ಬಗೆಹರಿಯದ ಪೊಲೀಸರ ಟ್ರಾನ್ಸ್‌ಫರ್‌ ಬಿಕ್ಕಟ್ಟು: ಗೃಹ ಸಚಿವರ ಆದೇಶಕ್ಕೂ ಅಧಿಕಾರಿಗಳ ಸಡ್ಡು!

ಹೈಲೈಟ್ಸ್‌:

  • ಅಂತರ ಜಿಲ್ಲೆಗಳಿಗೆ ವರ್ಗಾವಣೆ ಬಯಸಿ ಕಾನ್ಸ್‌ಟೆಬಲ್‌ಗಳಿಂದ ಅರ್ಜಿ
  • 4,000ಕ್ಕೂ ಹೆಚ್ಚು ಕಾನ್ಸ್‌ಟೆಬಲ್‌ಗಳು ಆನ್‌ಲೈನ್‌ ಮೂಲಕ ನೋಂದಣಿ
  • ವರ್ಗಾವಣೆ ಬಯಸಿರುವ ಜಿಲ್ಲೆಗಳ ಎಸ್ಪಿ ನಿರಾಕ್ಷೇಪಣಾ ಪತ್ರವನ್ನೂ ಪಡೆಯಲಾಗಿದೆ

ಬೆಂಗಳೂರು: ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬ ಸ್ಥಿತಿ ರಾಜ್ಯದ 4,000 ಕಾನ್ಸ್‌ಟೆಬಲ್‌ಗಳದ್ದು. ಅಂತರ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವರು ಹಸಿರು ನಿಶಾನೆ ತೋರಿದರೂ ಕಾನ್ಸ್‌ಟೆಬಲ್‌ಗಳ ‘ವರ್ಗಾವಣೆ’ ಕಡತಗಳು ಯಥಾಸ್ಥಿತಿಯಲ್ಲಿಯೇ ಉಳಿದಿದ್ದು, ಇದರಿಂದ ವರ್ಗಾವಣೆ ಭಾಗ್ಯಕ್ಕಾಗಿ ಕಾನ್ಸ್‌ಟೆಬಲ್‌ಗಳು ಚಾತಕ ಪಕ್ಷಿಗಳಂತೆ ಕಾಯುವುದು ಮುಂದುವರಿದಿದೆ.

ಕೌಟುಂಬಿಕ ಸಾಮರಸ್ಯ ಹಾಗೂ ವೃದ್ಧ ಪೋಷಕರನ್ನು ನೋಡಿಕೊಳ್ಳಬೇಕೆಂಬುದೂ ಸೇರಿದಂತೆ ಹಲವು ಕಾರಣಗಳಿಂದ ಇಲಾಖೆಯ ಷರತ್ತುಗಳಿಗೆ ಒಳಪಟ್ಟು ಅಂತರ ಜಿಲ್ಲೆಗಳಿಗೆ ವರ್ಗಾವಣೆ ಬಯಸಿ 4,000ಕ್ಕೂ ಹೆಚ್ಚು ಕಾನ್ಸ್‌ಟೆಬಲ್‌ಗಳು ಆನ್‌ಲೈನ್‌ (ಕೆಎಸ್‌ಪಿ) ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ವರ್ಗಾವಣೆ ಬಯಸಿರುವ ಜಿಲ್ಲೆಗಳ ಪೊಲೀಸ್‌ ಮುಖ್ಯಸ್ಥರಿಂದ (ಎಸ್ಪಿ) ನಿರಾಕ್ಷೇಪಣಾ ಪತ್ರವನ್ನೂ ಪಡೆಯಲಾಗಿದೆ. ಆದರೆ, ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ಮಾತ್ರ ವರ್ಗಾವಣೆ ಪ್ರಕ್ರಿಯೆ ವಿಳಂಬ ಮಾಡಲಾಗುತ್ತಿದೆ ಎಂಬುದು ಕಾನ್ಸ್‌ಟೆಬಲ್‌ಗಳ ಅಳಲು. ಇದೇ ವಿಳಂಬ ಧೋರಣೆ ಮುಂದುವರಿದರೆ ನ್ಯಾಯಾಲಯದ ಕದ ತಟ್ಟಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಕ್ಕಳ ಮೇಲೆ ಪರಿಣಾಮ: ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಮಕ್ಕಳ ವಿದ್ಯಾಭ್ಯಾಸದ ಮೇಲೂ ವ್ಯತಿರಿಕ್ತ ಪರಿಣಾಮ ಬೀಳುವ ಆತಂಕ ಎದುರಾಗಿದೆ. ಶಾಲೆಗಳ ದಾಖಲಾತಿ ಸಮಯವಾಗಿರುವ ಕಾರಣಕ್ಕೆ ಅರ್ಹ ಕಾನ್ಸ್‌ಟೆಬಲ್‌ಗಳು ಮಕ್ಕಳನ್ನು ವರ್ಗಾವಣೆ ಸಿಕ್ಕ ಬಳಿಕ ಅದೇ ಜಿಲ್ಲೆಯಲ್ಲಿ ಶಾಲೆಗೆ ಸೇರಿಸಬಹುದು ಎಂದು ಎದುರು ನೋಡುತ್ತಿದ್ದಾರೆ. ‘ಒಂದು ವೇಳೆ ಬೆಂಗಳೂರಿನಲ್ಲಿ ಈಗ ದಾಖಲಾತಿ ಮಾಡಿಸಿ, ಪುನಃ ವರ್ಗಾವಣೆ ಸಿಕ್ಕರೆ ಮತ್ತೊಂದು ಶಾಲೆಗೆ ಶುಲ್ಕ ಕಟ್ಟುವ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ, ಮಕ್ಕಳ ಶಾಲೆ ದಾಖಲು ತಡಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಸಾಧ್ಯವಾದಷ್ಟೂ ಬೇಗ ವರ್ಗಾವಣೆ ಪಟ್ಟಿ ಪ್ರಕಟಿಸಿದರೆ ಮಕ್ಕಳ ವಿದ್ಯಾಭ್ಯಾಸದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಕಾನ್ಸ್‌ಟೆಬಲ್‌ವೊಬ್ಬರು ನೋವು ತೋಡಿಕೊಂಡರು.

ಈ ನಡುವೆ, ಹೆಡ್‌ಕಾನ್ಸ್‌ಟೆಬಲ್‌ ಹುದ್ದೆಯಿಂದ ಎಎಸ್‌ಐ ಹುದ್ದೆಗೆ ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗಿದೆ. ಕಾನ್ಸ್‌ಟೆಬಲ್‌ ಹುದ್ದೆಯಿಂದ ಹೆಡ್‌ಕಾನ್ಸ್‌ಟೆಬಲ್‌ ಹುದ್ದೆ ಮುಂಬಡ್ತಿ ಪ್ರಕ್ರಿಯೆಯೂ ಚಾಲನೆ ಸಿಗಲಿದೆ. ಇದರಿಂದ ಅಂತರ ಜಿಲ್ಲಾ ವರ್ಗಾವಣೆ ಬಯಸಿರುವವರಿಗೆ ಮುಂಬಡ್ತಿಯೋ, ವರ್ಗಾವಣೆಯೋ ಎಂಬ ಆಯ್ಕೆ ಸಂದಿಗ್ಧತೆ ಎದುರಾಗಲಿದೆ.

‘ನಿಗದಿಯಂತೆ ಏಳು ವರ್ಷ ಸೇವಾವಧಿ ಪೂರೈಸಿ ಅಂತರ ಜಿಲ್ಲೆ ವರ್ಗಾವಣೆ ಬಯಸಲಾಗಿದೆ. ಆಗ ಇನ್ನೂ ಮುಂಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿರಲಿಲ್ಲ. ಹೀಗಾಗಿ ಬಹುತೇಕರು ಒಂದು ಬಾರಿ ಮುಂಬಡ್ತಿ ನಿರಾಕರಿಸಿದ್ದಾರೆ. ಈಗ ವರ್ಗಾವಣೆ ವಿಳಂಬವಾಗುತ್ತಿರುವ ಕಾರಣಕ್ಕೆ ಮುಂಬಡ್ತಿ ಪಡೆಯಬೇಕೋ, ವರ್ಗಾವಣೆ ಪಡೆಯಬೇಕೊ ಎಂಬ ಗೊಂದಲ ನಿರ್ಮಾಣವಾಗಿದೆ’ ಎಂದು ಪೊಲೀಸ್‌ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ನಮ್ಮ ನೋವು ಕೇಳಿ!

ಈಗ ಸೇವಾ ಜೇಷ್ಠತೆ, ಮುಂಬಡ್ತಿ ಬಿಟ್ಟು ಕೂಡ ಹೆತ್ತವರನ್ನು ನೋಡಿಕೊಂಡು ಕೆಲಸ ಮಾಡುವ ಉದ್ದೇಶದಿಂದ ಅಂತರ ಜಿಲ್ಲಾ ವರ್ಗಾವಣೆ ಬಯಸಿದ್ದೇವೆ. ಪತಿ – ಪತ್ನಿ ವರ್ಗಾವಣೆ ವಿಷಯದಲ್ಲಿ ತೋರಿದ ಉದಾರತೆ ತೋರಿ ನಮಗೂ ನೆಮ್ಮದಿಯಾಗಿ ವೃತ್ತಿ ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸಲು ಅವಕಾಶ ಮಾಡಿಕೊಡಬೇಕು’ ಎಂದು ಸಿಬ್ಬಂದಿ ನೋವು ತೋಡಿಕೊಂಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *