ನಟ ಗೋವಿಂದಾಗೆ ನಿಜವಾಗ್ಲೂ ಗುಂಡು ತಗುಲಿದ್ದೆಲ್ಲಿ? ಪೊಲೀಸರಿಗೆ ಕಾಡ್ತಿದೆ ಒಂದಿಷ್ಟು ಅನುಮಾನ?

ಮುಂಬೈ: ಗುಂಡು ತಗುಲಿದ ಪರಿಣಾಮ ಬಾಲಿವುಡ್ ನಟ ಗೋವಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಲೈಸೆನ್ಸ್ ಗನ್ ಕ್ಲೀನ್ ಮಾಡುತ್ತಿರುವ ಸಂದರ್ಭದಲ್ಲಿ ಮಿಸ್ ಫೈರ್ ಅಗಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಟನ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.  ವೈದ್ಯರು ಕಾಲಿಗೆ ಹೊಕ್ಕಿದ್ದ ಗುಂಡು ಹೊರತೆಗೆದಿದ್ದು, ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ಗುಂಡು ಹಾರಿದ ಘಟನೆಗೆ ಸಂಬಂಧಿಸಿದಂತೆ ಮುಂಬೈನ ಜುಹು ಪೊಲೀಸರು ಆಸ್ಪತ್ರೆಗೆ ತೆರಳಿ ನಟನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದ್ರೆ ಪೊಲೀಸರಿಗೆ ನಟ ಗೋವಿಂದ ನೀಡಿದ ಉತ್ತರಗಳು ಸಮಾಧಾನ ತಂದಿಲ್ಲವಂತೆ. ಹಾಗಾಗಿ ಮತ್ತೊಮ್ಮೆ ನಟ ಗೋವಿಂದ ಹಾಗೂ ಗುಂಡು ಹಾರಿದ ವೇಳೆ ಮನೆಯಲ್ಲಿದ್ದ ಎಲ್ಲಾ ಸದಸ್ಯರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ರಿವಾಲ್ವರ್  ಕ್ಲೀನ್ ಮಾಡುವಾಗ ಅನ್ಲಾಕ್ ಆಗಿತ್ತು. ಅದು ಮಿಸ್ ಫೈರ್ ಆಯಿತು ಎಂದು ನಟ ಪೊಲೀಸರಿಗೆ ತಿಳಿಸಿದ್ದಾರೆ. ರಿವಾಲ್ವರ್ 20 ವರ್ಷ ಹಳೆಯದು ಎಂದು ಗೋವಿಂದ ಹಂಚಿಕೊಂಡಿದ್ದಾರೆ. ನಟ ಗೋವಿಂದ ತಮ್ಮ ಹೇಳಿಕೆಯಲ್ಲಿ ಯಾವುದೇ ವಿಷಯವನ್ನು ಮುಚ್ಚಿಟ್ಟಿಲ್ಲ ಎಂದು ಪ್ರಾಥಮಿಕವಾಗಿ ನಂಬಲಾಗಿದೆ. ಆದ್ರೆ ಪೊಲೀಸರಿಗೆ ನಟ ಗೋವಿಂದ ಹೇಳಿಕೆ ಸಂಪೂರ್ಣ ತೃಪ್ತಿ ತರದ ಕಾರಣ ಮತ್ತೊಮ್ಮೆ  ಪ್ರಶ್ನಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗೋವಿಂದ ಪುತ್ರಿಯನ್ನು ಕೂಡ ಪೊಲೀಸರು ವಿಚಾರಣೆ ಮಾಡಿ, ಹೇಳಿಕೆ ದಾಖಲಿಸಿದ್ದಾರೆ.

ನಟನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಅಗರ್ವಾಲ್ ಮಾಧ್ಯಮವೊಂದಕ್ಕೆ ಗೋವಿಂದ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ಗುಂಡು ಹೊರಗೆ ತೆಗೆಯಲಾಗಿದ್ದು, 8-10 ಹೊಲಿಗೆ ಹಾಕಲಾಗಿದೆ. ನಿಖರವಾಗಿ ಗುಂಡು ಎಲ್ಲಿ ತಗುಲಿದೆ ಎಂಬ ಪ್ರಶ್ನೆಗೆ, ಮೊಣಕಾಲಿನ ಕೆಳಗೆ 2 ಇಂಚು ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.

ಸದ್ಯ ಗೋವಿಂದ ಅವರ ಆರೋಗ್ಯ ಸ್ಥಿರವಾಗಿದ್ದು, ಎರಡ್ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ. ಇಂದು ಸೋದರಳಿಯ ನಟ ಕೃಷ್ಣಾ ಅಭಿಷೇಕ್ ಪತ್ನಿ ಕಶ್ಮೀರಾ ಶಾ ಜೊತೆ ಆಸ್ಪತ್ರೆಗೆ ಬಂದು ಗೋವಿಂದ ಅವರ ಆರೋಗ್ಯ ವಿಚಾರಿಸಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ. ಗೋವಿಂದ ಗುಣಮುಖವಾಗುತ್ತಿದ್ದಾನೆ.  ಸ್ವಚ್ಛಗೊಳಿಸುತ್ತಿರುವಾಗ ಗನ್ ಕೆಳಗೆ ಬಿದ್ದ ಫೈರ್ ಆಗಿ, ಕಾಲಿಗೆ ಗುಂಡು ತಗುಲಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಗೋವಿಂದ ಸೋದರ ಕೀರ್ತಿ ಕುಮಾರ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದ ಗೋವಿಂದ, ತಮ್ಮ ರಿವಾಲ್ವರ್‌ ಅನ್ನು ಕಪಾಟಿನಲ್ಲಿ ಇಡುವಾಗ ಅದರ ಟ್ರಿಗರ್‌ ಒತ್ತಿದಂತಾಗಿ ಗುಂಡು ಹಾರಿತ್ತು. ಅದು ಅವರ ಕಾಲಿಗೆ ತಗುಲಿತು ಎಂದು ಅವರ ಮ್ಯಾನೇಜರ್‌ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿಲ್ಲವಾದರೂ ತನಿಖೆ ಆರಂಭಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಈ ಸಂಬಂಧ ಅಭಿಮಾನಿಗಳಿಗೆ ಆಡಿಯೋ ಸಂದೇಶ ಕಳಿಸಿರುವ ಗೋವಿಂದ, ‘ಅಭಿಮಾನಿಗಳು, ಪೋಷಕರು ಮತ್ತು ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನನಗೆ ತಗುಲಿದ್ದ ಗುಂಡು ತೆಗೆಯಲಾಗಿದೆ’ ಎಂದು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *