ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆದವರಿಂದ ವಸೂಲಿ ಮಾಡಿದ ದಂಡವೇ 30 ಕೋಟಿ! ಆದರೂ ಕಡಿಮೆ ಆಗಿಲ್ಲ ಕಾಟ!
ಹೈಲೈಟ್ಸ್:
- ಎಲ್ಲೆಂದರಲ್ಲಿ ಕಸ ಎಸೆಯುವುದು, ಉಗುಳುವುದು, ಮೂತ್ರ ವಿಸರ್ಜನೆ ಮಾಡಿದವರಿಂದ ದಂಡ ಸಂಗ್ರಹ
- 2019ರಿಂದ 2024ರ ಮೇ 29ರವರೆಗೆ ಒಟ್ಟಾರೆ 11.88 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲು
- 30.85 ಕೋಟಿ ರೂ. ದಂಡ ಸಂಗ್ರಹಿಸಿದ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಘಟಕ
ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ರಾಜಧಾನಿಯ ಸೌಂದರ್ಯ ಹಾಳು ಮಾಡುತ್ತಿರುವವರನ್ನು ಪತ್ತೆ ಮಾಡಿ ದಂಡ ವಿಸುತ್ತಿರುವ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಘಟಕ, ಕಳೆದ ಐದು ವರ್ಷಗಳಲ್ಲಿ11.88 ಲಕ್ಷ ಪ್ರಕರಣ ದಾಖಲಿಸಿ, 30.85 ಕೋಟಿ ರೂ. ದಂಡ ವಸೂಲಿ ಮಾಡಿದೆ.
ನಗರದ ರಸ್ತೆ, ಆಟದ ಮೈದಾನ, ಪಾರ್ಕ್ಗಳು, ಬಸ್ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳ ಎಲ್ಲೆಂದರಲ್ಲಿ ಕಸ ಎಸೆಯುವುದು, ನಿಷೇಧಿತ ಪ್ಲಾಸ್ಟಿಕ್ ಬಳಸಿ ಬಿಸಾಡುವುದು, ಉಗುಳುವುದು, ಮಲ-ಮೂತ್ರ ವಿಸರ್ಜನೆಯಂತಹ ಕೆಟ್ಟ ಚಟುವಟಿಕೆಗಳು ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಲು ದಂಡಾಸ್ತ್ರ ಪ್ರಯೋಗಿಸಿರುವ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ಘಟಕ, 2019ರಿಂದ ಈವರೆಗೆ ಅತ್ಯಕ ದಂಡದ ಮೊತ್ತ ಸಂಗ್ರಹಿಸಿದೆ.
ನಗರದ ಸೌಂದರ್ಯಕ್ಕೆ ಚ್ಯುತಿ
ನಗರವನ್ನು ಕಸ ಮುಕ್ತಗೊಳಿಸುವ ಉದ್ದೇಶದಿಂದ ವಿಶೇಷ ಅಭಿಯಾನ ಆರಂಭಿಸಿರುವ ಬಿಬಿಎಂಪಿ, ವಾರ್ಡ್ ಮಟ್ಟದಲ್ಲಿ ಮಾರ್ಷಲ್‌ಗಳು, ಆರೋಗ್ಯಾಧಿಕಾರಿಗಳು ಮತ್ತು ಎಂಜಿನಿಯರ್‌ಗಳನ್ನು ನಿಯೋಜಿಸಿದೆ. ಬೀದಿಯಲ್ಲಿ ಕಸ ಹಾಕಬೇಡಿ ಎಂದು ಗೋಡೆ ಬರಹ ಬರೆಯುವುದು, ಕಸದ ವಾಹನದಲ್ಲಿ ತ್ಯಾಜ್ಯ ಹಾಕುವಂತೆ ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆದಿದೆ. ಇನ್ನೂ, ಕೆಲವೆಡೆ ಬಸ್ ನಿಲ್ದಾಣ, ಪಾರ್ಕ್ ಆವರಣ, ಫುಟ್‌ಪಾತ್‌ಗಳ ಮೇಲೆ ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವ ಕೆಟ್ಟ ಪರಂಪರೆ ಮುಂದುವರೆದಿದ್ದು, ನಗರದ ವಾತಾವರಣ ಹದಗೆಟ್ಟಿದೆ.
ದಂಡಕ್ಕೂ ಮಣಿಯದ ಜನ
ಕಾರು-ಬೈಕ್‌ಗಳಲ್ಲಿಬಂದು ರಸ್ತೆ ಬದಿ, ಖಾಲಿ ನಿವೇಶನ, ಚರಂಡಿಗಳಲ್ಲಿ ಕಸ ಎಸೆಯುವವರನ್ನು ಮಾರ್ಷಲ್‌ಗಳು ಪತ್ತೆ ಮಾಡಿ ದಂಡ ವಿಧಿಸುತ್ತಿದ್ದಾರೆ. ಆದರೂ, ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿತ್ಯಾಜ್ಯ ಸುರಿಯುವುದು ಮಾತ್ರ ಕಡಿಮೆಯಾಗಿಲ್ಲ. ಕೆಲವರು ರಾತ್ರಿ ಹಾಗೂ ಬೆಳಗಿನ ಜಾವ ಪ್ಲಾಸ್ಟಿಕ್ ಕವರ್‌ಗಳಲ್ಲಿ ಮನೆ ತ್ಯಾಜ್ಯ, ಕಟ್ಟಡದ ಅವಶೇಷಗಳನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿಎಸೆಯುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದು ನಿಯಮ ಬಾಹಿರವಾಗಿದ್ದರೂ, ಬುದ್ವಂತರೆಂದು ಕರೆಸಿಕೊಳ್ಳುವ ನಗರದ ಜನ ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ.
ಐಟಿ-ಬಿಟಿ ನಗರಕ್ಕೆ ಧಕ್ಕೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 2018ರಲ್ಲಿ ಕರ್ನಾಟಕವನ್ನು ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಿದೆ. ಆದರೆ, ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಬಯಲು ಶೌಚಕ್ಕೆ ಸಂಬಂಸಿದಂತೆ 4509 ಪ್ರಕರಣಗಳು ದಾಖಲಾಗಿದ್ದು, ಬಿಬಿಎಂಪಿಯು 4.59 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಇದರಿಂದ ಐಟಿ-ಬಿಟಿ ನಗರಕ್ಕೆ ದೊಡ್ಡ ಧಕ್ಕೆಯುಂಟಾಗಿದೆ. ಬಯಲು ಶೌಚ ಮುಕ್ತ ಘೋಷಣೆ ಕೇವಲ ಕಾಗದಕ್ಕೆ ಸೀಮಿತಗೊಂಡಿರುವುದು ಅಂಕಿ-ಅಂಶಗಳಿಂದ ಬಯಲಾಗಿದೆ.
ದಾಖಲಾದ ಪ್ರಕರಣಗಳು, ದಂಡದ ಮೊತ್ತ
ವರ್ಷ | ದಾಖಲಾದ ಪ್ರಕರಣಗಳು | ದಂಡದ ಮೊತ್ತ (ರೂ.ಗಳಲ್ಲಿ) |
2019 (ಸೆಪ್ಟೆಂಬರ್‌ನಿಂದ) | 9457 | 52,17,430 |
2020 | 3,45,906 | 9,58,91,845 |
2021 | 4,71,570 | 11,76,86,349 |
2022 | 1,96,004 | 5,02,77,810 |
2023 | 1,19,231 | 2,83,10,784 |
2024 (ಮೇ 29ರವರೆಗೆ) | 45,885 | 1,11,24,000 |
ಒಟ್ಟು | 11,88,053 | 30,85,08,214 |
ಯಾವುದಕ್ಕೆಲ್ಲ ದಂಡ?
ಬಿಬಿಎಂಪಿಯ ಪ್ರತಿ ವಾರ್ಡ್‌ನಲ್ಲಿ ನಿಯಮ ಉಲ್ಲಂಘಿಸಿ, ಎಲ್ಲೆಂದರಲ್ಲಿ ಕಸ-ತ್ಯಾಜ್ಯ ಎಸೆಯುವುದು, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವುದು, ಎಲ್ಲೆಂದರಲ್ಲಿ ಉಗುಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಸೇರಿದಂತೆ ಬೇರೆ ಬೇರೆ ವಿಷಯಕ್ಕೆ ಸಂಬಂಸಿದಂತೆ ಪ್ರಕರಣ ದಾಖಲಿಸಿರುವ ಬಿಬಿಎಂಪಿ, ದಂಡ ವಿಸಿದೆ. ಕೆ.ಆರ್.ಪುರ, ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಲ್ಡರ್‌ಗಳು ಕಟ್ಟಡ ಕಾರ್ಮಿಕರಿಗೆ ನೈರ್ಮಲ್ಯ ಮತ್ತು ವಸತಿ ಕಲ್ಪಿಸದ ಕಾರಣ, ಅವರೆಲ್ಲ ಖಾಲಿ ನಿವೇಶನಗಳನ್ನೇ ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.