಾಸವಾಗಲಿದೆ. ಸಂಘ ಪರಿವಾರವು ಸರಕಾರ ರಚನೆ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಕಳೆದ ಎರಡು ಚುನಾವಣೆಗಳಲ್ಲೂ ಉತ್ತರ ಭಾರತದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಡಿಮೆ ಸೀಟುಗಳನ್ನಷ್ಟೇ ಗೆಲ್ಲಲಿದೆ,” ಎಂದು ತಿಳಿಸಿದರು.

”ಮೋದಿ ಪ್ರಧಾನಿಯಾದ ಬಳಿಕ ಜನರಲ್ಲಿ ಆಶಾಭಾವನೆ ಮೂಡಿತ್ತು. ಅವರು 25 ವರ್ಷ ಆಡಳಿತ ನಡೆಸುತ್ತಾರೆಂಬ ವಿಶ್ವಾಸದಲ್ಲಿದ್ದರು. ಮೋದಿ ಮೊದಲ ಸಲ ಪ್ರಧಾನಿಯಾದಾಗ ಇದ್ದ ವರ್ಚಸ್ಸು, ಶಾಂತ ಮನಸ್ಸು ಈಗಿಲ್ಲ. ಅವರ ಮನಸ್ಸು, ಗುರಿ ಬದಲಾಗುತ್ತದೆಂದು ಯಾರೂ ಯೋಚಿಸಿರಲಿಲ್ಲ. ಹೀಗಾಗಿಯೇ, ಜನರು ಮೋದಿ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ,” ಎಂದು ಹೇಳಿದರು.

”ಚುನಾವಣೆಯಲ್ಲಿ ಹೆಣ್ಣು ಮಕ್ಕಳ ಮಾಂಗಲ್ಯದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಎಂದೂ ಹೀಗೆ ವರ್ತಿಸಿರಲಿಲ್ಲ. ಶ್ರೇಷ್ಠ ನಾಯಕರಾಗಿದ್ದವರು ಜನರಲ್ಲಿ ಧೈರ್ಯ ತುಂಬಿ ಭರವಸೆಗಳ ಕುರಿತು ಮಾತನಾಡಬೇಕಿತ್ತು. ಆದರೆ, ಆಹಾರ ಧಾನ್ಯ ಸಂಗ್ರಹ, ಉದ್ಯೋಗ ಸೃಷ್ಟಿ, ಬೆಲೆ ಇಳಿಕೆ ಕುರಿತು ಎಂದೂ ಸೊಲ್ಲೆತ್ತಿಲ್ಲ,” ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *