ಎಕ್ಸಿಟ್ ಫೋಲ್ ಸುಳ್ಳಾಗಲಿದೆ, ಮೋದಿ 3ನೇ ಬಾರಿ ಪ್ರಧಾನಿಯಾದರೆ ತಲೆ ಶೇವ್ ಮಾಡುವೆ : ಎಎಪಿ ನಾಯಕ

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟವಾದ ಗೆಲುವಿನ ಭವಿಷ್ಯ ನುಡಿದಿವೆ. ಬಹುತೇಕ ಸಮೀಕ್ಷೆಗಳು ಎನ್‌ಡಿ ಮೈತ್ರಿಕೂಟಕ್ಕೆ 350ಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವಿನ ಮುನ್ನುಡಿ ಬರೆದಿವೆ. ಆದರೆ ಎಎಪಿ ನಾಯಕ ಸೋಮನಾಥ್ ಭಾರ್ತಿ ಈ ಸಮೀಕ್ಷಾ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದು,  ಒಂದು ವೇಳೆ ಸಮೀಕ್ಷೆಗಳು ನಿಜವಾಗಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಯೂ ಪ್ರಧಾನಿಯಾದರೆ ತಾವು ತಲೆ ಬೋಳಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯೂ ಆಗಿರುವ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ  ಸೋಮನಾಥ್ ಭಾರ್ತಿ, ಮತ ಎಣಿಕೆ ದಿನದಂದು ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಎಂದು ಸಾಬೀತಾಗಲಿದೆ. ಒಂದು ವೇಳೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ನಾನು ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು (exit polls)ಕೂಡ ದೆಹಲಿಯ 7 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ ಆರನ್ನಾದರೂ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ. ಆದರೆ ಇದನ್ನು ಒಪ್ಪದ ಭಾರ್ತಿ, ದೆಹಲಿಯ 7 ಸ್ಥಾನಗಳಲ್ಲಿ ನಾಲ್ಕರಲ್ಲಿ ಎಎಪಿ ಸ್ಪರ್ಧಿಸಿದ್ದು, ಉಳಿದ ಮೂರರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿದೆ ಈ ಎಲ್ಲಾ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಗೆದ್ದು ದೆಹಲಿಯನ್ನು ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ,  ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಜೂನ್ 4 ರಂದು ತಪ್ಪೆಂದು ಸಾಬೀತಾಗಲಿವೆ.  ಮೋದಿ 3ನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯ ಎಲ್ಲಾ ಏಳು ಸ್ಥಾನಗಳು ಇಂಡಿಯಾ ಮೈತ್ರಿಕೂಟಕ್ಕೆ ಹೋಗಲಿವೆ ಎಂದು ಭಾರ್ತಿ ಟ್ವಿಟ್ ಮಾಡಿದ್ದಾರೆ. ನವದೆಹಲಿಯಲ್ಲಿ ಲೋಕಸಭಾ ಕ್ಷೇತ್ರದಿಂದ ಸೋಮನಾಥ್ ಭಾರ್ತಿ, ಬಿಜೆಪಿಯ ಬಾನ್ಸುರಿ ಸ್ವರಾಜ್ ವಿರುದ್ಧ ಕಣಕ್ಕಿಳಿದಿದ್ದಾರೆ. ಬಾನ್ಸುರಿ ಸ್ವರಾಜ್ ಮಾಜಿ ಕೇಂದ್ರ ಸಚಿವೆ ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಪುತ್ರಿಯಾಗಿದ್ದು, ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಮತ ಎಣಿಕೆ ನಡೆಯುವವರೆಗೆ ಜನ ಕಾಯಬೇಕು ಎಂದು ಮನವಿ ಮಾಡಿದ ಎಎಪಿ ನಾಯಕ ಭಾರ್ತಿ, ಪ್ರಧಾನಿ ಮೋದಿಯವರ ಭಯದಿಂದಾಗಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅವರು ಸೋಲುವುದನ್ನು ತೋರಿಸಲಾಗುತ್ತಿಲ್ಲ, ಆದ್ದರಿಂದ ಜೂನ್ 4 ರಂದು ಬರುವ ನಿಜವಾದ ಫಲಿತಾಂಶಗಳಿಗಾಗಿ ನಾವೆಲ್ಲರೂ ಕಾಯಬೇಕಿದೆ. ಬಿಜೆಪಿ ವಿರುದ್ಧ ಜನ ಭಾರಿ ಸಂಖ್ಯೆಯಲ್ಲಿ ಜನ ಮತ ಹಾಕಿದ್ದಾರೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *