ತುಕ್ಡೇ ತುಕ್ಡೇ ಗ್ಯಾಂಗ್ನ ಉಮರ್ ಖಾಲಿದ್ ಬಂಧನ
ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಜವಾಹರಲಾಲ್ ನೆಹರು ಯೂನಿವರ್ಸಿಟಿಯ ಸ್ಟೂಡೆಂಟ್ ಯೂನಿಯನ್ ನ ಮಾಜಿ ಸದಸ್ಯ, ಕ್ಯಾಂಪಸ್ನಲ್ಲೇ ದೇಶ ವಿರೋಧಿ ಘೋಷಣೆ ಕೂಗಿದ್ದ ಉಮರ್ ಖಾಲಿದ್ನನ್ನು ನಿನ್ನೆ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಸಿಎಎ/ಎನ್ಆರ್ಸಿ ವಿರೋಧಿ ಪ್ರತಿಭಟನೆ ಸಂದರ್ಭ ಭುಗಿಲೆದ್ದ ಹಿಂಸಾಚಾರ 72 ಗಂಟೆ ಕಾಲ ನಡೆದು, 53 ಜನ ಪ್ರಾಣ ಕಳೆದುಕೊಂಡಿದ್ದರಲ್ಲದೆ, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಹಿಂಸಾಚಾರ ಪ್ರಕರಣದ ಪಿತೂರಿಯಲ್ಲಿ ಉಮರ್ ಖಾಲಿದ್ ಪಾತ್ರವಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕ ಕಾರಣ ಪೊಲೀಸರು ಅನ್ಲಾಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಶನ್ ಆ್ಯಕ್ಟ್ (ಯುಎಪಿಎ) ಸೆಕ್ಷನ್ ಪ್ರಕಾರ ನಿನ್ನೆ ರಾತ್ರಿ ಆತನನ್ನು ಬಂಧಿಸಿದ್ದಾರೆ.
ಗಲಭೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಖಾಲಿದ್ ಗೆ ಸಮನ್ಸ್ ಕಳುಹಿಸಿದ್ದ ದೆಹಲಿ ಪೊಲೀಸ್ ವಿಶೇಷ ಘಟಕ, ಹನ್ನೊಂದು ಗಂಟೆಗಳ ವಿಚಾರಣೆ ಬಳಿಕ, ಗಲಭೆ, ಹಿಂಸಾಚಾರದ ಪಿತೂರಿಯಲ್ಲಿ ಆತ ಪಾಲುದಾರ ಎಂಬುದನ್ನು ಖಚಿತ ಪಡಿಸಿಕೊಂಡು ನಂತರ ಆತನನ್ನು ಬಂಧಿಸಿದೆ. ಗಲಭೆಗೆ ಮುನ್ನ ಖಾಲಿದ್ ಸೈಫಿ ಜತೆಗೆ ಶಾಹೀನ್ ಬಾಘ್ನಲ್ಲಿ ವೇದಿಕೆ ಹಂಚಿಕೊಂಡಿದ್ದ ಉಮರ್ ಖಾಲಿದ್ . ದೆಹಲಿ ಪೊಲೀಸರು ಆಗಸ್ಟ್ 1ರಂದು ಖಾಲಿದ್ನನ್ನು ಆತ ಶಾಹೀನ್ ಬಾಘ್ನಲ್ಲಿ ಮಾಡಿದ ಭಾಷಣಗಳ ವಿಚಾರವಾಗಿ ಪ್ರಶ್ನಿಸಿದ್ದರು.
ಯುನೈಟೆಡ್ ಅಗೇನಿಸ್ಟ್ ಹೇಟ್ ಎಂಬ ಸಂಘಟನೆಯ ಸಹ ಸಂಸ್ಥಾಪಕ ಖಾಲಿದ್ ಸೈಫಿ. ಈ ಸಂಘಟನೆಯಲ್ಲಿ ಉಮರ್ ಖಾಲಿದ್ ಕೂಡ ಸದಸ್ಯ. ಸೈಫಿಯನ್ನು ಪೊಲೀಸರು ಜೂನ್ ತಿಂಗಳಲ್ಲೇ ಬಂಧಿಸಿದ್ದರು. ಉಮರ್ ಖಾಲಿದ್ ಮತ್ತು ಅಮಾನತುಗೊಂಡಿರುವ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ನಡುವೆ ಮೀಟಿಂಗ್ ಅರೇಂಜ್ ಮಾಡುವಲ್ಲಿ ಸೈಫಿ ಪ್ರಮುಖ ಪಾತ್ರವಹಿಸಿದ್ದ. ತಾಹಿರ್ ಹುಸೇನ್ ಕೂಡ ಬಂಧನದಲ್ಲಿದ್ದಾನೆ.