ಕೊಲೆ ಪ್ರಕರಣ: 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಿರ್ದೇಶಕ ಗಜೇಂದ್ರ ಬಂಧನ!

ಹೈಲೈಟ್ಸ್‌:

  • ಕೊತ್ತ ರವಿ ಬರ್ಬರ ಹತ್ಯೆ ಪ್ರಕರಣದಲ್ಲಿ ಕನ್ನಡ ನಿರ್ದೇಶಕನ ಬಂಧನ
  • 2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ನಡೆದಿತ್ತು ಕೊತ್ತ ರವಿ ಭೀಕರ ಹತ್ಯೆ
  • ಕೊತ್ತ ರವಿ ಕೊಲೆ ಕೇಸ್‌ನಲ್ಲಿ ಗಜ ಅಲಿಯಾಸ್ ಗಜೇಂದ್ರ 8ನೇ ಆರೋಪಿ
  • ಅಂದು 1 ವರ್ಷ ಜೈಲಿನಲ್ಲಿದ್ದ ಗಜ: ಬಳಿಕ ನಾಪತ್ತೆಯಾಗಿದ್ದ ಗಜೇಂದ್ರ ಈಗ ಲಾಕ್!

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇಡೀ ಸ್ಯಾಂಡಲ್‌ವುಡ್‌ ಅನ್ನೇ ಗಢಗಢ ನಡುಗಿಸಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಭಾರೀ ಸುದ್ದಿ, ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗಲೇ, ಮತ್ತೊಂದು ಪ್ರಕರಣದಲ್ಲಿ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಅರೆಸ್ಟ್ ಆಗಿದ್ದಾರೆ.

ಹೌದು.. 20 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಕನ್ನಡ ನಿರ್ದೇಶಕ ಗಜ ಅಲಿಯಾಸ್ ಗಜೇಂದ್ರ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ, 20 ವರ್ಷಗಳಿಂದ ಕನ್ನಡ ಚಿತ್ರ ನಿರ್ದೇಶಕ ಗಜೇಂದ್ರ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರ ಕೈಗೆ ಗಜೇಂದ್ರ ಸಿಕ್ಕಿಬಿದ್ದಿದ್ದಾರೆ. 20 ವರ್ಷಗಳಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಗಜೇಂದ್ರ ಈಗ ಜೈಲು ಪಾಲಾಗಿದ್ದಾರೆ.

ಏನಿದು ಪ್ರಕರಣ?

ಬರೋಬ್ಬರಿ 20 ವರ್ಷಗಳ ಹಿಂದೆ.. ಅಂದ್ರೆ 2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭೀಕರ ಹತ್ಯೆ ನಡೆದಿತ್ತು. ರೌಡಿ ಶೀಟರ್‌ ಕೊತ್ತ ರವಿ ಎಂಬಾತನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಚಂದ್ರಪ್ಪ, ಅಲುಮೀನಿಯಮ್ ಬಾಬು, ಗಜ ಅಲಿಯಾಸ್ ಗಜೇಂದ್ರ ಮುಂತಾದವರ ಹೆಸರು ಕೇಳಿಬಂದಿತ್ತು. ಕೊತ್ತ ರವಿ ಕೊಲೆ ಕೇಸ್‌ನಲ್ಲಿ ನಿರ್ದೇಶಕ ಗಜ ಅಲಿಯಾಸ್ ಗಜೇಂದ್ರ ಎಂಟನೇ ಆರೋಪಿಯಾಗಿದ್ದರು.

ಕೊತ್ತ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಜ ಅಲಿಯಾಸ್ ಗಜೇಂದ್ರ ಹಾಗೂ ಇತರರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವರ್ಷ ಕಾಲ ಗಜೇಂದ್ರ ಜೈಲಿನಲ್ಲಿದ್ದರು. ಆನಂತರ ಜಾಮೀನು ಪಡೆದು ಗಜ ಅಲಿಯಾಸ್ ಗಜೇಂದ್ರ ಹೊರಬಂದಿದ್ದರು. ಹೊರಬಂದ ಬಳಿಕ ಜಾಮೀನಿನ ನಿಯಮಗಳನ್ನ ಗಜೇಂದ್ರ ಪಾಲಿಸಲಿಲ್ಲ. ಹಲವು ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ಗಜೇಂದ್ರ ತಲೆಮರೆಸಿಕೊಂಡಿದ್ದರು. 20 ವರ್ಷಗಳಿಂದ ಯಾರ ಕೈಗೂ ಗಜೇಂದ್ರ ಸಿಕ್ಕಿರಲಿಲ್ಲ.

20 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಗಜ ಅಲಿಯಾಸ್ ಗಜೇಂದ್ರ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸಿಸಿಬಿ ಪೊಲೀಸರ ಕೈಗೆ ಗಜೇಂದ್ರ ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ಗಜೇಂದ್ರರನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತೆ ಜೈಲಿಗೆ ಕಳುಹಿಸಲಾಗಿದೆ.

ಯಾವ ಚಿತ್ರ ನಿರ್ದೇಶಿಸಿದ್ದರು?

ಗಜ ಅಲಿಯಾಸ್ ಗಜೇಂದ್ರ ಈ ಹಿಂದೆ ‘ಪುಟಾಣಿ ಪವರ್’ ಹಾಗೂ ‘ರುದ್ರ’ ಎಂಬ ಚಿತ್ರಗಳನ್ನ ನಿರ್ದೇಶನ ಮಾಡಿದ್ದರು. ತಮಿಳಿನ ಒಂದೆರಡು ಚಿತ್ರಗಳನ್ನೂ ಗಜೇಂದ್ರ ಮಾಡಿದ್ದರಂತೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *