ಹುಬ್ಬಳ್ಳಿ ಗಲಭೆ ಪ್ರಕರಣ ರದ್ದು: ರಾಜ್ಯ ಸರ್ಕಾರದ ವಿರುದ್ಧ BJP ತೀವ್ರ ಕಿಡಿ, ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹ

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿ ಗಲಭೆಕೋರರ ವಿರುದ್ಧದ ಕ್ರಿಮನಲ್ ಪ್ರಕರಣ ವಾಪಸ್ ಪಡೆದಿರುವುದನ್ನು ಪ್ರತಿಪಕ್ಷ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಈ ಸಂಬಧ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇದ್ರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ಗಲಭೆಕೋರರ ವಿರುದ್ದ ಕ್ರಿಮಿನಲ್ ಪ್ರಕರಣ ಹಿಂಪಡೆಯುತ್ತಿರುವುದು ಖಂಡನೀಯ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗವು ರಾಜಭವನಕ್ಕೆ ತೆರಳಿತು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ದೂರು ನೀಡಿದರು.

ರಾಜ್ಯ ಸರ್ಕಾರ ಕ್ರಿಮಿನಲ್ ಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿರುವ ಕ್ರಮ ಸರಿಯಲ್ಲ. ಈ ಸಂಬಂಧ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದ್ದರೂ ಸರ್ಕಾರ ಈ ಪ್ರಕರಣವನ್ನು ವಾಪಸ್ ಪಡೆದಿದೆ. ರೈತ ಹೋರಾಟಗಾರರ, ಕನ್ನಡಪರ ಹೋರಾಟಗಾರರ ಪ್ರಕರಣ ವಾಪಸ್ ಪಡೆದಿದ್ದೇವೆ, ಅದೇ ರೀತಿ ಹುಬ್ಬಳ್ಳಿ ಗಲಭೆಕೋರರ ಮೇಲಿನ ಪ್ರಕರಣ ವಾಪಸ್ ತೆಗೆದುಕೊಂಡಿದ್ದೇವೆ ಎಂದು ಸಮರ್ಥನೆ ನೀಡುತ್ತಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಹಾಕಲು ಯತ್ನಿಸಿದ್ದರು, ಕಲ್ಲು ತೂರಾಟ ನಡೆಸಿದ್ದರು, ರಿಕ್ಷಾಗಳನ್ನು ಸುಟ್ಟಿದ್ದರು. ಇಂತಹ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಕೂಡಾ ಜಾಮೀನು ನಿರಾಕರಿಸಿತ್ತು, ಪೊಲೀಸರು ಕೂಡಾ ಇದು ಗಂಭೀರ ಪ್ರಕರಣ ಎಂದು ಪರಿಗಣಿಸಿದ್ದರು. ಇಷ್ಟರ ಮೇಲೂ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಹಿಂತೆಗೆದುಕೊಂಡಿದೆ. ದುಷ್ಕರ್ಮಿಗಳ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಮೂಲಕ, ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕ ಆಸ್ತಿಯ ಮೇಲಿನ ದಾಳಿಯನ್ನು ಒಳಗೊಂಡಿರುವ ಹಿಂಸಾಚಾರದ ಗಂಭೀರ ಸ್ವರೂಪವನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಕಿಡಿಕಾರಿದರು.

ಸರ್ಕಾರದ ಈ ಈ ನಿರ್ಧಾರಕ ಕೆಲವು ಸಮುದಾಯಗಳ ಓಲೈಸುತ್ತಿರುವುದಕ್ಕೆ ಮತ್ತೊಂದು ನಿದರ್ಶನವಾಗಿ ನೋಡಬಹುದು. ಪ್ರಕರಣಗಳ ಕೈಬಿಡುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಖುದ್ದು ಪತ್ರ ಬರೆದು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಹಿಂಸಾಚಾರದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಸರ್ಕಾರ ಪ್ರಕರಣ ಕೈಬಿಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರದಿಂದ ಪೊಲೀಸ್ ಇಲಾಖೆಗೆ ಹಿನ್ನಡೆಯಾಗಲಿದೆ. ಈ ನಿರ್ಧಾರದ ಬಗ್ಗೆ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಹುಬ್ಬಳ್ಳಿ ಘಟನೆಗಳು ಭಯೋತ್ಪಾದನಾ ಕೃತ್ಯಗಳಿಗಿಂತ ಕಡಿಮೆ ಇರಲಿಲ್ಲ. ಪೊಲೀಸರು ಮತ್ತು ನ್ಯಾಯಾಂಗವು ಆ ಪ್ರಕರಣಗಳನ್ನು ಕೈಬಿಡುವುದನ್ನು ವಿರೋಧಿಸುತ್ತಿದ್ದರೆ, ಸರ್ಕಾರವು ಅವರ ವಿರುದ್ಧ ಹೋಗಿದೆ ಎಂದು ಕಿಡಿಕಾರಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *