ಅರಿಶಿನ ಹಾಗೂ ಶುಂಠಿ ಜತೆಯಾಗಿ ಸೇವಿಸಿದ್ರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ
ಆಯುರ್ವೇದವು ತನ್ನ ಔಷಧಿಗಳಲ್ಲಿ ಪ್ರಮುಖವಾಗಿ ಬಳಕೆ ಮಾಡುವಂತಹ ಗಿಡಮೂಲಿಕೆಗಳಲ್ಲಿ ಅರಶಿನ ಮತ್ತು ಶುಂಠಿ ಕೂಡ ಇದೆ. ಇದನ್ನು ಕೇವಲ ಔಷಧಿಗಳಲ್ಲಿ ಮಾತ್ರವಲ್ಲದೆ, ಶತಮಾನಗಳಿಂದಲೂ ಭಾರತೀಯರು ತಮ್ಮ ಅಡುಗೆಯಲ್ಲಿ ಬಳಸಿಕೊಂಡು ಬರುತ್ತಿರುವರು. ಇದು ಅಡುಗೆ ರುಚಿ ಹಾಗೂ ಸುವಾಸನೆ ಹೆಚ್ಚಿಸುವ ಜತೆಗೆ ಹಲವಾರು ಬಗೆ ಆರೋಗ್ಯ ಲಾಭಗಳನ್ನು ಕೂಡ ನೀಡುವುದು. ಈ ಎರಡನ್ನು ಜತೆಯಾಗಿ ಬಳಸಿಕೊಂಡರೆ, ಆಗ ದೇಹಕ್ಕೆ ನಾನಾ ರೀತಿಯ ಆರೋಗ್ಯ ಲಾಭ ಸಿಗುವುದು. ಅದರ ಬಗ್ಗೆ ತಿಳಿಯೋಣ.
ಶುಂಠಿ ಮತ್ತು ಅರಿಶಿನದಲ್ಲಿರುವ ಪೋಷಕಾಂಶಗಳು

ಶುಂಠಿ ಮತ್ತು ಅರಿಶಿನದಲ್ಲಿ ಚಯಾಪಚಯ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಂತಹ ಅಂಶಗಳು ಇವೆ. ಇದರಲ್ಲಿ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಅಂಶಗಳಿವೆ. ಅರಿಶಿನದಲ್ಲಿ ಕರ್ಕ್ಯೂಮಿನ್ ಅಂಶವಿದ್ದು, ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿದೆ ಮತ್ತು ಉರಿಯೂತ ಶಮನಕಾರಿ ಗುಣ ಕೂಡ ಇದರಲ್ಲಿದೆ. ಅದೇ ರೀತಿಯಾಗಿ ವಿಟಮಿನ್ ಮತ್ತು ಖನಿಜಾಂಶಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಪೊಟಾಶಿಯಂ, ಕಬ್ಬಿಣಾಂಶ ಮತ್ತು ಮ್ಯಾಂಗನೀಸ್ ಇದರಲ್ಲಿದೆ.
ಅರಿಶಿನದಂತೆ ಶುಂಠಿಯಲ್ಲಿ ಕೂಡ ಜಿಂಜರಾಲ್ ಎನ್ನುವ ಅಂಶವಿದ್ದು, ಇದು ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವ ಜೈವಿಕ ಸಕ್ರಿಯ ಅಂಶವಾಗಿದೆ. ಇಷ್ಟು ಮಾತ್ರವಲ್ಲದೆ, ವಿಟಮಿನ್ ಮತ್ತು ಖನಿಜಾಂಶಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಬಿ೬, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ತಾಮ್ರ ಇದರಲ್ಲಿದೆ. ಎರಡರಲ್ಲೂ ಆಹಾರದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯಕ್ಕೆ ಸಹಕಾರಿ ಮತ್ತು ವಿವಿಧ ಬಗೆಯ ಪೈಥೋಕೆಮಿಕಲ್ ಪ್ರತಿರೋಧಕ ವ್ಯವಸ್ಥೆ, ಹೃದಯದ ಆರೋಗ್ಯ, ಮೆದುಳಿನ ಕಾರ್ಯ ಇತ್ಯಾದಿಗಳನ್ನು ಸುಧಾರಣೆ ಮಾಡುವುದು.
ಅರಿಶಿನದಲ್ಲಿ ಪ್ರಮುಖ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ಫ್ರೀ ರ್ಯಾಡಿಕಲ್ ನಿಂದ ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುವುದು. ಅರಿಶಿನವು ಪಿತ್ತರಸ ಉತ್ಪಾದನೆಯನ್ನು ಉತ್ತೇಜಿಸಿ, ಕೊಬ್ಬು ಮತ್ತು ಸಂಪೂರ್ಣ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು.