7th Pay Commission: ಗೌರ್ಮೆಂಟ್‌ ನೌಕರರಿಗೂ ಗ್ಯಾರಂಟಿ : 7ನೇ ವೇತನ ಆಯೋಗ ತಂದ ಯೋಗಾಯೋಗ

ಹೈಲೈಟ್ಸ್‌:

  • 7ನೇ ವೇತನ ಆಯೋಗದ ಶಿಫಾರಸಿನಂತೆ ನಡೆದಿರುವ ವೇತನ ಪರಿಷ್ಕರಣೆಯು ಆಗಸ್ಟ್‌ 1 ರಿಂದ ಜಾರಿ
  • ಒಂದೆರಡು ಕೇಡರ್‌ ಹೊರತುಪಡಿಸಿ ಉಳಿದೆಲ್ಲಾ ಶ್ರೇಣಿಗಳ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ನೌಕರರಿಗೆ ಸಮನಾದ ವೇತನ ಸಿಗಲಿದೆ
  • ಪರಿಷ್ಕೃತ ಕನಿಷ್ಠ ಮೂಲ ವೇತನ 27,000 ರೂ.ಗೆ ನಿಗದಿಯಾಗಿದ್ದು, ಪರಿಷ್ಕೃತ ಗರಿಷ್ಠ ಮೂಲ ವೇತನ 2,41,200 ರೂ.ಗೆ ನಿಗದಿಯಾಗಿದೆ.

ಬೆಂಗಳೂರು: ಅಂತೂ ಇಂತೂ ರಾಜ್ಯ ಸರಕಾರಿ ನೌಕರರ ಬಹುದಿನಗಳ ಕನಸು ಈಡೇರಿದೆ. 7ನೇ ವೇತನ ಆಯೋಗದ ಆಯೋಗದ ಶಿಫಾರಸ್ಸಿನಂತೆ ಸರಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು 2022ರ ಜುಲೈ 1 ರಿಂದ ಅನ್ವಯವಾಗುವಂತೆ 2024ರ ಆಗಸ್ಟ್‌ 1 ರಿಂದ ಅನುಷ್ಠಾನಗೊಳ್ಳುತ್ತಿದೆ. ಇದರಿಂದ ಸರಕಾರಿ ನೌಕರನಿಗೆ ದಕ್ಕುವ ಪ್ರಯೋಜನಗಳೆಷ್ಟು? ಭಾರತದಲ್ಲಿ ಸರಕಾರಿ ನೌಕರರಿಗೆ ಹೆಚ್ಚು ಸಂಬಳ ಕೊಡುವ ರಾಜ್ಯ ಯಾವುದು? ಇಲ್ಲಿವೆ ಸಮಗ್ರ ಮಾಹಿತಿ.

ಸರಕಾರಿ ಕೆಲಸ ಸಿಕ್ಕರೆ ಬದುಕು ಪಾವನ ಎಂದು ಭಾವಿಸುವವರೇ ಹೆಚ್ಚು. ಆದರೆ, ಹಲವರು ”ಗೌರ್ಮೆಂಟ್‌ ಕೆಲ್ಸದಲ್ಲಿ ಸಂಬಳ ಕಮ್ಮಿ. ಅದೇ ಪ್ರೈವೇಟಲ್ಲಿ ದುಡಿದರೆ ಹತ್ತೇ ವರ್ಷದಲ್ಲಿ ಸೆಟಲ್ ಆಗ್ಬಹುದು,” ಎನ್ನುವವರಿಗೇನೂ ಕಡಿಮೆ ಇಲ್ಲ. ಒಂದು ಸತ್ಯವೆಂದರೆ, ಸರಕಾರಿ ಕೆಲಸ ಯಾವತ್ತೂ ಸರಕಾರಿ ಕೆಲಸನೇ. ಸಂಬಳ ಕಡಿಮೆಯಾದರೇನಂತೆ ಅಲ್ಲಿನ ಸಂತಪ್ತಿ, ನೆಮ್ಮದಿಗೆ ಅನ್ಯ ಹೋಲಿಕೆಗಳಿಲ್ಲ. ಅಂದಹಾಗೆ, ಈಗ ಅವರ ಸಂಬಳವೂ ಕಡಿಮೆ ಎನ್ನುವ ಹಾಗೆ ಇಲ್ಲ!

ಬದುಕಿಗೆ ಭದ್ರತೆ ಹೊಂದಿರುವ ‘ಭಾಗ್ಯಶಾಲಿ’

ರಾಜ್ಯದ 12.20 ಲಕ್ಷ ಸರಕಾರಿ ನೌಕರ ಕುಟುಂಬಗಳ ಹಣಕಾಸು ಸ್ಥಿತಿ ಇದೇ ಆಗಸ್ಟ್‌ನಿಂದ ಮತ್ತಷ್ಟು ಉತ್ತಮವಾಗಲಿದೆ. 5.20 ಲಕ್ಷ ನೌಕರರು ಮತ್ತು ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ 2.50 ಲಕ್ಷ ನೌಕರರ ಮೂಲ ವೇತನ ಹಾಗೂ 4.50 ಲಕ್ಷ ನಿವೃತ್ತ ನೌಕರರ ಪಿಂಚಣಿಯಲ್ಲಿ ಶೇ.58.50 ಏರಿಕೆಯಾಗುತ್ತಿದೆ. ಶ್ರಾವಣ ಮಾಸದ ಆಗಸ್ಟ್‌ ತಿಂಗಳ ವೇತನದಲ್ಲಿ ಪರಿಷ್ಕೃತ ವೇತನ ಮೊತ್ತ ಈ ನೌಕರ ಸಮುದಾಯದ ಕೈಸೇರುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 20,208 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತಿದೆ.

ಹಾಲಿನ ಬಾಕಿ ಬಿಡುಗಡೆ ಮಾಡಿಲ್ಲ!

ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿರುವ 8.92 ಲಕ್ಷ ಹಾಲು ಉತ್ಪಾದಕರಿಗೆ ಆಕ್ಟೋಬರ್‌ನಿಂದ 602.84 ಕೋಟಿ ರೂ. ಪ್ರೋತ್ಸಾಹಧನ ಇನ್ನೂ ಬಿಡುಗಡೆಯಾಗಿಲ್ಲ. ಆದಾಯ ಮತ್ತು ಖರ್ಚು ಸರಿದೂಗಿಸುವ ಸರ್ಕಸ್‌ನಲ್ಲಿ ನಾನಾ ಅಭಿವೃದ್ಧಿ ಅನುದಾನಗಳ ಬಿಡುಗಡೆಯೂ ಮುಂದೂಡಿಕೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲೂ ನೌಕರ ಸಮುದಾಯದ ಸಂಘಟಿತ ಒತ್ತಡಕ್ಕೆ ಮಣಿದ ಸರಕಾರ, 7ನೇ ರಾಜ್ಯ ವೇತನ ಆಯೋಗದ ಅಂತಿಮ ಶಿಫಾರಸಿನಂತೆ ವೇತನ ಮತ್ತು ಭತ್ಯೆ ಪರಿಷ್ಕರಣೆ ಮಾಡಿದೆ.

ಈ ತೀರ್ಮಾನದಿಂದ ಸರಕಾರಿ ನೌಕರರ ಕನಿಷ್ಠ ಮೂಲವೇತನ ಮಾಸಿಕ 17,000 ರೂ.ನಿಂದ 27,000 ರೂ.ಗೆ ಹೆಚ್ಚಿದ್ದು, ಗರಿಷ್ಠ ವೇತನ 1,44,000 ರೂ. ಇದ್ದದ್ದು 2,41,200 ರೂ.ಗೆ ತಲುಪುತ್ತಿದೆ. ನೌಕರರ ಕನಿಷ್ಠ ಪಿಂಚಣಿ 8,500 ರೂ. ಇದ್ದದ್ದು 13,500 ರೂ.ಗೆ ಹಾಗೂ ಗರಿಷ್ಠ ಪಿಂಚಣಿಯು 75,300 ರೂ.ನಿಂದ 1,20,600 ರೂ.ಗೆ ಹೆಚ್ಚಾಗುತ್ತಿದೆ. 2022ರ ಜು.1 ಕ್ಕೆ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿಭತ್ಯೆ ಮತ್ತು ಶೇ.27.50 ಫಿಟ್‌ಮೆಂಟ್‌ ಸೇರಿಸಿ ವೇತನ, ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ.32ರಷ್ಟು ಹೆಚ್ಚಳವಾಗಿದೆ. ಆದರೆ, ನೌಕರರಿಗೆ ಒಂದೇ ನಿರಾಶೆ ಎಂದರೆ, ವೇತನ ಮತ್ತು ಪಿಂಚಣಿ ಪರಿಷ್ಕರಣೆಯು ಪೂರ್ವಾನ್ವಯವಾಗಿ ಜಾರಿಯಾಗುತ್ತಿಲ್ಲ. ನೌಕರರ ಬೇಡಿಕೆಯಂತೆ ಏಪ್ರಿಲ್‌ 2023ರಿಂದಲೇ ಪೂರ್ವಾನ್ವಯವಾಗಿ ಪರಿಷ್ಕರಣೆಯನ್ನು ಜಾರಿ ಮಾಡಿದ್ದರೆ ಹಿಂಬಾಕಿ ಭರಿಸುವ ಮತ್ತಷ್ಟು ಹೊರೆಯೂ ಬೊಕ್ಕಸದ ಮೇಲೆ ಬೀಳುತ್ತಿತ್ತು.

ಕಾಲ್ಪನಿಕ ವೇತನ

7ನೇ ವೇತನ ಆಯೋಗದ ಶಿಫಾರಸಿನಂತೆ ನಡೆದಿರುವ ವೇತನ ಪರಿಷ್ಕರಣೆಯು ಆಗಸ್ಟ್‌ 1 ರಿಂದ ಜಾರಿಯಾಗುತ್ತಿದ್ದು, 2022ರ ಜುಲೈ 1ರಿಂದ ಕಾಲ್ಪನಿಕ ವೇತನ ನಿಗದಿಯಾಗಿದೆ. ಇದರಿಂದ ಸೇವಾ ನಿವೃತ್ತಿ ಹೊಂದಿದವರಿಗೆ ಮಾತ್ರ ಅನುಕೂಲವಾಗಲಿದೆ. 2022ರ ಜುಲೈ 1 ರಲ್ಲಿದ್ದ ಶೇ.31 ಡಿಎ ಮತ್ತು ಈಗಿನ ಶೇ.42 ಡಿಎ ನಡುವಿನ ಶೇ.11 ವ್ಯತ್ಯಾಸವನ್ನು ಲೆಕ್ಕಕ್ಕೆ ತೆಗೆದುಕೊಂಡು ನಿವೃತ್ತಿ ವೇತನ ನಿಗದಿಯಾಗುತ್ತದೆ. ಹಾಲಿ ನೌಕರರಿಗೆ ಆಗಸ್ಟ್‌ ತಿಂಗಳಿಂದ ಪರಿಷ್ಕೃತ ವೇತನ ಮತ್ತು ಭತ್ಯೆಗಳ ಮೊತ್ತ ಸಿಗಲಿದೆ. ಅಂದರೆ, ಹಿಂಬಾಕಿ ಸಿಗುವುದಿಲ್ಲ.

ಕೇಂದ್ರ ಸರಕಾರಿ ನೌಕರರಿಗೆ ಸ್ಯಾಲರಿ ಸಮ

ಕೇಂದ್ರ ನೌಕರರಿಗೆ ಸರಿಸಮಾನ ವೇತನ ನೀಡಬೇಕೆಂಬ ರಾಜ್ಯ ಸರಕಾರಿ ನೌಕರರ ಬೇಡಿಕೆಯೂ 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಜಾರಿಯಿಂದ ಈಡೇರಿದೆ. ಒಂದೆರಡು ಕೇಡರ್‌ ಹೊರತುಪಡಿಸಿ ಉಳಿದೆಲ್ಲಾ ಶ್ರೇಣಿಗಳ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ನೌಕರರಿಗೆ ಸಮನಾದ ವೇತನ ಸಿಗಲಿದೆ. ಕೇಂದ್ರದಲ್ಲಿ ನಿರೀಕ್ಷೆಯಂತೆ ಮುಂದಿನ ಜುಲೈನಲ್ಲಿ 8ನೇ ಆಯೋಗದ ವರದಿ ಜಾರಿಯಾದರೆ ಮಾತ್ರ ವ್ಯತ್ಯಾಸವಾಗಲಿದೆ.

ಕರ್ನಾಟಕಕ್ಕಿಂತ ಕೇರಳ ನೌಕರರ ಸಂಬಳ ಹೆಚ್ಚು

ಮಹಾರಾಷ್ಟ್ರ, ಬಿಹಾರ, ಪಂಜಾಬ್‌ ಸೇರಿದಂತೆ ದೇಶದ 23 ರಾಜ್ಯಗಳು ತಮ್ಮ ನೌಕರರ ವೇತನ ಪರಿಷ್ಕರಣೆಗೆ ಪ್ರತ್ಯೇಕ ಆಯೋಗಗಳನ್ನು ರಚಿಸುತ್ತಿಲ್ಲ. ಬದಲಿಗೆ, ಕೇಂದ್ರದ ಆಯೋಗಗಳ ಶಿಫಾರಸುಗಳನ್ನೇ ಅನುಸರಿಸುತ್ತಿವೆ. ಆದರೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳು ಮಾತ್ರ ತಮ್ಮದೇ ಪ್ರತ್ಯೇಕ ವೇತನ ಆಯೋಗಗಳನ್ನು ರಚಿಸಿ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡುತ್ತಿವೆ. ನೆರೆಯ ಕೇರಳ ರಾಜ್ಯವು ನಿಗದಿಯಂತೆ ಪ್ರತಿ 5 ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸುತ್ತಿದ್ದು, ಕರ್ನಾಟಕದ ಪರಿಷ್ಕೃತ ವೇತನ ಶ್ರೇಣಿಗಿಂತ ಈ ರಾಜ್ಯದಲ್ಲಿ ಮಾತ್ರ ನೌಕರರ ವೇತನ ಹೆಚ್ಚಿದೆ.

ವೇತನದ ಜತೆ ಏನೆಲ್ಲ ಹೆಚ್ಚಳ?

ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಜತೆಗೆ, ಹಲವು ಭತ್ಯೆಗಳನ್ನೂ ಹೆಚ್ಚಳ ಮಾಡಲಾಗಿದೆ. ಮನೆ ಬಾಡಿಗೆ ಭತ್ಯೆಯಲ್ಲಿ(ಎಚ್‌ಆರ್‌ಎ) ಶೇ.32 ಹೆಚ್ಚಳವಾಗಿದೆ. ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ 400 ರೂ.ನಿಂದ 650ಕ್ಕೆ ಹಾಗೂ ಗರಿಷ್ಠ 3,000 ರೂ.ನಿಂದ 5 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ವೈದ್ಯಕೀಯ ಭತ್ಯೆಯೂ ಮಾಸಿಕ 500 ರೂ. ಏರಿಕೆಯಾಗಿದೆ. ನಗರ ಪರಿಹಾರ ಭತ್ಯೆಗಳನ್ನೂ ನಾನಾ ವೃಂದಗಳಿಗೆ ಮಾಸಿಕ 250 ರೂ.ಗಳಿಂದ 300 ರೂ.ವರೆಗೆ ಏರಿಕೆ ಮಾಡಲಾಗಿದೆ.

– ನೌಕರರ ವಿಶೇಷ ಭತ್ಯೆಗಳು, ಸಮವಸ್ತ್ರ ಭತ್ಯೆ, ವಿಶೇಷ ಚೇತನರ ಭತ್ಯೆಗಳು, ವಾಹನ ಖರೀದಿ ಹಾಗೂ ಗೃಹ ನಿರ್ಮಾಣ ಮುಂಗಡ ಸಂಬಂಧದ 7ನೇ ವೇತನ ಆಯೋಗ ಮಾಡಿರುವ ಇನ್ನಷ್ಟು ಶಿಫಾರಸುಗಳು ಜಾರಿಯಾಗಲು ಸಾಕಷ್ಟು ಸಮಯಾವಕಾಶ ಹಿಡಿಯಲಿದೆ. ಈ ಸಂಬಂಧ ಹಣಕಾಸು ಆಯೋಗವು ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಪ್ರತ್ಯೇಕ ಆದೇಶಗಳನ್ನು ಹೊರಡಿಸಲಿದೆ.

ಇನ್ನೇನು ಬೇಡಿಕೆಗಳು ಬಾಕಿ?

ಎನ್‌ಪಿಎಸ್‌ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಮರು ಜಾರಿಗೊಳಿಸಬೇಕು ಎಂಬುದು ನೌಕರ ಬಹುದಿನಗಳ ಹಕ್ಕೊತ್ತಾಯ. ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2023ರ ಮಾರ್ಚ್ 1ರಂದು ಸಮಿತಿಯನ್ನು ಸರಕಾರ ರಚಿಸಿತ್ತು. ಆದರೆ, ಸಮಿತಿ ಈವರೆಗೆ ಯಾವುದೇ ಸಭೆ ನಡೆಸಿಲ್ಲ.

ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಾಗಿ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆಎಎಸ್‌ಎಸ್‌)’ 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈ ಯೋಜನೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಎರಡು ಬೇಡಿಕೆಗಳಷ್ಟೇ ಇನ್ನು ಬಾಕಿ ಉಳಿದಿವೆ.

ನೌಕರರು ಹೋರಾಟಕ್ಕಿಳಿದರೆ, ರಾಜ್ಯ ದಿವಾಳಿಯೆಂಬ ಸಂದೇಶ ರವಾನೆ!

– ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ 7ನೇ ವೇತನ ಆಯೋಗ ಅಂತಿಮ ವರದಿ ನೀಡಿತ್ತು. ಚುನಾವಣೆ ಬಳಿಕ ಜಾರಿ ಮಾಡುವ ಭರವಸೆಯನ್ನು ಸರಕಾರ ನೀಡಿತ್ತು. ಆದರೆ, ಸಂಪನ್ಮೂಲ ಕೊರತೆ ಕಾರಣಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಭರಿಸಲು ಸಾಧ್ಯವಿಲ್ಲಎಂಬ ಹಣಕಾಸು ಇಲಾಖೆ ತಕರಾರು ಕಾರಣಕ್ಕೆ ಈ ವಿಚಾರದಲ್ಲಿ ಸರಕಾರ ತೀರ್ಮಾನವನ್ನು ಮುಂದೂಡುತ್ತಾ ಬಂದಿತ್ತು.
– ಇದನ್ನು ಅವಲೋಕಿಸಿದ ನೌಕರ ಸಂಘಟನೆಗಳು ಈ ಮಾಸಾಂತ್ಯಕ್ಕೆ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಇಳಿಯುವ ಎಚ್ಚರಿಕೆ ನೀಡಿದ್ದವು. ಈ ಸಂಬಂಧ ನೌಕರರ ಸಂಘಟನೆಗಳು ಮುಖ್ಯ ಕಾರ್ಯದರ್ಶಿಗೆ ನಿಯಮದಂತೆ 15 ದಿನ ಮುಂಚಿತವಾಗಿ ನೋಟಿಸ್‌ ನೀಡಿದ್ದವು.
– ನೌಕರರು ಹೋರಾಟದ ಹಾದಿ ತುಳಿದರೆ, ರಾಜ್ಯ ದಿವಾಳಿಯಾಗಿದೆ ಎಂಬ ಆಪಾದನೆ ಮಾಡಿಕೊಂಡು ಬಂದಿರುವ ಪ್ರತಿಪಕ್ಷಗಳ ಆರೋಪಕ್ಕೆ ಬಲ ಸಿಗುತ್ತದೆ ಎಂಬ ಲೆಕ್ಕಾಚಾರಕ್ಕೆ ಬಂದು ಸೋಮವಾರದ ಸಂಪುಟ ಸಭೆಯಲ್ಲಿ ನೌಕರರ ಬೇಡಿಕೆಗೆ ಅಸ್ತು ಎಂದಿದೆ.

ಪರಿಷ್ಕರಣೆ ಬಳಿಕ ವೇತನ ಎಷ್ಟು?

– ಕನಿಷ್ಠ
ಪರಿಷ್ಕೃತ ಕನಿಷ್ಠ ಮೂಲ ವೇತನ 27,000 ರೂ.ಗೆ ನಿಗದಿಯಾಗಿದ್ದು (ಹಳೆಯ ಮೂಲ ವೇತನ 17,000 ರೂ.), ವಾರ್ಷಿಕ ವೇತನ ಬಡ್ತಿ ನಂತರ ಆ.1, 2024 ಕ್ಕೆ ಮೂಲವೇತನ 28,300 ರೂ. ಆಗಲಿದೆ. ಈಗಿನ ಡಿಎ ಶೇ.42 ರಂತೆ 2,349, ಎಚ್‌ಆರ್‌ಎ ಶೇ..7.5 ಮೊತ್ತ ಹಾಗೂ ವೈದ್ಯಕೀಯ ಭತ್ಯೆ 500 ರೂ. ಸೇರಿ ಒಟ್ಟು ವೇತನ 33,271ರೂ. ಆಗಲಿದೆ.

– ಗರಿಷ್ಠ

ಪರಿಷ್ಕೃತ ಗರಿಷ್ಠ ಮೂಲ ವೇತನ 2,41,200 ರೂ.ಗೆ ನಿಗದಿಯಾಗಿದ್ದು (ಹಳೆಯ ಮೂಲ ವೇತನ 1,44,000), ವಾರ್ಷಿಕ ವೇತನ ಬಡ್ತಿ ನಂತರ ಆ.1, 2024 ಕ್ಕೆ ಮೂಲವೇತನ 2,51,200 ರೂ. ಆಗಲಿದೆ. ಈಗಿನ ಡಿಎ ಶೇ.42ರಂತೆ 20,850 ರೂ, ಎಚ್‌ಆರ್‌ಎ ಶೇ..7.5 ಮೊತ್ತ ಹಾಗೂ ವೈದ್ಯಕೀಯ ಭತ್ಯೆ ಸೇರಿ ಒಟ್ಟು ವೇತನ 2,91,390 ರೂ. ಆಗಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *