ಭಾರತ ಸರ್ಕಾರದ ಏಜೆಂಟರ ಜೊತೆ ಬಿಷ್ಣೋಯಿ ಗ್ಯಾಂಗ್ ಲಿಂಕ್: ಕೆನಡಾ ಪೊಲೀಸರ ನೇರ ಆರೋಪ!

  • ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಇಲಾಖೆ ಕಮಿಷನರ್ ಮೈಕ್ ದುಹೆನೆ ಆರೋಪ
  • ಕೆನಡಾ ಪ್ರಜೆಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್‌ ಹತ್ಯೆ
  • ಕಳೆದ ವರ್ಷವೇ ಕೆನಡಾ ಸರ್ಕಾರ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪ ಮಾಡಿತ್ತು

ಟೊರಾಂಟೋ (ಕೆನಡಾ): ಖಲಿಸ್ತಾನ್ ಪರ ಹೋರಾಟಗಾರರನ್ನು ಹತ್ಯೆ ಮಾಡಲು ಭಾರತ ಸರ್ಕಾರದ ಏಜೆಂಟರು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಕ್ರಿಮಿನಲ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಆರೋಪ ಮಾಡಿದ್ದಾರೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಇಲಾಖೆಯ ಕಮಿಷನರ್ ಮೈಕ್ ದುಹೆನೆ ಈ ಆರೋಪ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕೆನಡಾ ಪ್ರಜೆಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್‌ ಹತ್ಯೆ ಬಳಿಕ ಕೆನಡಾ ಸರ್ಕಾರವು ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪ ಮಾಡಿತ್ತು. ಈ ಆರೋಪ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೇ ಕಳೆದ ವರ್ಷ ನಡೆದ ನಿಜ್ಜರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕೆನಡಾ ಪೊಲೀಸರು ಬಿಷ್ಣೋಯಿ ಗ್ಯಾಂಗ್ ಮೇಲೆ ಬೊಟ್ಟು ಮಾಡಿದ್ದಾರೆ.

ಭಾರತ ಸರ್ಕಾರದ ಏಜೆಂಟರು ದಕ್ಷಿಣ ಏಷ್ಯಾ ಸಮುದಾಯಗಳನ್ನು ಗುರಿಯಾಗಿಸಿಕೊಳ್ಳುತ್ತಿದೆ. ಅದರಲ್ಲೂ ಕೆನಡಾ ದೇಶದಲ್ಲಿ ಇರುವ ಖಲಿಸ್ತಾನ್ ಪರ ಹೋರಾಟಗಾರರನ್ನೇ ಗುರಿಯಾಗಿಸಿ ದಾಳಿ ನಡೆಸಲು ಬಿಷ್ಣೋಯಿ ಗ್ಯಾಂಗ್‌ನ ಕ್ರಿಮಿನಲ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಈ ಕುರಿತಾಗಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಇಲಾಖೆ ತನಿಖೆ ವೇಳೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಈ ಗ್ಯಾಂಗ್‌ನ ಕ್ರಿಮಿನಲ್‌ಗಳು ಸಂಘಟಿತ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಮೈಕ್ ದುಹೆನೆ ಆರೋಪ ಮಾಡಿದ್ದಾರೆ.

ಬಿಷ್ಣೋಯಿ ಗ್ಯಾಂಗ್‌ನ ಕೈವಾಡ ಇರುವ ಕುರಿತಾಗಿ ಸಾರ್ವಜನಿಕವಾಗಿ ಮಾಹಿತಿ ವ್ಯಕ್ತವಾಗುತ್ತಿದೆ. ಈ ಗುಂಪು ಭಾರತ ಸರ್ಕಾರ ಏಜೆಂಟರ ಜೊತೆಗೂ ಸಂಪರ್ಕದಲ್ಲಿದೆ ಎಂದು ಕೆನಡಾದ ಒಟ್ಟಾವಾದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಇಲಾಖೆ ಕಮಿಷನರ್ ಮೈಕ್ ದುಹೆನೆ ವಿವರಿಸಿದ್ದಾರೆ.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ‘ನೀವು ಭಾರತ ಸರ್ಕಾರದ ಏಜೆಂಟರ ವಿರುದ್ಧ ಹತ್ಯೆ ಹಾಗೂ ಹತ್ಯೆ ಸಂಚು ಆರೋಪ ಮಾಡುತ್ತಿದ್ದೀರಾ?’ ಎಂದು ಕೇಳಿದ ಪ್ರಶ್ನೆಗೆ ಪೊಲೀಸ್ ಇಲಾಖೆ ಮುಖ್ಯಸ್ಥರು ‘ಹೌದು’ ಎಂದು ಉತ್ತರಿಸಿದರು

ಅಷ್ಟೇ ಅಲ್ಲ, ಭಾರತ ಸರ್ಕಾರದ ವಿದೇಶಾಂಗ ಇಲಾಖೆಯ ಸಿಬ್ಬಂದಿ ಕೂಡಾ ಈ ಸಂಘಟಿತ ಅಪರಾಧ ಕೃತ್ಯ ಎಸಗವ ಏಜೆಂಟರ ಜೊತೆ ನಂಟು ಹೊಂದಿದ್ದಾರೆ ಎಂದೂ ಆಪಾದಿಸಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನೂ ಭಾರತ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ನಿರಾಕರಿಸಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಈ ಕುರಿತಾಗಿ ಕೆನಡಾ ಸಂಸತ್‌ನಲ್ಲಿ ಆರೋಪ ಮಾಡಿದ ಸಂದರ್ಭದಲ್ಲೇ ಭಾರತ ತನ್ನ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿತು. ಕೆನಡಾದಲ್ಲಿ ಅಪರಾಧ ಕೃತ್ಯ ಎಸಗಲು ಭಾರತದ ಕ್ರಿಮಿನಲ್ ಗುಂಪಿಗೆ ಸರ್ಕಾರವೇ ನೆರವಿಗೆ ನಿಂತಿದೆ ಎಂಬ ಗಂಭೀರ ಆಪಾದನೆಯನ್ನು ಭಾರತ ಸರ್ಕಾರ ನಿರಾಕರಿಸಿದ್ದಷ್ಟೇ ಅಲ್ಲ, ತನ್ನ ವಿದೇಶಾಂಗ ಇಲಾಖೆ ಪ್ರತಿನಿಧಿಗಳ ಮೂಲಕ ಪ್ರತಿಭಟನೆಯನ್ನೂ ವ್ಯಕ್ತಪಡಿಸಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *