ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ: ಕರ್ತವ್ಯಕ್ಕೆ ಮರಳುವಂತೆ ಪ್ರತಿಭಟನಾನಿರತ ವೈದ್ಯರಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಪ್ರತಿಭಟನೆ ಹಿಂತೆಗೆದುಕೊಂಡು ಕೆಲಸಕ್ಕೆ ಮತ್ತೆ ಹಾಜರಾಗುವಂತೆ ಗುರುವಾರ ಸುಪ್ರೀಂ ಕೋರ್ಟ್ ಸೂಚಿಸಿದೆ. ಕೆಲಸಕ್ಕೆ ಮರಳಿದರೆ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ಸಹ ಭರವಸೆ ನೀಡಿದೆ.

ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದ ಪ್ರತಿಭಟನೆಗೆ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ನಾಗ್ಪುರದ ಏಮ್ಸ್‌ ನಿವಾಸಿ ವೈದ್ಯರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದರು.

ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಗಳು, ಒಮ್ಮೆ ಅವರು ಕರ್ತವ್ಯಕ್ಕೆ ಮರಳಿದರೆ, ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳದಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ವೈದ್ಯರು ಕೆಲಸ ಮಾಡದೆ ಪ್ರತಿಭಟನೆ ಮುಂದುವರಿಸಿದರೆ ಸಾರ್ವಜನಿಕರಿಗೆ ಆರೋಗ್ಯ ಮೂಲಸೌಕರ್ಯ ಕೊಡುವುದು ಹೇಗೆ ಎಂದು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಶ್ನಿಸಿದೆ.

ನೀವು ಮೊದಲು ಕೆಲಸಕ್ಕೆ ಬನ್ನಿ, ನಂತರ ಕೆಲಸದ ಸ್ಥಳದಲ್ಲಿ ಏನಾದರೂ ತೊಂದರೆಯಾದರೆ ನಮಗೆ ತಿಳಿಸಿ ಎಂದು ನ್ಯಾಯಪೀಠ ಹೇಳಿದೆ.

ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಇಂದು ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.

ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಶಿಷ್ಠಾಚಾರಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (NTF)ಯನ್ನು ರಚಿಸಿದೆ.

ಹತ್ಯಾಚಾರ ಘಟನೆ ಹಾಗೂ ನಂತರ ಆಸ್ಪತ್ರೆಯೊಳಗೆ ದುಷ್ಕರ್ಮಿಗಳು ನುಗ್ಗಿ ನಡೆಸಿದ ವಿಧ್ವಂಸಕ ಕೃತ್ಯವನ್ನು “ಭಯಾನಕ” ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಸರ್ಕಾರಿ ಸೌಲಭ್ಯವನ್ನು ಧ್ವಂಸ ಮಾಡಲು ಕಿಡಿಗೇಡಿಗಳಿಗೆ ಹೇಗೆ ಅವಕಾಶ ನೀಡಿದಿರಿ ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ.

ಆಗಸ್ಟ್ 13 ರಂದು ಕೋಲ್ಕತ್ತಾ ಹೈಕೋರ್ಟ್ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು, ಸಿಬಿಐ ಆಗಸ್ಟ್ 14 ರಂದು ತನಿಖೆಯನ್ನು ಪ್ರಾರಂಭಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *