ಯೂಟ್ಯೂಬರ್ ಶಬೀರ್ 2 ತಿಂಗಳಲ್ಲಿ ಕಳ್ಳಸಾಗಣೆ ಮಾಡಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 267 ಕೆಜಿ ಬಂಗಾರ

ಚೆನ್ನೈ: ಚೆನ್ನೈ ಏರ್‌ಪೋರ್ಟ್‌ನಲ್ಲಿ ತೋರಿಕೆಗೊಂದು ಗಿಫ್ಟ್‌ ಶಾಪ್ ಇಟ್ಟುಕೊಂಡು ಕೋಟ್ಯಾಂತರ ಮೊತ್ತದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಖ್ಯಾತ ಯೂಟ್ಯೂಬರ್ ಶಬೀರ್ ಅಲಿ ಹಾಗೂ ತಂಡ  ಎರಡು ತಿಂಗಳಲ್ಲಿ ದೋಚಿದ್ದ ಬಂಗಾರ ಒಂದೆರಡು ಕೋಟಿ ಮೊತ್ತದ್ದೂ ಅಲ್ಲ ಒಂದೆರಡು ಕೇಜಿಯೂ ಅಲ್ಲ ಹಾಗಿದ್ದರೆ ಮತ್ತೆಷ್ಟು? ಇಲ್ಲಿದೆ ಡಿಟೇಲ್ ಸ್ಟೋರಿ.

ಜೂನ್ 29 ಹಾಗೂ 30 ರಂದು ಈ ಚಿನ್ನ ಕಳ್ಳಸಾಗಣೆಯ ಬೃಹತ್ ಜಾಲವನ್ನು ಭೇದಿಸಿದ ಚೆನ್ನೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಚೆನ್ನೈ ಮೂಲದ ಯೂಟ್ಯೂಬರ್ 29 ವರ್ಷದ ಶಬೀರ್ ಅಲಿ ಸೇರಿದಂತೆ ಆತನ ತಂಡದ 7 ಜನರನ್ನು ಬಂಧಿಸಿದ್ದರು. ಇದಾದ ನಂತರ ಈ ಕಳ್ಳಗ್ಯಾಂಗ್‌ನ ಸರಣಿ ವಿಚಾರಣೆ ನಡೆದಿದ್ದು, ಹಲವು ಬೆಚ್ಚಿ ಬೀಳಿಸುವ ಅಂಶಗಳು ಹೊರಗೆ ಬಂದಿವೆ.

ಚೆನ್ನೈ ಏರ್‌ಪೋರ್ಟ್‌ನಲ್ಲಿ ಏರ್ ಹಬ್‌ ಎಂಬ ಗಿಫ್ಟ್ ಶಾಪನ್ನು ಇಟ್ಟುಕೊಂಡಿದ್ದ ಶಬೀರ್ ಆಲಿ ಹಾಗೂ ಆತನ ತಂಡ ಒಳಗೆ ಮಾಡುತ್ತಿದ್ದ ವ್ಯವಹಾರವೇ ಬೇರೆ. ತನ್ನ ಶಾಪ್‌ನಲ್ಲಿ 7 ಜನರಿಗೆ ಉದ್ಯೋಗ ನೀಡಿದ್ದ ಈತ ಗುದದ್ವಾರದಲ್ಲಿ ಚಿನ್ನ ಕಳ್ಳಸಾಗಣೆ ಮಾಡುವುದು ಹೇಗೆ ಎಂಬ ಬಗ್ಗೆ ಅವರಿಗೆ ತರಬೇತಿ ನೀಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ತಿಂಗಳಿಗೆ 15 ಸಾವಿರ ಸಂಬಳ ನೀಡುವುದಾಗಿ ಯುವಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದ ಆತ ತಾವು ಕಳ್ಳಸಾಗಣೆ ಮಾಡುವ ಪ್ರತಿ ಚಿನ್ನವಿರುವ ಸಿಲಿಕಾನ್ ಬಾಲ್‌ಗೆ ಹೆಚ್ಚುವರಿಯಾಗಿ 5 ಸಾವಿರ ರೂಪಾಯಿ ನೀಡುವ ಭರವಸೆ ನೀಡುತ್ತಿದ್ದ. ಅಲ್ಲದೇ ಈತನನ್ನು ಕೆಲವು ಶಾಪ್‌ಗಳ ವ್ಯಾಪಾರಿಗಳು ಈತನ ಯೂಟ್ಯೂಬ್ ಚಾನೆಲ್ ಶಾಪಿಂಗ್ ಬಾಯ್ಜ್ ಮೂಲಕವೇ ವ್ಯವಹಾರಕ್ಕೆ ಸಂಪರ್ಕಿಸುತ್ತಿದ್ದರು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

 

ಇವರು ಹೀಗೆ ಕಳ್ಳಸಾಗಣೆ ಮಾಡಿದ ಪ್ರತಿ ಸಿಲಿಕಾನ್ ಬಾಲ್‌ನಲ್ಲಿ 300 ಗ್ರಾಂನಷ್ಟು ಗೋಲ್ಡ್ ಪೇಸ್ಟ್ ಅಥವಾ ಪೌಡರ್ ಪ್ಯಾಕ್ ಆಗಿ ಇರುತ್ತಿತ್ತು. ಈ ಕಳ್ಳಸಾಗಣೆದಾರರು ವಿದೇಶದಿಂದ ಬರುವ ವಿಮಾನಗಳಿಂದ ಏರ್‌ಪೋರ್ಟ್‌ನ ಸಾಗಣೆ ಲಾಂಜ್‌ನಲ್ಲಿ ಇದನ್ನು ಸ್ವೀಕರಿಸುತ್ತಿದ್ದರು. ನಂತರ ತಮ್ಮ ಗುದನಾಳದಲ್ಲಿ ಮರೆಮಾಡುತ್ತಿದ್ದರು.  ಇದಾದ ಬಳಿಕ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿರುವ ಗ್ರಾಹಕರಿಗೆ ತಲುಪಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀಗೆ ಕೇವಲ 2 ತಿಂಗಳಲ್ಲಿ ಅವರು 167 ಕೋಟಿ ಮೊತ್ತ 267 ಕೇಜಿ ಬಂಗಾರವನ್ನು ಕಳ್ಳಸಾಗಣೆ ಮಾಡಿದ್ದಾರೆ. ಈ ಅವಧಿಯಲ್ಲಿ ಶಬೀರ್ ಅಲಿ 2.5 ಕೋಟಿ ಸಂಪಾದನೆ ಮಾಡಿರಬಹುದು ಎಂದು ಕಸ್ಟಮ್ಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಎರಡು ತಿಂಗಳಲ್ಲಿ ಇಂತಹ ಒಟ್ಟು 80 ಟ್ರಿಪ್‌ಗಳನ್ನು ಮಾಡಿರಬಹುದು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನ ಸಾಗಣೆ ಮಾಡುವುದಕ್ಕೆ ಇವರು ತರಬೇತಿ ಪಡೆದಿದ್ದರು. ತಮಗೆ ಕೆಲಸ ಒಪ್ಪಿಸುವುದಕ್ಕೆ 10 ದಿನಗಳಿಗೂ ಮೊದಲು ಈ ತರಬೇತಿ ಆರಂಭವಾಗುತ್ತಿತ್ತು. ತರಬೇತಿಯಿಂದಾಗಿ ಇವರು ಒಂದು ಗಂಟೆಗೂ ಅಧಿಕ ಕಾಲ ಬಂಗಾರವನ್ನು ಗುದದ್ವಾರದಲ್ಲಿ ಅಡಗಿಸುತ್ತಿದ್ದರು. ನೀಡಿದ ತರಬೇತಿ ಅವರ ಕೆಲಸವನ್ನು ಸುಲಭ ಮಾಡುತ್ತಿತ್ತು. ಹೀಗಾಗಿ ತಪಾಸಣೆ ಮಾಡಿದರು ಅವರು ಸುಲಭವಾಗಿ ಸಿಗುತ್ತಿರಲಿಲ್ಲ,

 

ಮೊದಲಿಗೆ ಒಂದು ಸಿಲಿಕಾನ್ ಬಾಲನ್ನು ಇಟ್ಟು ಕಳ್ಳಸಾಗಣೆ ಮಾಡುತ್ತಿದ್ದವ ನಂತರ ಮೂರು ಬಾಲ್‌ಗಳನ್ನು ಸಾಗಣೆ ಮಾಡುತ್ತಿದ್ದ, 3 ಬಾಲ್‌ ಎಂದರೆ ಸುಮಾರು ಒಂದು ಕೇಜಿಯಷ್ಟು ಚಿನ್ನ ಸಾಗಣೆ ಮಾಡುತ್ತಿದ್ದರು. ಆದರೆ ಜೂನ್‌ 29 ರಂದು ಇವರ ಗ್ರಹಚಾರ ಕೆಟ್ಟಿತ್ತೊ ಏನೋ ಎಕ್ಸರೇಯಲ್ಲಿ ಮೂರು ಸಿಲಿಕಾನ್ ಬಾಲ್ ಅಡಗಿಸಿ ಸಾಗಣೆ ಮಾಡುತ್ತಿದ್ದವ ಎಕ್ಸರೇಯಲ್ಲಿ ಸೆರೆ ಆಗಿದ್ದ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *