ಕುತಂತ್ರ ಮಾಡಿದವರಿಗೆ ಜನರೇ ಪಾಠ ಕಲಿಸ್ತಾರೆ: ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ಆಕ್ರೋಶ

ಹೈಲೈಟ್ಸ್‌:

  • ಪೋಕ್ಸೋ ಕೇಸಿನ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ಆಕ್ರೋಶ
  • ಕುತಂತ್ರ ಮಾಡುತ್ತಿರುವವರಿಗೆಲ್ಲಾ ಜನರೇ ತಕ್ಕ ಪಾಠ ಕಲಿಸಲಿದ್ದಾರೆ
  • ವಿಚಾರಣೆಗೆ ಬರುವುದಾಗಿ ಮೊದಲೇ ಹೇಳಿದ್ದೆ ಎಂದ ಮಾಜಿ ಮುಖ್ಯಮಂತ್ರಿ

ಬೆಂಗಳೂರು: ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿದ್ದ ನಾನು ಬೆಂಗಳೂರಿಗೆ ವಾಪಸ್ಸಾಗಿದ್ದೇನೆ. ನನ್ನ ವಿರುದ್ಧದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ. ಯಾರೆಲ್ಲಾಈ ರೀತಿ ಕುತಂತ್ರ ಮಾಡುತ್ತಿದ್ದಾರೋ ಅವರೆಲ್ಲರಿಗೂ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ದಿಲ್ಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,”ಜೂ.17ರಂದು ವಿಚಾರಣೆಗೆ ಬರುವುದಾಗಿ ಮೊದಲೇ ಲಿಖಿತ ರೂಪದಲ್ಲಿ ತಿಳಿಸಿದ್ದೆ. ಹೈಕೋರ್ಟ್‌ ಕೂಡ ಇದಕ್ಕೆ ಸಮ್ಮತಿಸಿದೆ. ಅಲ್ಲದೆ, ಜಾಮೀನು ರಹಿತ ಬಂಧನ ವಾರೆಂಟ್‌ಗೂ ತಡೆಯಾಜ್ಞೆ ನೀಡಿದೆ. ಕೆಲವರು ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದರು. ಆದರೆ ನಾನು ಯಾರನ್ನೂ ದೂರಲು ಇಚ್ಛಿಸುವುದಿಲ್ಲ. ವಾಸ್ತವಿಕ ಸಂಗತಿಗಳು ಎಲ್ಲರಿಗೂ ಗೊತ್ತಿದೆ,” ಎಂದು ಹೇಳಿದರು.

ಉದ್ದೇಶಪೂರ್ವಕ ರಾಜಕೀಯ ಷಡ್ಯಂತ್ರವೇ ಎಂಬ ಪ್ರಶ್ನೆಗೆ, ”ಈ ಹಂತದಲ್ಲಿ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿದೆ. ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದ್ದು, ನ್ಯಾಯ ಸಿಗುವ ನಂಬಿಕೆ ಇದೆ,” ಎಂದು ತಿಳಿಸಿದರು.

ಏನಿದು ಪ್ರಕರಣ?

ತನ್ನ ಪುತ್ರಿಯ ಮೇಲೆ ಯಡಿಯೂರಪ್ಪ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಸಿಐಡಿ ನೋಟಿಸ್ ನೀಡಿತ್ತು. ದೂರುದಾರ ಮಹಿಳೆ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು.

ಏತನ್ಮಧ್ಯೆ, ಹಿರಿಯ ನಾಯಕನ ವಿರುದ್ಧ ದೂರು ದಾಖಲಾಗಿ ತಿಂಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಂತ್ರಸ್ತೆಯ ಸಹೋದರ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಪರವಾಗಿ ವಕಾಲತ್ತು ವಹಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅಶೋಕ್ ಎನ್.ನಾಯಕ್ ಅವರನ್ನು ನೇಮಿಸಿದೆ. ಮೂಲಗಳ ಪ್ರಕಾರ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಸರ್ಕಾರವು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಬಿಜೆಪಿ ಆಕ್ರೋಶ

ಯಡಿಯೂರಪ್ಪನವರ ವಿಷಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿಚಾರದಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್‌ಗಾಂ ವಿರುದ್ಧ ಕೇಸ್‌ ಹಾಕಿದ್ದೇಕೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್‌ ಅವರು ಇದನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್‌ನವರು ರಾಜಕೀಯ ದ್ವೇಷದ ಪರಂಪರೆ ಆರಂಭಿಸಿದ್ದಾರೆ ಎಂದಿದ್ದಾರೆ.

ಇನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಒಂದೇ ನೋಟಿಸ್‌ ನೀಡಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಬಂಧನಕ್ಕೆ ಷಡ್ಯಂತ್ರ ರೂಪಿಸಿದ್ದ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಕಪಾಳಮೋಕ್ಷ ಮಾಡಿದೆ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿ ಆರೋಪಗಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ”ನಮ್ಮ ಮೇಲೆ, ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಅವರ ಮೇಲೆ ಕೇಸು ಹಾಕಿರುವುದನ್ನು ಏನೆಂದು ಕರೆಯಬೇಕು? ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಜೈಲಿಗೆ ಕಳುಹಿಸಿದ್ದನ್ನು ಏನೆಂದು ಕರೆಯಬೇಕು? ಸೇಡಿನ ರಾಜಕಾರಣ ಮಾಡುವುದು ಬಿಜೆಪಿಯವರ ಕೆಲಸ” ಎಂದು ತಿರುಗೇಟು ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *