ಮನ ಕಲುಕಿದ ಡೆಲಿವರಿ ಬಾಯ್ ಪರಿಸ್ಥಿತಿ: 2 ವರ್ಷದ ಮಗಳ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ!

ದೆಹಲಿ(ಸೆ.02) ಪುಟ್ಟ ಕಂದನ ಆರೈಕೆ, ಪಾಲನೆ, ಪೋಷಣೆಯ ಎಲ್ಲಾ ಜವಾಬ್ದಾರಿ ಈ ಅಪ್ಪನದು. ಮಗಳಿಗೆ 2 ವರ್ಷ. ತಾಯಿ ತೋಳಿನಲ್ಲಿ, ಪಾಲನೆಯಲ್ಲಿ ಸ್ವಚ್ಚಂದವಾಗಿ ಆಟವಾಡಬೇಕಿದ್ದ ಈ ಮಗು ಅಪ್ಪನ ಜೊತೆ ಡೆಲಿವರಿ ಪಡೆಯಲು, ತಲುಪಿಸಲು ತೆರಳುತ್ತಿದೆ. ಕಾರಣ ಮನೆಯಲ್ಲಿ ಯಾರೂ ಇಲ್ಲ. ಮಗುವಿಗೆ ಅಪ್ಪನೇ ಎಲ್ಲ. ದೆಹಲಿಯ ಜೊಮೆಟೋ ಡೆಲಿವರಿ ಬಾಯ್ ಸೋನು ಬದುಕಿನ ಪಯಣ ಎಂತವರ ಮನ ಕಲುಕಿಸುತ್ತದೆ. ಆದರೆ ತಂದೆ ಸೋನುವಿಗೆ ಈ ಪುಟ್ಟ ಕಂದನ ನಗು ಎಲ್ಲವನ್ನೂ ಮರೆಸುತ್ತಿದೆ, ಬದುಕಿನ ಬಂಡಿ ಸಾಗಿಸುತ್ತಿದೆ.

ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್‌ಗೆ ಆರ್ಡರ್ ಪಡೆದುಕೊಳ್ಳಲು ಬಂದ ಜೊಮೆಟೋ ಡೆಲಿವರಿ ಎಜೆಂಟ್ ಸೋನು,ಶಾಪ್ ಮ್ಯಾನೇಜರ್ ದೇವೇಂದ್ರ ಮೆಹ್ರ ಗಮನಸೆಳೆದಿದ್ದ. ಕಾರಣ ಸೋನು ಜೊತೆಗೆ 2 ವರ್ಷದ ಪುಟ್ಟ ಕಂದನೂ ಆಗಮಿಸಿತ್ತು. ಕುತೂಹಲಕ್ಕಾಗಿ ಸೋನು ಬಳಿ ಈ ಕುರಿತು ವಿಚಾರಿಸಿದಾಗ ಸಂಕಷ್ಟದ ಬದುಕಿನ ಪಯಣ ತೆರೆದುಕೊಂಡಿತ್ತು. ತಕ್ಷಣವೇ ಮ್ಯಾನೇಜರ್ ಸ್ಟಾರ್ ಬಕ್ಸ್‌ನ ಐಸ್‌ಕ್ರೀಮ್ ತಿನಿಸನ್ನು ಮಗುವಿಗೆ ಉಚಿತವಾಗಿ ನೀಡಿದ್ದಾರೆ.

ಸೋನು ಕುರಿತು ಸೋಶಿಯಲ್ ಮೀಡಿಯಾದಲ್ಲಿ ದೇವೇಂದ್ರ ಮೆಹ್ರಾ ಬರೆದುಕೊಂಡಿದ್ದಾರೆ. ಆರ್ಡರ್ ಪಡೆದು ಗ್ರಾಹಕರಿಗೆ ತಲುಪಿಸಲು ಡೆಲಿವರಿ ಎಜೆಂಟ್ ಸೋನು ನಮ್ಮ ಕೇಂದ್ರಕ್ಕೆ ಭೇಟಿ ನೀಡಿದ್ದ. ಆತನ ಬದುಕು ನಮ್ಮ ಹೃದಯಕ್ಕೆ ನಾಟಿತ್ತು. ಸೋನು ಜೊತೆಗೆ 2 ವರ್ಷದ ಮಗಳು ಆಗಮಿಸಿದ್ದಳು. ಈ ಮಗಳಿಗೆ ಈತನ ಎಲ್ಲಾ. ಸಿಂಗಲ್ ಪೇರೆಂಟ್ ಆಗಿರುವ ಸೋನು, ಬದುಕಿನಲ್ಲಿ ಹಲವು ಸವಾಲು ಎದುರಿಸುತ್ತಿದ್ದಾನೆ. ಜೀವನ ಸಾಗಿಸಲು ಡೆಲಿವರಿ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಸಂಪಾದನೆಯಲ್ಲಿ ತನ್ನ ಮಗಳನ್ನು ಸಾಕಿ ಸಲಹುತ್ತಿದ್ದಾನೆ. 2 ವರ್ಷದ ಮಗಳನ್ನು ಕೂರಿಸಿಕೊಂಡು ಎಲ್ಲಾ ಕಡೆ ಡೆಲಿವರಿಗೆ ತೆರಳುತ್ತಾನೆ. ಕಷ್ಟ, ಸವಾಲುಗಳ ನಡುವೆ ಮಗಳ ಮೇಲಿನ ಪ್ರೀತಿ ಸೋನುವನ್ನು ಮತ್ತಷ್ಟು ಉತ್ಸಾಹ ಹಾಗೂ ಚೈತನ್ಯ ನೀಡುತ್ತಿದೆ. ಕಷ್ಟದಲ್ಲೂ ಮಗಳ ಮುಖದಲ್ಲಿ ನಗು ಕಡಿಮೆ ಮಾಡಿಲ್ಲ, ಮಗಳ ಹೀರೋ ಆಗಿ ಪ್ರತಿ ದಿನ ಕೆಲಸ ಮಾಡುತ್ತಾನೆ.  ಈ ಪುಟ್ಟ ಕಂದನಿಗೆ ನಾವು ಸಣ್ಣ ತಿನಿಸು ನೀಡಿದ್ದೇವೆ. ಆಕೆಯ ಮುಖದಲ್ಲಿನ ನಗು ನಮಗೂ ಚೈತನ್ಯ ನೀಡಿದೆ. ಈ ಸಂದರ್ಭದಲ್ಲಿ ಸೋನು ಹಾಗೂ ಆತನ ಮಗಳಿಗೆ ಶುಭ ಹಾರೈಸುತ್ತೇವೆ ಎಂದು ದೇವೇಂದ್ರ ಮೆಹ್ರಾ ಹೇಳಿಕೊಂಡಿದ್ದಾರೆ.

ಸೋನು ಜೀವನ ಕತೆ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರ ಮನ ಕರಗಿದೆ. ಸೋನು ಕರ್ತವ್ಯ ನಿಷ್ಠೆ, ಬದ್ಧತೆ ಜೊತೆಗೆ ಮಗಳನ್ನು ಸಾಕುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸ್ಟಾರ್‌ಬಕ್ಸ್ ಆತನ ಕತೆ ಕೇಳಿ ಮಗುವಿಗೆ ಉಡುಗೊರೆ ನೀಡಿದ್ದು ಹರ್ಷ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *