‘ಒಂದೇ ಸಲ ಭೇಟಿಯಾಗಿದ್ದ ದರ್ಶನ್‌ರನ್ನು ನಾನು ಯಾಕೆ ಜೈಲಿನಲ್ಲಿ ಭೇಟಿ ಮಾಡ್ಬೇಕು ಅಂತ ಗೊತ್ತಿಲ್ಲ!’: ನಟ ರಾಜ್ ಬಿ ಶೆಟ್ಟಿ

ಹೈಲೈಟ್ಸ್‌:

  • ಕಳೆದ ಎರಡು ತಿಂಗಳಿನಿಂದ ಪೊಲೀಸ್ ಠಾಣೆ, ಜೈಲಿನಲ್ಲಿಯೇ ಇರುವ ದರ್ಶನ್
  • ನಟ ದರ್ಶನ್ ವಿರುದ್ಧ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪ ಇದೆ
  • ನಟ ದರ್ಶನ್ ಅವರನ್ನು ಕೆಲ ನಟರು, ನಿರ್ದೇಶಕರು ಭೇಟಿ ಮಾಡಿದ್ದಾರೆ
  • ನೀವು ಯಾವಾಗ ದರ್ಶನ್ ಅವರನ್ನು ಭೇಟಿ ಮಾಡ್ತೀರಿ ಎಂದು ರಾಜ್ ಬಿ ಶೆಟ್ಟಿಗೆ ಪ್ರಶ್ನೆ ಮಾಡಲಾಗಿತ್ತು
  • ರಾಜ್ ಬಿ ಶೆಟ್ಟಿ ಅವರು ಉತ್ತರ ನೀಡಿದ ಬಗೆ ಅನೇಕರಿಗೆ ಇಷ್ಟವಾಗಿದೆ

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾಳೆ. ರೇಣುಕಾಸ್ವಾಮಿ ಕೊಲೆ ನಡೆದು 2 ತಿಂಗಳಾಗುತ್ತ ಬಂತು. ಈಗಾಗಲೇ ಕೆಲ ನಟ, ನಿರ್ದೇಶಕರು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ಸಹೋದರ ದಿನಕರ್ ತೂಗುದೀಪ ಅವರು ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಈಗ ನಟ ರಾಜ್ ಬಿ ಶೆಟ್ಟಿ ಅವರಿಗೆ ದರ್ಶನ್ ಅವರನ್ನು ಯಾವಾಗ ಭೇಟಿ ಮಾಡ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ರಾಜ್ ಬಿ ಶೆಟ್ಟಿ ಅವರು ನೀಡಿದ ಉತ್ತರ ಅನೇಕ ಗಮನಸೆಳೆದಿದೆ.

ಯಾರು? ಯಾರು ಭೇಟಿ ಮಾಡಿದ್ರು?

ಜೈಲಿನಲ್ಲಿರುವ ಖೈದಿಗಳನ್ನು ಹೊರಗಡೆಯವರು ಹಾಗೆಲ್ಲ ಹೋಗಿ ಭೇಟಿ ಮಾಡಲು ಆಗೋದಿಲ್ಲ. ಇದಕ್ಕೂ ರೂಲ್ಸ್ ಇದೆ. ಹಾಗಾಗಿ ಇಲ್ಲಿಯವರೆಗೆ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ನೆನಪಿರಲಿ ಪ್ರೇಮ್, ವಿನೋದ್ ಪ್ರಭಾಕರ್, ತರುಣ್ ಸುಧೀರ್, ಧನ್ವೀರ್, ಸಾಧುಕೋಕಿಲ ಮುಂತಾದವರು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.

ನಟ ರಾಜ್ ಬಿ ಶೆಟ್ಟಿ ಅವರ ‘ರೂಪಾಂತರ’ ಸಿನಿಮಾದ ಖುಷಿಯಲ್ಲಿದ್ದಾರೆ. ಇವರ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಾಜ್ ಬಿ ಶೆಟ್ಟಿಗೆ ದರ್ಶನ್ ಅವರನ್ನು ಯಾವಾಗ ಭೇಟಿ ಮಾಡ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ರಾಜ್ ಬಿ ಶೆಟ್ಟಿ ನೀಡಿದ ಉತ್ತರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜ್ ಬಿ ಶೆಟ್ಟಿ ಹೇಳಿದ್ದೇನು?

“ನನಗೆ ಆ ಥರದ ಪರಿಚಯ ಇಲ್ಲ. ಸಿನಿಮಾದ ಟ್ರೇಲರ್‌ ರಿಲೀಸ್‌ ವೇಳೆ ಒಂದೇ ಸಲ ವೇದಿಕೆಯೊಂದರಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ದರ್ಶನ್ ಅವರೊಬ್ಬ ಒಳ್ಳೆಯ ವ್ಯಕ್ತಿ. ನಾನು ಅವರನ್ನು ಭೇಟಿ ಮಾಡಿದಾಗ ಅವರು ನಮ್ಮ ಸಿನಿಮಾವನ್ನು ಹೊಗಳಿದರು. ಅದು ಅವರ ಒಳ್ಳೆಯ ಗುಣ. ಒಂದು ಸಲ ಭೇಟಿ ಮಾಡಿದ ನಾನು ಯಾಕೆ ಜೈಲಿಗೆ ಹೋಗಬೇಕು ಅಂತ ಗೊತ್ತಿಲ್ಲ. ಈಗ ಘಟನೆ ಆಗಿ ಹೋಗಿದೆ, ಆಗಿ ಹೋದದ್ದನ್ನು ಮಾತಾಡಿ ಮಾತಾಡಿ ಪ್ರಯೋಜನ ಇಲ್ಲ. ದೊಡ್ಡ ವ್ಯಕ್ತಿಗಳಿಗೆ ಶಿಕ್ಷೆ ಆಗೋದಿಲ್ಲ ಎನ್ನುವ ಮಾತಿತ್ತು. ಆದರೆ ಈ ಕೇಸ್ ಹ್ಯಾಂಡಲ್ ಮಾಡಿದ ರೀತಿಯನ್ನು ನಿಜಕ್ಕೂ ಮೆಚ್ಚಬೇಕು. ದರ್ಶನ್ ಅವರ ಕೇಸ್ ಏನಾಗತ್ತೆ ಅಂತ ನೋಡೋಣ” ಎಂದು ನಟ ರಾಜ್ ಬಿ ಶೆಟ್ಟಿ ಅವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಜಾಮೀನು ಸಿಗತ್ತಾ?

ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರಂಭದಲ್ಲಿ ಈ ಕೇಸ್ ಬಗ್ಗೆ ಕಲಾವಿದರು ಯಾರೂ ಮಾತನಾಡಲು ಮುಂದೆ ಬರಲಿಲ್ಲ. ಆ ನಂತರದಲ್ಲಿ ಕೆಲ ಕಿರುತೆರೆ, ಸ್ಯಾಂಡಲ್‌ವುಡ್ ಕಲಾವಿದರು ದರ್ಶನ್ ಪರವಾಗಿ ಮಾತನಾಡಲು ಆರಂಭಿಸಿದರು. ಇನ್ನು ಕೆಲ ನಟ, ನಟಿಯರು, ನಿರ್ದೇಶಕರು ರೇಣುಕಾಸ್ವಾಮಿ ಕೊಲೆಯನ್ನು ವಿರೋಧಿಸಿದ್ದಾರೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ದರ್ಶನ್ ಅವರಿಗೆ ಜಾಮೀನು ಸಿಗುತ್ತದೆಯೇ? ಇಲ್ಲವೇ? ಎನ್ನುವ ಚರ್ಚೆ ಶುರುವಾಗಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *