ಇಂದು ಜಡ್ಜ್‌ಮೆಂಟ್ ಡೇ! ಮೋದಿ ಸತತ 3ನೇ ಬಾರಿಗೆ ಪ್ರಧಾನಿಯಾಗ್ತಾರಾ?

ನವದೆಹಲಿ (ಜೂ.4): ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಅಂತಿಮ ಘಟ್ಟ ತಲುಪಿದ್ದು ಜೂ.4ರ ಮಂಗಳವಾರ ಲೋಕಸಭಾ ಚುನಾವಣೆ ಮತ ಎಣಿಕೆಯೊಂದಿಗೆ ತಾರ್ಕಿಕ ಅಂತ್ಯ ಕಾಣಲಿದೆ. ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸುಳಿವು ಲಭಿಸಲಿದೆ ಹಾಗೂ ಸಂಜೆಯ ವೇಳೆಗೆ ಎಲ್ಲೆಡೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲ್ಲುವುದೋ ಅಥವಾ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಗೆಲ್ಲುವುದೋ ಎಂಬುದು ತಿಳಿದುಬರಲಿದೆ.

ಎನ್‌ಡಿಎ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಅವಧಿಗೆ ಅದೇ ಹುದ್ದೆಯಲ್ಲಿ ಮುಂದುವರಿಯವುದು ಪಕ್ಕಾ. ಆದರೆ ಎನ್‌ಡಿಎ 400ರ ಗಡಿ ದಾಟುವುದೇ ಎಂಬುದು ಕುತೂಹಲದ ವಿಚಾರ. ಇನ್ನು ಇಂಡಿಯಾ ಕೂಟ 295+ ಗುರಿ ಇಟ್ಟುಕೊಂಡಿದ್ದು, ಗೆದ್ದರೆ ಯಾರು ಪ್ರಧಾನಿ ಆಗುವರು ಎಂಬುದು ಪ್ರಶ್ನೆಯಾಗಿದೆ. ಇವೆರಡೂ ಆಗದೇ ಅತಂತ್ರ ಲೋಕಸಭೆ ಸೃಷ್ಟಿಯಾದರೆ.. ಎಂಬ ಊಹಾಪೋಹವೂ ಇದ್ದು, ಆಗಿನ ವಿದ್ಯಮಾನ ಇನ್ನಷ್ಟು ಕುತೂಹಲಕಾರಿಯಾಗಲಿದೆ.

542 ಸೀಟಿಗೆ ಎಣಿಕೆ:

ಲೋಕಸಭೆಯ 543 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ (ಸೂರತ್‌) ಅವಿರೋಧ ಆಯ್ಕೆಯಾಗಿದ್ದು, ಉಳಿದ 542 ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ನಡೆಯಲಿದೆ.

ಏ.19ರಂದು ಮೊದಲ ಹಂತದ ಚುನಾವಣೆಯೊಂದಿಗೆ ಆರಂಭಗೊಂಡಿದ್ದ ಮತದಾನ ಜೂ.1ರಂದು ನಡೆದ 7 ಹಾಗೂ ಕಡೆಯ ಸುತ್ತಿನೊಂದಿಗೆ ಅಂತ್ಯಗೊಂಡಿತ್ತು. ಏಳೂ ಹಂತದಲ್ಲಿ ಒಟ್ಟಾರೆ ಶೇ.64ರಷ್ಟು ಮತ ಚಲಾವಣೆಯಾಗಿದ್ದವು.

ಈ ಬಾರಿ ಚುನಾವಣೆಯಲ್ಲಿ 751 ನೋಂದಾಯಿತ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದ್ದವು. 543 ಕ್ಷೇತ್ರಗಳಲ್ಲಿ 8360 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.

ಮತ ಎಣಿಕೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿಪ್ಯಾಟ್‌ಗಳ (ಮತ ತಾಳೆ ಯಂತ್ರ) ಸ್ಲಿಪ್‌ಗಳನ್ನು ಯಾದೃಚ್ಛಿಕವಾಗಿ (ರ್‍ಯಾಂಡಂ) ಮತ ತಾಳೆ ಮಾಡಬೇಕು ಎಂದು 2019ರಿಂದಲೇ ನಿಯಮ ಜಾರಿಯಲ್ಲಿದೆ. ಹೀಗಾಗಿ ಮತ ತಾಳೆಯು ಸಮಯ ಹಿಡಿಯಲಿದ್ದು, ಸಂಜೆ ವೇಳೆ ಅಂತಿಮ ಫಲಿತಾಂಶ ಘೋಷಣೆ ಆಗುವ ನಿರೀಕ್ಷೆಯಿದೆ.

ಸಮೀಕ್ಷೆಗಳ ಪ್ರಕಾರ ಬಹುತೇಕ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತದ ಭವಿಷ್ಯ ನುಡಿದಿವೆ. ಇಂಡಿಯಾ ಮೈತ್ರಿಕೂಟದ ಬಲ ಹೆಚ್ಚಾದರೂ ಅಧಿಕಾರ ಹಿಡಿಯುವ ಸಾಧ್ಯತೆ ಕುರಿತು ಯಾವುದೇ ಸಮೀಕ್ಷಾ ಸಂಸ್ಥೆಗಳೂ ಹೇಳಿಲ್ಲ.ಆದರೆ 2004ರ ಲೋಕಸಭಾ ಚುನಾವಣೆಯಲ್ಲಿ ಸಮೀಕ್ಷಾ ಸಂಸ್ಥೆಗಳು ನುಡಿದಿದ್ದ ಭವಿಷ್ಯ ಪೂರ್ಣ ಉಲ್ಟಾ ಹೊಡೆದು ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಮರಳಿತ್ತು. ಹೀಗಾಗಿಯೇ ಈ ಬಾರಿಯೂ 20 ವರ್ಷದ ಹಳೆಯ ಘಟನೆ ಮರುಕಳಿಸಲಿದೆ ಎಂದು ಇಂಡಿಯಾ ಮೈತ್ರಿಕೂಟ ಆಶಾಭಾವನೆಯಲ್ಲಿದೆ. ಈ ಕಾರಣಕ್ಕಾಗಿಯೇ ಮಂಗಳವಾರದ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

ಆಂಧ್ರ, ಒಡಿಶಾ ಅಸೆಂಬ್ಲಿ ಮತ ಎಣಿಕೆ ಇಂದುಹೈದರಾಬಾದ್‌/ಭುವನೇಶ್ವರ: ಲೋಕಸಭೆ ಚುನಾವಣೆ ಜತೆಗೆ ಆಂಧ್ರಪ್ರದೇಶ (175 ಕ್ಷೇತ್ರ) ಮತ್ತು ಒಡಿಶಾ (147) ವಿಧಾನಸಭಾ ಚುನಾವಣೆಯ ಮತ ಎಣಿಕೆಯೂ ಮಂಗಳವಾರ ನಡೆಯಲಿದೆ. ಆಂಧ್ರದಲ್ಲಿ ಅಧಿಕಾರಕ್ಕಾಗಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಟಿಡಿಪಿ- ಜನಸೇನಾ- ಬಿಜೆಪಿ ಕೂಟದ ನಡುವೆ ಹಣಾಹಣಿ ಏರ್ಪಟ್ಟಿದೆ. ಒಡಿಶಾದಲ್ಲಿ ಹಾಲಿ ಆಡಳಿತಾರೂಢ ಬಿಜು ಜನತಾ ದಳ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಕಂಡುಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *