ಶಾಲೆ ಪ್ರವೇಶಕ್ಕೆ ಡೊನೇಷನ್ ಪಡೆದಲ್ಲಿ ಶಾಲಾ ನೋಂದಣಿ ರದ್ದು: ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಜಿಲ್ಲೆಯಾದ್ಯಂತ ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿಗೆ ಶಾಲೆಗಳಲ್ಲಿ ಪ್ರವೇಶಾತಿ ಪ್ರಾರಂಭವಾಗಿದ್ದು, ಜಿಲ್ಲೆಯ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ ಎಂಬ ಸಾರ್ವಜನಿಕರು ದೂರುಗಳು ಕೇಳಿಬರುತ್ತಿವೆ. ಯಾವುದೇ ಶಾಲೆ ನಿಯಮ ಬಾಹಿರವಾಗಿ ಡೋನೇಷನ್ ಪಡೆಯುವಂತಿಲ್ಲ. ಇದನ್ನು ಉಲ್ಲಂಘಿಸಿ ಪಡೆದಿದ್ದು ಕಂಡುಬಂದಲ್ಲಿ ಅಂತಹ ಶಾಲೆಗಳ ನೋಂದಣಿಯನ್ನು ಆರ್.ಟಿ.ಇ. ಕಾಯ್ದೆ-2009ರನ್ವಯ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆದು ಮಕ್ಕಳಿಗೆ ಪ್ರವೇಶ ನೀಡಬೇಕು. ನಿಗದಿತ ಶುಲ್ಕ ಹೊರತುಪಡಿಸಿ ಕಾನೂನು ಬಾಹಿರವಾಗಿ ಡೋನೇಷನ್ ಪಡೆದಲ್ಲಿ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇನ್ನು ಜಿಲ್ಲೆಯ ಯಾವುದೇ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಡೊನೇಷನ್ ಕೇಳಿದಲ್ಲಿ ಸಾರ್ವಜನಿಕರು, ಪಾಲಕರು ಹಾಗೂ ಪೋಷಕರು  ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ, ಡಿ.ಡಿ.ಪಿ.ಐ. ಕಚೇರಿ ಹಾಗೂ ಬಿ.ಇ.ಓ ಕಚೇರಿಗೆಳಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದಲ್ಲಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಶುಲ್ಕ ಮಾಹಿತಿ ಪ್ರದರ್ಶಿಸಲು ಸೂಚನೆ: ಶಿಕ್ಷಣ ಹಕ್ಕು ಕಾಯ್ದೆ-2009ರ ಪ್ರಕಾರ ಜಿಲ್ಲೆಯ ಎಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ತಮ್ಮ ಶಾಲೆಗಳಲ್ಲಿ ತರಗತಿಗಳ ಪ್ರವೇಶಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಶಾಲಾ ಸೂಚನಾ ಫಲಕ, ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು. ಇದರಿಂದ ಶುಲ್ಕದ ಬಗ್ಗೆ ಗೊಂದಲ ಬಗೆಹರಿಯಲಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಶಾಲೆಗಳಿಗೆ ನಿರ್ದೇಶನ ನೀಡಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *