ತುಂಬಿ ಹರಿಯುತ್ತಿರುವ ತುಂಗಭದ್ರೆ; ನಿಷೇಧಾಜ್ಞೆಯನ್ನೂ ಲೆಕ್ಕಿಸದೇ ನದಿಗೆ ಇಳಿಯುತ್ತಿದ್ದಾರೆ ಪ್ರವಾಸಿಗರು
ಹೈಲೈಟ್ಸ್:
- ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ
- ಕಳೆದ ಮೂರು ದಿನಗಳಿಂದ ಪ್ರತಿ ದಿನಲೂ ಒಂದುವರೆ ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ನದಿ ಹರಿಸಲಾಗುತ್ತಿದೆ
- ಈ ಸೊಬಗನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ
ಗಂಗಾವತಿ: ಮಳೆನಾಡು ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಸಾಕಷ್ಟು ಪ್ರಮಾಣದ ಒಳಹರಿವು ಬರುತ್ತಿದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿರುವ ನೀರನ್ನು ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಸಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ ತುಂಗಭದ್ರಾ ಡ್ಯಾಂ ತುಂಬಿ ಹರಿಯುತ್ತಿದೆ.
ಅವಧಿಗೂ ಮುಂಚಿತವಾಗಿಯೇ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದಿಂದ ಕಳೆದ ಮೂರು ದಿನಗಳಿಂದ ಪ್ರತಿ ದಿನಲೂ ಒಂದುವರೆ ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ನದಿ ಹರಿಸಲಾಗುತ್ತಿದೆ. ಅಧಿಕ ಪ್ರಮಾಣ ನೀರು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯು ತುಂಬಿ ಧುಮ್ಮುಕ್ಕಿ ಹರಿಯುತ್ತಿದೆ.
ಅಪಾಯ ಮಟ್ಟದಲ್ಲಿ ನದಿಯು ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಜನರು ಭಯದಲ್ಲಿಯೇ ಯಾವಾಗ ನದಿಯ ಪ್ರವಾಹ ಕಡಿಮೆಯಾಗುತ್ತಿದೆ ಎನ್ನುವಂತೆ ನೆನೆಯುವಂತೆ ಆಗಿದೆ. ರಾತ್ರೋರಾತ್ರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ ಮಾಡುವುದು, ಹಗಲಿನಲ್ಲಿಸ್ವಲ್ಪ ಕಡಿಮೆ ಮಾಡುವ ಪ್ರಸಂಗ ನಡೆಯುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಉಂಟಾಗಿದೆ. ಕಳೆದ ಮೂರು ದಿನಗಳಿಂದ ಗಂಗಾವತಿ- ಕಂಪ್ಲಿಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗುವುದು, ಸ್ವಲ್ಪ ನೀರು ಕಡಿಮೆಯಾಗುತ್ತಿದ್ದಂತೆ ಸೇತುವೆ ಗೋಚರಿಸುವ ಪ್ರಸಂಗ ನಡೆಯುತ್ತಿದೆ.