ನ.13ರಂದು ಉಪ ಚುನಾವಣೆ: ಮೂವರು ಘಟಾನುಘಟಿಗಳಿಗೆ ಸತ್ವಪರೀಕ್ಷೆ; ಚನ್ನಪಟ್ಟಣದಲ್ಲಿ ಮುಗಿಯದ ‘ಮೈತ್ರಿ’ ಗೊಂದಲ!

ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವ್ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಸುವುದಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಪ್ರಕಟಿಸಿದೆ. ಚುನಾವಣಾ ಫಲಿತಾಂಶವು ನವೆಂಬರ್ 23 ರಂದು ಪ್ರಕಟವಾಗಲಿದೆ.

ಉಪಚುನಾವಣೆಗಳ ಫಲಿತಾಂಶವು ವಿಧಾನಸಭೆಯಲ್ಲಿನ ಸಮೀಕರಣಗಳನ್ನು ಬದಲಾಯಿಸುವುದಿಲ್ಲ ಅಥವಾ ಸರ್ಕಾರದ ಮೇಲೆ ನೇರ ಪ್ರಭಾವ ಬೀರುವುದಿಲ್ಲ, ಆದರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೂರು ಪಕ್ಷಗಳ ಪ್ರಮುಖ ನಾಯಕರಿಗೆ ಈ ಸ್ಥಾನಗಳನ್ನು ಗೆಲ್ಲುವುದು ನಿರ್ಣಾಯಕವಾಗಿದೆ. ಈ ವರ್ಷದ ಆರಂಭದಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಮಾಜಿ ಸಿಎಂಗಳಾದ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ (ಚನ್ನಪಟ್ಟಣ), ಬಿಜೆಪಿಯ ಬಸವರಾಜ ಬೊಮ್ಮಾಯಿ (ಶಿಗ್ಗಾಂವ್), ಮತ್ತು ಕಾಂಗ್ರೆಸ್‌ನ ಇ ತುಕಾರಾಂ (ಸಂಡೂರು-ಎಸ್‌ಟಿ) ರಾಜೀನಾಮೆ ನೀಡಿದ ನಂತರ ಈ ಸ್ಥಾನಗಳು ತೆರವಾಗಿದ್ದವು.

ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಗಳು ತಮ್ಮ ಅಭ್ಯರ್ಥಿಗಳನ್ನು ಇನ್ನೂ ಘೋಷಿಸದಿದ್ದರೂ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಕಸರತ್ತು ಪ್ರಾರಂಭಿಸಿವೆ. ಮುಡಾ ಮತ್ತು ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿನ ಹಗರಣಗಳಿಗೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆಗೆ ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್ ಒತ್ತಾಯಿಸುತ್ತಿವೆ, ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಪಕ್ಷದೊಳಗೆ ತಮ್ಮ ನಾಯಕತ್ವವನ್ನು ಸಾಬೀತು ಪಡಿಸಲು ಮತ್ತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ನಾಯಕರಿಗೆ ಸಂದೇಶ ರವಾನಿಸಲು ಉತ್ಸುಕರಾಗಿದ್ದಾರೆ. ಭಾನುವಾರ ಸಂಡೂರಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಚುನಾವಣಾ ಕಹಳೆ ಊದಿದ್ದಾರೆ, ಬಿಜೆಪಿ ತನ್ನ ವಿರುದ್ಧ ಷಡ್ಯಂತ್ರ ಮಾಡಿ ಅಪಪ್ರಚಾರಗಳಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಅವರ ವಿರುದ್ಧದ ಮುಡಾ ಪ್ರಕರಣ ಮತ್ತು ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಕುರಿತು ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿದೆ. ಈ ಸಮಯದಲ್ಲಿ, ಉಪಚುನಾವಣೆಯಲ್ಲಿ ಅವರು ತಮ್ಮ ಚಾಣಕ್ಷತೆ ತೋರಿ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡರೆ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚುತ್ತದೆ. ಆದರೆ ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

2024ರಲ್ಲಿ ತಮ್ಮ ಕಿರಿಯ ಸಹೋದರ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸೋತ ನಂತರ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗಾಯಗೊಂಡ ವ್ಯಾಘ್ರನಂತಾಗಿದ್ದಾರ. ಹೀಗಾಗಿ ಚನ್ನಪಟ್ಟಣ ಉಪಚುನಾವಣೆ ಅವರಿಗೆ ನಿರ್ಣಾಯಕವಾಗಿದೆ. ಡಿಸಿಎಂ ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಪಕ್ಷವು ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ, ಆದರೆ ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ. ಸಾಮಾನ್ಯವಾಗಿ, ಅಧಿಕಾರದಲ್ಲಿರುವ ಪಕ್ಷವು ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ವಾಡಿಕೆ. ಆದಾಗ್ಯೂ, ಜೆಡಿಎಸ್ ಮತ್ತು ಬಿಜೆಪಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮತದಾರರನ್ನು ಸೆಳೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

ಚನ್ನಪಟ್ಟಣವನ್ನು ಉಳಿಸಿಕೊಳ್ಳುವುದು ಕುಮಾರಸ್ವಾಮಿಗೆ ಅನಿವಾರ್ಯವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲು ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಲಾಬಿ ನಡೆಸುತ್ತಿದ್ದು, ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರು ಕೂಡ ಕೇಳಿಬರುತ್ತಿದೆ. ಕುಮಾರಸ್ವಾಮಿ ಮತ್ತು ಬಿಜೆಪಿಗೆ, ಅಭ್ಯರ್ಥಿಯನ್ನು ಅಂತಿಮಗೊಳಿಸಲು ದೊಡ್ಡ ಸವಾಲಾಗಿದೆ, ಏಕೆಂದರೆ ಈ ವಿಷಯದ ಬಗ್ಗೆ ಎನ್‌ಡಿಎಯಲ್ಲಿ ಯಾವುದೇ ಬಿರುಕುಗಳನ್ನು ಉಂಟಾದರೂ ಅದರ ಲಾಭ ಪಡೆಯಲು ಕಾಂಗ್ರೆಸ್ ಉತ್ಸುಕವಾಗಿದೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಸಂಡೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮುಖಾಮುಖಿಯಾಗಲಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ಎಸ್‌ಟಿ ಅಭಿವೃದ್ಧಿ ನಿಗಮ ಹಗರಣ, ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಹಣ ಸಿಗದಿರುವುದು, 2022ರ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಪ್ರಚಾರವನ್ನು ತೀವ್ರಗೊಳಿಸಲಿವೆ.

ಅದರ ಕಡೆಯಿಂದ, ಆಡಳಿತಾರೂಢ ಕಾಂಗ್ರೆಸ್ ಕಳೆದ 16 ತಿಂಗಳುಗಳಲ್ಲಿ ಈ ಕ್ಷೇತ್ರಗಳಲ್ಲಿ ಕೈಗೊಂಡ ತನ್ನ ಖಾತರಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ಮತಯಾಚನೆ ಮಾಡಲಿದೆ. ಸರ್ಕಾರವು ತನ್ನ ಮುಂದಿನ ಸಂಪುಟ ಸಭೆಯಲ್ಲಿ ಜಾತಿ ಗಣತಿ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ, ಉಪಚುನಾವಣೆಯ ಸಮಯದಲ್ಲಿ ಅದು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಆದರೆ, ಸರ್ಕಾರ ಆ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *