NDA ಸರ್ಕಾರ ರಚನೆ ಕಸರತ್ತು: ಸ್ಪೀಕರ್ ಹುದ್ದೆ ಮತ್ತು ಐದು ಪ್ರಮುಖ ಖಾತೆಗಳ ಮೇಲೆ TDP ಕಣ್ಣು!

ನವದೆಹಲಿ: ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯ ಜೊತೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಟಿಡಿಪಿ ಮುಖ್ಯಸ್ಥ ಎನ್‌ ಚಂದ್ರಬಾಬು ನಾಯ್ಡು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲೇ ಉಳಿಯುವುದಾಗಿ ಪುನರುಚ್ಚರಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿರುವ ಟಿಡಿಪಿ ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಸ್ಪೀಕರ್ ಹುದ್ದೆಯೂ ಸೇರಿದಂತೆ ಮಹತ್ವದ 5 ಸಂಪುಟ ಖಾತೆಗಳಿಗಾಗಿ ಬೇಡಿಕೆ ಇರಿಸುವ ಬಹುತೇಕ ಸಾಧ್ಯತೆಗಳಿವೆ ಎಂದು ವರದಿ ಆಗಿದೆ. 16 ಸಂಸದರನ್ನು ಹೊಂದಿರುವ ಟಿಡಿಪಿ ಎನ್‌ಡಿಎಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿದೆ.

ಮೋದಿ 3.0 ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಲು ನಾಯ್ಡು ಅವರು ದೃಢವಾದ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಅವರು ಬಿಜೆಪಿ ಮುಖಂಡರಿಗೆ ಬೇಡಿಕೆಗಳ ಪಟ್ಟಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಲೋಕಸಭಾ ಸ್ಪೀಕರ್ ಹುದ್ದೆ ಮತ್ತು ಪ್ರಾದೇಶಿಕ ಪಕ್ಷಕ್ಕೆ ಕನಿಷ್ಠ ಐದು ಖಾತೆಗಳನ್ನು ನೀಡುವಂತೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.

ಸ್ಪೀಕರ್ ಹುದ್ದೆಗೆ ಟಿಡಿಪಿ ನಾಯಕರು ಏಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬುದೇ ಬಹಳ ಮುಖ್ಯವಾದ ವಿಚಾರ, ಭವಿಷ್ಯದಲ್ಲಿ ಪಕ್ಷಾಂತರವಾಗುವಂತಹ ಸಂದರ್ಭ ಬಂದಲ್ಲಿ ಸ್ಪೀಕರ್ ಪಾತ್ರವೂ ನಿರ್ಣಾಯಕವಾಗಿರುತ್ತದೆ. ಅಲ್ಲದೇ ಭವಿಷ್ಯದಲ್ಲಿ ಸಮ್ಮಿಶ್ರ ಸರ್ಕಾರವೂ ರಚನೆ ಆಗುವ ಸಾಧ್ಯತೆ ಇರುತ್ತದೆ. ಈ ವೇಳೆ ಪಕ್ಷಾಂತರಗೊಂಡವರ ಅಮಾನತು ಮಾಡುವ ಅರ್ಹತೆಯನ್ನು ರದ್ದು ಮಾಡುವ ಅವಕಾಶ ಸ್ಪೀಕರ್‌ಗೆ ಇರುತ್ತದೆ. ಇದೇ ಕಾರಣಕ್ಕೆ ಲೋಕಸಭೆಯ ಸ್ಪೀಕರ್ ಹುದ್ದೆ ಮೇಲೆ ಭಾರಿ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಟಿಡಿಪಿ ನಾಯಕ ದಿವಂಗತ ಜಿಎಂಸಿ ಬಾಲಯೋಗಿ ಅವರು 1998 ರಿಂದ 2002 ರವರೆಗೆ ಎ ಬಿ ವಾಜಪೇಯಿ ಸರ್ಕಾರದಲ್ಲಿ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ ವ್ಯವಹಾರಗಳು, ಬಂದರುಗಳು ಮತ್ತು ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಜಲ ಶಕ್ತಿ ಸಚಿವಾಲಯಗಳಿಗೆ ಬೇಡಿಕೆ ಇಟ್ಟಿದೆ ಎಂದು ಟಿಡಿಪಿ ಸಂಸದರೊಬ್ಬರು ಹೇಳಿದ್ದಾರೆ. ರಾಜ್ಯಕ್ಕೆ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯಲ್ಲಿ ಕಿರಿಯ ಸಚಿವರನ್ನು ಹೊಂದಲು ಉತ್ಸುಕವಾಗಿದೆ.

ಚಂದ್ರಬಾಬು ನಾಯ್ಡು ಆಂಧ್ರದ ರಾಜಧಾನಿಯಾಗಿ ಅಮರಾವತಿಯ ಅಭಿವೃದ್ಧಿಯನ್ನು ಪುನರಾರಂಭಿಸಲು ಬಯಸಿರುವುದರಿಂದ, ನಗರ ವ್ಯವಹಾರಗಳ ಖಾತೆಯನ್ನು ತಮ್ಮ ಪಕ್ಷಕ್ಕೆ ನೀಡಬೇಕೆಂದು ಬಯಸುತ್ತಿದೆ. ಅದೇ ರೀತಿ, ರಾಜ್ಯದಲ್ಲಿ ಗ್ರಾಮೀಣ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಈಡೇರಿಸಲು ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಗತ್ಯವಿದೆ. ಮೂರು ಕೈಗಾರಿಕಾ ಕಾರಿಡಾರ್‌ಗಳು ರಾಜ್ಯದ ಮೂಲಕ ಹಾದು ಹೋಗುತ್ತವೆ, ಆದ್ದರಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಬೇಡಿಕೆಯಿರಿಸಲಾಗಿದೆ.

ರಾಜ್ಯವು ಅಭಿವೃದ್ಧಿಯ ಹಂತದಲ್ಲಿ ನಾಲ್ಕು ಬಂದರುಗಳನ್ನು ಹೊಂದಿದ್ದು, ಬಂದರುಗಳು ಮತ್ತು ಹಡಗು ಸಚಿವಾಲಯದ ಸಹಾಯದಿಂದ ಅದನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಜಲಶಕ್ತಿ ಸಚಿವಾಲಯದ ನೆರವಿನೊಂದಿಗೆ ಪೋಲವರಂ ಬಹುಪಯೋಗಿ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ನಾಯ್ಡು ಆಶಿಸಿದ್ದಾರೆ ಎಂದು ತಿಳಿದು ಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *