IT BT Sector: ಇನ್ಮುಂದೆ ದಿನಕ್ಕೆ 9ರ ಬದಲು 14 ಗಂಟೆ ಕೆಲಸ ಮಾಡುವಂತೆ ಪ್ರಸ್ತಾವನೆ! ಐಟಿ ವಲಯದಿಂದ ಭಾರೀ ವಿರೋಧ
ಬೆಂಗಳೂರು: ರಾಜ್ಯದಲ್ಲಿ ಐಟಿ ಬಿಟಿ ವಲಯದಲ್ಲಿ (IT Employees) ಕೆಲಸ ಮಾಡುವ ನೌಕರರಿಗೆ ಬಿಗ್ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಇನ್ಮುಂದೆ ಐಟಿ ನೌಕರರು ದಿನಕ್ಕೆ 9 ಗಂಟೆ ಅಲ್ಲ, ಬರೋಬ್ಬರಿ 14 ಗಂಟೆ (14 Hours Work) ಕೆಲಸ ಮಾಡುವ ಪ್ರಸ್ತಾವ ಬಂದಿದೆ.
ಹೌದು.. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆ ತರಲು ನಿರ್ಧರಿಸಿದ್ದ ರಾಜ್ಯ ಸರ್ಕಾರಕ್ಕೆ ಕೈಗಾರಿಕೆಗಳು ಮತ್ತು ಉದ್ಯಮ ವಲಯಗಳಿಂದ ತೀವ್ರ ಒತ್ತಡ ಬಂದ ನಂತರ ಆ ಮಸೂದೆಗೆ ತಡೆ ನೀಡಿ ಜನರಿಂದ ಟೀಕೆಗೆ ಗುರಿಯಾಗಿತ್ತು. ಇದೀಗ ಪುನಃ ರಾಜ್ಯ ಸರ್ಕಾರ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇರಿಸಲು ಮುಂದಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ಐಟಿ ಮತ್ತು ಐಟಿಇಎಸ್ ವಲಯದಲ್ಲಿ ಕೆಲಸದ ಅವಧಿಯನ್ನು ದಿನಕ್ಕೆ 9 ಗಂಟೆಗಳಿಂದ 14 ಗಂಟೆಗಳವರೆಗೆ ಹೆಚ್ಚಿಸಲು ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದ್ದು, ಇದಕ್ಕೆ ಐಟಿ ನೌಕರರ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಮುಂದೆ ಐಟಿ ಬಿಟಿ ನೌಕರರು 9 ಗಂಟೆಯಲ್ಲ, 14 ಗಂಟೆ ಕೆಲ್ಸ ಮಾಡಬೇಕು ಎನ್ನುವ ಕರ್ನಾಟಕ ಶಾಪ್ಸ್ ಕಮರ್ಷಿಯಲ್ ಎಸ್ಟಾಬ್ಲಿಶ್ಮೆಂಟ್ ಆ್ಯಕ್ಟ್ 2024 ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದ್ದು, ಮುಂಗಾರು ಅಧಿವೇಶನದಲ್ಲಿ ಐಟಿ ನೌಕರರ ಕೆಲಸದ ಸಮಯ ವಿಸ್ತರಣೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಹೀಗಾಗಿ ರಾಜ್ಯ ಸರ್ಕಾರದ ಮತ್ತೊಂದು ಪ್ರಸ್ತಾಪಿತ ತಿದ್ದುಪಡಿ ಕಾನೂನು ವಿವಾದಕ್ಕೆ ಕಾರಣವಾಗಿದ್ದು, ಇದು ಐಟಿ ಕ್ಷೇತ್ರಗಳಲ್ಲಿ ದುಡಿಯುವ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಐಟಿ ಬಿಟಿಗೆ ಶಾಕ್ ಯಾಕೆ?
ಸದ್ಯ ಐಟಿ ಕಾರ್ಮಿಕರು 9 ಗಂಟೆ ಕೆಲಸ ಮಾಡುತ್ತಿದ್ದು, ಇದನ್ನು 14 ಗಂಟೆಗೆ ವಿಸ್ತರಿಸಲು ಒತ್ತಡ ಹೇರಲಾಗ್ತಿದೆ. ಕಾರ್ಮಿಕ ಇಲಾಖೆಯಿಂದಲೇ ಈ ಕಾನೂನು ಜಾರಿಗೆ ಸಿದ್ಧತೆ ನಡೆಸಲಾಗಿದ್ದು, ಅದೇ ಸಂಬಳಕ್ಕೆ ಕೆಲಸದ ಸಮಯ ವಿಸ್ತರಣೆ ಮಾಡಲಾಗುತ್ತದೆ, ಆದರೆ ಹೆಚ್ಚುವರಿ ಕೆಲಸಕ್ಕೆ ಯಾವುದೇ ಸಂಬಳ ನೀಡಲಾಗುತ್ತಿಲ್ಲ ಎನ್ನಲಾಗಿದೆ.ಈ ಹಿನ್ನೆಲೆ ಐಟಿ ಕಾರ್ಮಿಕರ ಅಸೋಸಿಯೇಷನ್ ಜೊತೆಗೆ ಕಾರ್ಮಿಕ ಇಲಾಖೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಮಿಕ ಇಲಾಖೆ ಐಟಿ ಕಾರ್ಮಿಕರ ಅಸೋಸಿಯೇಷನ್ ಜೊತೆಗೆ ನಡೆಸಿದ ಸಭೆಯಲ್ಲಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ನೌಕರರು 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ ಹಾಗೂ ಹಿಂಸೆ ಉಂಟಾಗುತ್ತದೆ. ಸರ್ಕಾರ ಈ ಕಾನೂನು ತರಬಾರದೆಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೇ, ಈಗಾಗಲೇ ಈ ಬಗ್ಗೆ ಸರ್ಕಾರ ಮತ್ತು ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗಿದ್ದು, ಮಸೂದೆ ಮಂಡಣೆ ಕೈ ಬಿಡುವಂತೆ ಐಟಿ ಬಿಟಿ ನೌಕರರ ಅಸೋಸಿಯೇಷನ್ ಪತ್ರದಲ್ಲಿ ಉಲ್ಲೇಖಿಸಿದೆ.
ದಿನಕ್ಕೆ 14 ಗಂಟೆ ಕೆಲಸ ಮಾಡುವ ಪ್ರಸ್ತಾವನೆ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಐಟಿ / ಐಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ, ಈ ರೀತಿಯ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದು ಜನರ ದೈಹಿಕ, ಮಾನಸಿಕ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತೆ. ವಾರಕ್ಕೆ 65 ಗಂಟೆಗಿಂತ ಜಾಸ್ತಿ ಕೆಲಸ ಮಾಡೋರಲ್ಲಿ ಸ್ಟ್ರೋಕ್ ಪ್ರಮಾಣ ಹೆಚ್ಚಾಗಿರುತ್ತೆ. ಇದರಿಂದ ಸಾವು ಕೂಡ ಸಂಭವಿಸಬಹುದೆಂದು WHO ಹೇಳಿದೆ, 65 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ್ರೆ ಹೃದಯ ಸಂಬಂಧ ಸಮಸ್ಯೆ ಕೂಡ ಎದುರಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಲದೇ, 9 ಗಂಟೆ ಅಂತ ಹೇಳಿ ಕೆಲ ಕಂಪನಿಗಳು ಈಗಾಗಲೇ ಹೆಚ್ಚು ಕೆಲಸ ಮಾಡಿಸುತ್ತೆ ಎಂದಿರುವ ಸುಹಾಸ್ ಅಡಿಗ, 14 ಗಂಟೆ ಕೆಲಸ ಮಾಡಿದ್ರೆ ಐಟಿ ನೌಕರರ ಡಿಪ್ರೆಷನ್ ಗೆ ಕಾರಣವಾಗುತ್ತೆ. 14 ಗಂಟೆ ಕೆಲಸ ಅಂದ್ರೆ ಜರ್ನಿ ಎಲ್ಲ ಸೇರಿ 18-20 ಗಂಟೆ ಟೈಂ ಬೇಕಾಗುತ್ತೆ. ಇದು ಡಿಪ್ರೆಷನ್ ಮಾತ್ರವಲ್ಲ, ಕೌಟುಂಬಿಕ ಸಮಸ್ಯೆಗೂ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಕೆಲಸದ ಅವಧಿಯನ್ನ ವಿಸ್ತರಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
14 ಗಂಟೆ ಕೆಲ್ಸ ಮಾಡಬೇಕು ಎನ್ನುವ ಕರ್ನಾಟಕ ಶಾಪ್ಸ್ ಕಮರ್ಷಿಯಲ್ ಎಸ್ಟಾಬ್ಲಿಶ್ಮೆಂಟ್ ಆ್ಯಕ್ಟ್ 2024 ಮಸೂದೆಯನ್ನು ಮಂಡಿಸುವ ಪ್ರಸ್ತಾವಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದು ಸರ್ಕಾರದ ಬುಡಕ್ಕೆ ಬರೋದ್ರಲ್ಲಿ ಅನುಮಾನವೇ ಇಲ್ಲ.