ಪುಟ್ಟರಾಜು ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದನ್ನು ಕಲಿಯಲಿ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ (ಜು.18): ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸ್ವಲ್ಪ ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಿದರೆ ಒಳ್ಳೆಯದು. ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದನ್ನು ಮೊದಲು ಕಲಿಯಲಿ. ತಮ್ಮ ನಾಯಕರನ್ನು ಮೆಚ್ಚಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡಿದರೆ ನಾವು ಉತ್ತರ ಕೊಡುವುದೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಟುವಾಗಿ ಹೇಳಿದರು. ಅವರ ನಾಯಕರಾಗಿರುವ ಕುಮಾರಸ್ವಾಮಿ ಅವರಿಗೆ ಜವಾಬ್ದಾರಿಯನ್ನು ನೆನಪಿಸುತ್ತಿದ್ದೇವೆ. ಅವರು ಸಂಸದರಾಗಿಲ್ಲದಿದ್ದರೆ ‌ನಾವು ಅದರ ಬಗ್ಗೆ ಚಕಾರ ಎತ್ತುತ್ತಲೇ ಇರಲಿಲ್ಲ.

ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಗೌರವ ಕಾಪಾಡಬೇಕಾಗಿದ್ದ ನಾಯಕರನ್ನು ಪ್ರಶ್ನಿಸಿದ್ದನ್ನೇ ಮುಂದಿಟ್ಟುಕೊಂಡು ಉದ್ಧಟತನದಿಂದ ಮಾತನಾಡುವುದು ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು. ಚುನಾವಣಾ ಸಮಯದಲ್ಲಿ ಪುಟ್ಟರಾಜು ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಯಾರ ಯಾರ ಜೊತೆ ಎಷ್ಟು ಬಾರಿ ಹೋಗಿದ್ದಾರೆ ಎನ್ನುವುದು ನನಗೆ ಗೊತ್ತು. ಅವರನ್ನು ಪಕ್ಷಕ್ಕೆ ನಾನು ಕರೆಯುವುದಿಲ್ಲ. ಅವರು ಬಯಸಿ ಬರುವುದಾದರೆ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಹೇಳಿದ್ದೆ. ಅವರು ಕಾಂಗ್ರೆಸ್ ಸೇರುವುದಕ್ಕೆ ನನ್ನ ವಿರೋಧವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಲೂ ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ಬರುವುದಾದರೆ ನಾವೇನೂ ಬೇಡ ಎನ್ನುವುದಿಲ್ಲ. ಅವರೂ ನನ್ನಂತಯೇ ಪಕ್ಷದೊಳಗೆ ನೋವು ಉಂಡಿರಬಹುದು. ಬಹಿರಂಗವಾಗಿ ಹೇಳಿಕೊಳ್ಳಲಾಗದಿರಬಹುದು. ಒಮ್ಮೆ ತಮ್ಮ ನಾಯಕರು ಕೇಂದ್ರದಲ್ಲಿ ಸಚಿವರಾಗಿರುವುದರಿಂದ ಅವರು ಅಲ್ಲೇ ಉಳಿಯಲೂಬಹುದು. ಹಾಗಂತ ಬಾಯಿಗೆ ಬಂದಂತೆಲ್ಲ ಮಾತನಾಡಬಾರದು ಎಂದರು. ನಾನು ರಾಜಕಾರಣವನ್ನು 30 ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ನನ್ನ ವಿರುದ್ಧ ಮಚ್ಚು, ದೊಣ್ಣೆ ಹಿಡಿದು ನಿಂತಿದ್ದವರ ಮಧ್ಯೆ ರಾಜಕಾರಣದಲ್ಲಿ ಬೆಳೆದು ಬಂದಿದ್ದೇನೆ. ರಾಜಕಾರಣ ಏನೆಂಬುದು ನನಗೂ ಗೊತ್ತಿದೆ.

ಲಘುವಾಗಿ ಮಾತನಾಡಿ ನನ್ನನ್ನು ಹೆದರಿಸಲಾಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು. ಸಂಘರ್ಷಕ್ಕೂ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಸಂಘರ್ಷವೇ ಬೇರೆ, ಅಭಿವೃದ್ಧಿಯೇ ಬೇರೆ. ಸಂಘರ್ಷ ನಮಗೂ ಇಷ್ಟವಿಲ್ಲ. ಹಾಗಾಗಿ ಮುಂದೆ ನಾವು ಅವರ ವಿಚಾರವಾಗಿ ಏನನ್ನು ಮಾತನಾಡುವುದಿಲ್ಲ. ಹಾಗಂತ ಅಭಿವೃದ್ಧಿಯನ್ನು ಕಡೆಗಣಿಸುವುದೂ ಇಲ್ಲ. ರಾಜ್ಯ ಸರ್ಕಾರದಿಂದ ಏನೆಲ್ಲ ಯೋಜನೆಗಳನ್ನು ಜಿಲ್ಲೆಗೆ ತರಬಹುದೋ ಅವೆಲ್ಲವನ್ನು ತಂದು ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಸ್ಪಷ್ಟಪಡಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *