ಮುಂದಿನ 5 ದಿನ ಭಾರಿ ಮಳೆ ಮುನ್ಸೂಚನೆ: ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ

ಉಡುಪಿ (ಜೂ.03): ಉಡುಪಿ ಜಿಲ್ಲಾದ್ಯಂತ ಕಳೆದ 48 ಗಂಟೆಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಜೂನ್‌ 3ರಿಂದ 8ರ ವರೆಗೆ ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರಿ ಮಳೆಯ ಬಗ್ಗೆ ಎಲ್ಲ ಮುಂಜಾಗ್ರತಾ ಕ್ರಮವಹಿಸಬೇಕು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿಪತ್ತು ನಿರ್ವಹಣೆಗೆ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ. ಅಲ್ಲದೆ ಸಾರ್ವಜನಿಕರು ನದಿ, ನೀರಿರುವ ಪ್ರದೇಶ ಹಾಗೂ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು ಹಾಗೂ ಸಿಡಿಲಿನ ಸಮಯದಲ್ಲಿ ಸುರಕ್ಷಿತ ಸ್ಥಳದಲ್ಲಿರಬೇಕು.

 

ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ವಿದ್ಯುತ್‌ ಕಂಬ, ಕಟ್ಟಡ, ಮರಗಳ ಹತ್ತಿರ ಅಥವಾ ಕೆಳಗೆ ನಿಲ್ಲಬಾರದು ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳನ್ನು ತಲುಪಬೇಕು ಎಂದು ಸೂಚಿಸಿದೆ. ತುರ್ತು ಸೇವೆಗೆ ಶುಲ್ಕರಹಿತ ಸಂಖ್ಯೆ : 1077 ಹಾಗೂ ದೂ.ಸಂಖ್ಯೆ: 0820-2574802 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂ – ಮೈ ಎಕ್ಸ್ ಪ್ರೆಸ್ ವೇನಲ್ಲಿ ಮಳೆ ನೀರು: ಮಳೆಗೆ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್​ ವೇ ಯಲ್ಲಿ ನೀರು ನಿಂತು ಕೆರೆಯಂತಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಯಿತು. ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದೆ. ಎಕ್ಸ್‌ಪ್ರೆಸ್‌ ವೇಯಲ್ಲಿ ನಿಂತಿರುವ ಮಳೆ ನೀರಿಗೆ ಹಲವು ವಾಹನಗಳು ಮುಂದೆ ಹೋಗಲಾರದ ಕಾರಣ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು.

 

ಅಲ್ಲದೇ ಕೆಲವೊಂದಿಷ್ಟು ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತಿವೆ ಎಂದು ತಿಳಿದು ಬಂದಿದೆ. ಕಳೆದ ವರ್ಷವೂ ಮಳೆ ಸಂದರ್ಭ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಭಾನುವಾರ ಸಂಜೆ ಸುರಿದ ಮಳೆಗೆ ರಸ್ತೆ ಮೇಲೆ ನೀರು ನಿಂತಿದ್ದು, ವಾಹನ ದಟ್ಟಣೆ ಉಂಟಾಗಿದೆ. ಇದು ವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ. ಮಳೆ ನೀರು ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮೂಲಕ ಡ್ರೈನೇಜ್ ಹರಿದು ಹೋಗಲೆಂದು ಒಂದಿಷ್ಟು ಕಾಮಗಾರಿಗಳನ್ನು ನಡೆಸಲಾಗಿತ್ತು. ಆದರೂ ಮಳೆ ನೀರು ಸಂಗ್ರಹವಾಗುತ್ತಲೇ ಇದ್ದು, ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *