ಚಂದ್ರಬಾಬು ನಾಯ್ಡು ಮತ್ತೆ ಆಂಧ್ರ ಸಿಎಂ? 4 ರಾಜ್ಯಗಳ ವಿಧಾನಸಭೆ ಭವಿಷ್ಯವೇನು? ಎಕ್ಸಿಟ್ ಪೋಲ್ಸ್ ನಲ್ಲಿ ಅಂದಾಜು ಚಿತ್ರಣ!
ಹೈಲೈಟ್ಸ್:
- ಈ ಬಾರಿಯ ಲೋಕಸಭಾ ಚುನಾವಣೆಯ ಜೊತೆಗೆ ನಡೆದಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು.
- ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿನ ಜನತೆಯಿಂದ ಎರಡೂ ಚುನಾವಣೆಗಳಿಗೆ ಮತ ಚಲಾವಣೆ.
- ಜೂ. 1ರ ಅಂತಿಮ ಸುತ್ತಿಮ ಮತದಾನದ ನಂತರ ಸಂಜೆ 6 ಗಂಟೆಯ ನಂತರ ಎಲ್ಲಾ ಮತದಾನೋತ್ತರ ಸಮೀಕ್ಷಾ ವರದಿಗಳು ಪ್ರಕಟ.
ಅಮರಾವತಿ/ ಭುವನೇಶ್ವರ್/ ಗ್ಯಾಂಗ್ಟಾಕ್/ಇಟಾನಗರ: ಈ ಬಾರಿಯ ಲೋಕಸಭಾ ಚುನಾವಣೆಯ ಜೊತೆಜೊತೆಗೇ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ನಡೆದಿವೆ. ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾ ಹಾಗೂ ಅರುಣಾಚಲ ಪ್ರದೇಶದಲ್ಲಿ ಜನರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ – ಎರಡಕ್ಕೂ ಮತ ಚಲಾಯಿಸಿದ್ದಾರೆ.
ಅವುಗಳಲ್ಲಿ ಆಂಧ್ರಪ್ರದೇಶ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಮತದಾನ ಸಂಪೂರ್ಣವಾಗಿ ಮುಗಿದಿದೆ. ಒಡಿಶಾ ವಿಧಾನಸಭಾ ಚುನಾವಣೆಯ ಇನ್ನೊಂದು ಸುತ್ತಿನ ಮತದಾನ ಬಾಕಿಯಿದ್ದು, ಅದು ಜೂ. 1ರಂದು ನಡೆಯುವ ಲೋಕಸಭಾ ಚುನಾವಣೆಯ ಅಂತಿಮ ಸುತ್ತಿನ ಮತದಾನದ ಜೊತೆಗೆ ಪೂರ್ಣಗೊಳ್ಳುತ್ತದೆ. (ಇದೇ ಫೆಬ್ರವರಿಯಲ್ಲಿ, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಲೋಕಸಭಾ ಚುನಾವಣೆಯ ಜೊತೆಗೇ ನಡೆದಿದೆ).
ಫಲಿತಾಂಶದ ವಿಚಾರದ ಬಗ್ಗೆ ಹೇಳುವುದಾದರೆ, ಈಶಾನ್ಯ ರಾಜ್ಯಗಳಾದ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತಎಣಿಕೆ ಜೂ. 2ರಂದೇ ನಡೆಯುತ್ತದೆ. ಇನ್ನುಳಿದ, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತ ಎಣಿಕೆಯು, ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಜೂ. 4ರಂದು ನಡೆಯಲಿದೆ. ಜೂ. 4ರಂದು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹಾಗೂ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಮತದಾನದ ನಂತರ ಗರಿಗೆದರಿದ ಕುತೂಹಲ
ಈಗಾಗಲೇ ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರಬಹುದು? ನೆರೆಯ ಆಂಧ್ರಪ್ರದೇಶದಲ್ಲಿ ಜಗನ್ ರೆಡ್ಡಿಯವರೇ ಸತತ ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರಾ ಅಥವಾ ಅಲ್ಲಿ ಈ ಬಾರಿ ಚಂದ್ರಬಾಬು ನಾಯ್ಡು – ನಟ ಪವನ್ ಕಲ್ಯಾಣ್ ಅವರಿಬ್ಬರ ಮೈತ್ರಿ ಒಕ್ಕೂಟ (ಟಿಡಿಪಿ ಹಾಗೂ ಜನಸೇನಾ) ಅಧಿಕಾರಕ್ಕೆ ಬರುತ್ತದಾ?
ಇನ್ನು, ಒಡಿಶಾದಲ್ಲಿ ಮಟ್ಟಕ್ಕೆ ಸತತ ಐದು ಬಾರಿ ಸಿಎಂ ಆಗಿರುವ ನವೀನ್ ಪಟ್ನಾಯಕ್ ಅವರೇ ಮತ್ತೆ ಆರನೇ ಬಾರಿಗೆ ಮತ್ತೆ ಅಧಿಕಾರದ ಗದ್ದುಗೆ ಹಿಡಿದು, ಅತಿ ದೀರ್ಘಾವಧಿಯವರೆಗೆ ಸಿಎಂ ಆಗಿದ್ದ ಪಶ್ಚಿಮ ಬಂಗಾಳದ ಜ್ಯೋತಿ ಬಸು ಅವರ ದಾಖಲೆ ಮುರಿದು ಹೊಸ ದಾಖಲೆ ಬರೆಯುತ್ತಾರಾ?
ಅತ್ತ, ಈಶಾನ್ಯ ರಾಜ್ಯಗಳಾದ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ವಿಧಾನಸಭೆಗಳ ಕಥೇಯೇನು? ಈ ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಅಧಿಕಾರದ ರುಚಿ ನೋಡುತ್ತಾ ಅನ್ನೋದನ್ನು ಕಾಯ್ದು ನೋಡಬೇಕಿದೆ. ಹಾಗಾಗಿ, ರಾಜಕೀಯಾಸಕ್ತರು ಕಾತುರದಿಂದ ಎಕ್ಸಿಟ್ ಪೋಲ್ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಮತದಾನೋತ್ತರ ಸಮೀಕ್ಷಾ ವರದಿಯಲ್ಲಿ ಸಿಗುತ್ತೆ ಅಂದಾಜು ಚಿತ್ರ!
ಚುನಾವಣೆಯೊಂದು ಮುಗಿದ ಮೇಲೆ ಮತದಾರರು ಯಾರಿಗೆ ಮತ ಹಾಕಿದ್ದಾರೆ, ಯಾವ ಪಕ್ಷವು ಅಧಿಕಾರಕ್ಕೆ ಬರಬಹುದು ಎಂಬುದರ ಬಗ್ಗೆ ಮತದಾರರ ಸಮೀಕ್ಷೆಯನ್ನು ನಡೆಸಿ, ಅದರಲ್ಲಿ ಬಂದ ವಿವರಗಳ ಆಧಾರದ ಮೇಲೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಅಂಕಿ-ಅಂಶವನ್ನು ಜನರ ಮುಂದಿಡಲೆಂದೇ ಕೆಲವು ಸಂಸ್ಥೆಗಳಿವೆ. ಅಂಥ ವರದಿಗಳನ್ನು ಎಕ್ಸಿಟ್ ಪೋಲ್ ಎಂದು ಕರೆಯಲಾಗುತ್ತದೆ. ಮತದಾರನು ಮತ ಹಾಕಿ ಮತಗಟ್ಟೆಯಿಂದ ಹೊರಬಂದ (ಎಕ್ಸಿಟ್) ನಂತರ ಆತ ಯಾವ ಪಕ್ಷಕ್ಕೆ ಮತ ಹಾಕಿದ, ಯಾವ ಕಾರಣಕ್ಕಾಗಿ ಮತ ಹಾಕಿದ ಎಂಬುದರ ವಿವರಗಳನ್ನು ಕಲೆಹಾಕುವುದರಿಂದ ಇದಕ್ಕೆ ಎಕ್ಸಿಟ್ ಪೋಲ್ ವರದಿ ಎಂಬ ಹೆಸರು ಬಂದಿದೆ. ಇದನ್ನು ಕನ್ನಡದಲ್ಲಿ ಮತದಾನೋತ್ತರ ಸಮೀಕ್ಷಾ ವರದಿ ಎಂದು ಹೇಳಲಡ್ಡಿಯಿಲ್ಲ.
ಈ ಬಾರಿಯ ನಾಲ್ಕು ವಿಧಾನಸಭೆಯ ಚುನಾವಣೆಯ ಎಕ್ಸಿಟ್ ಪೋಲ್ ಗಳನ್ನು ನಾನಾ ಸಂಸ್ಥೆಗಳು ಕೈಗೊಂಡಿವೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದ ಪ್ರಕಾರ, ಮತದಾನದ ಅಂತಿಮ ಸುತ್ತು ಮುಗಿದ ನಂತರವಷ್ಟೇ ಅವುಗಳನ್ನು ಪ್ರಕಟಿಸಬೇಕು. ಮಾಧ್ಯಮಗಳಿಗೂ ಕೂಡ ಈ ನಿಯಮ ಅನ್ವಯವಾಗುತ್ತದೆ.
ಜೂ. 1ರ ಸಂಜೆ 6ರ ನಂತರ ಎಕ್ಸಿಟ್ ಪೋಲ್ ಸುರಿಮಳೆ
ಹಾಗಾಗಿ, ಈ ಬಾರಿಯ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ವರದಿಗಳು ಆಯಾ ರಾಜ್ಯಗಳ ಪ್ರಮುಖ ಟಿವಿ ವಾಹಿನಿಗಳಲ್ಲಿ, ಅವುಗಳ ಯೂಟ್ಯೂಬ್ ಚಾನೆಲ್ ಗಳಲ್ಲಿ ಅಥವಾ ಸರ್ವೇ ಮಾಡಿ ಎಕ್ಸಿಟ್ ಪೋಲ್ ವರದಿಗಳನ್ನು ತಯಾರಿಸಿರುವ ಸಂಸ್ಥೆಗಳ ಅಧಿಕೃತ ವೆಬ್ ಸೈಟ್ ಗಳಲ್ಲಿ ಹಾಗೂ ಆ ಸಂಸ್ಥೆಗಳ ಯು ಟ್ಯೂಬ್ ಚಾನೆಲ್ ಗಳಲ್ಲಿ ಜೂ. 1ರ ಸಂಜೆ 6 ಗಂಟೆಯ ನಂತರ ಬಿತ್ತರವಾಗಲಿವೆ.
ಚಾಣಕ್ಯ, ಸಿ-ವೋಟರ್, ಮೈಆ್ಯಕ್ಸಿಸ್ ಇಂಡಿಯಾನಂಥ ಸಂಸ್ಥೆಗಳು, ಎಬಿಪಿ ನೆಟ್ ವರ್ಕ್, ಟೈಮ್ಸ್ ನೌ, ಇಂಡಿಯಾ ಟುಡೇ, ಆಜ್ ತಕ್, ಝೀ ನ್ಯೂಸ್, ಟಿವಿ 9 ಭಾರತ ವರ್ಷ್ ಹಾಗೂ ಇನ್ನಿತರ ಮಾಧ್ಯಮ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ಈ ಸಮೀಕ್ಷೆಗಳನ್ನು ನಡೆಸಿರುತ್ತವೆ. ಈ ಒಪ್ಪಂದಡಿ, ಆಯಾ ಸಂಸ್ಥೆಗಳ ಸಮೀಕ್ಷಾ ವರದಿಗಳು (ಎಕ್ಸಿಟ್ ಪೋಲ್ ವರದಿ) ಯಾರ ಜೊತೆಗೆ ಕೈ ಜೋಡಿಸಿರುತ್ತಾರೋ ಆ ಸಂಸ್ಥೆಯ ವಾಹಿನಿಗಳಲ್ಲೇ ಪ್ರಕಟವಾಗುತ್ತದೆ.