ಸಿದ್ದರಾಮಯ್ಯ ಸಂಪುಟದಿಂದ ಗೇಟ್ ಪಾಸ್ ಪಡೆಯಬಹುದಾದ ಸಚಿವರು ಯಾರು?

  • ಸಿದ್ದರಾಮಯ್ಯನವರ ಸಂಪುಟ ಪುನರಾಚರನೆ ಬಗ್ಗೆ ಊಹಾಪೋಹ.
  • ಮಧು ಬಂಗಾರಪ್ಪ, ಡಿ ಸುಧಾಕರ್, ಎಂಸಿ ಸುಧಾಕರ್ ಸೇರಿ ಹಲವರಿಗೆ ಕೊಕ್ ಸಾಧ್ಯತೆ.
  • ಏಳು ಮಂದಿಗೆ ಕೊಕ್ ನೀಡಿ ಏಳು ಮಂದಿಗೆ ಸ್ಥಾನ ಕಲ್ಪಿಸಲು ಕಾಂಗ್ರೆಸ್ ಚಿಂತನೆ.

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿಯುತ್ತಲೇ ಸಂಪುಟಕ್ಕೆ ಸರ್ಜರಿ ಮಾಡುವ ವಿಚಾರ ಮುನ್ನಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈಗಾಗಲೇ ಸಂಪುಟ ಸರ್ಜರಿಯ ಬಗ್ಗೆಗಿನ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಆದರೀಗ, ಆ ಬಗ್ಗೆ ವದಂತಿಗಳು ಮಾತ್ರ ಇನ್ನೂ ಹರಿದಾಡುತ್ತಲೇ ಇವೆ.

ಆ ವದಂತಿಗಳನ್ನು ಆಧರಿಸಿ ಹೇಳುವುದಾದರೆ, ಈ ಬಾರಿ ಸಿದ್ದರಾಮಯ್ಯನವರ ಮಂತ್ರಿ ಮಂಡಲಕ್ಕೆ ಸರ್ಜರಿಯಾದರೆ, ಏನಿಲ್ಲವೆಂದರೂ ಆರರಿಂದ ಏಳು ಮಂದಿ ಸಚಿವರು ತಮ್ಮ ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ, ಅವರ ಸ್ಥಾನಕ್ಕೆ ಆರರಿಂದ ಏಳು ಮಂದಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಬಗ್ಗೆಯೂ ಗುಸುಗುಸು ಸಾಗುತ್ತಿದೆ. ಹಾಗಿದ್ದರೆ ಬನ್ನಿ, ಯಾರು ಮಂತ್ರಿ ಮಂಡಲದಿಂದ ಆಚೆ ನಡೆಯುತ್ತಾರೆ, ಯಾರು ಹೊಸದಾಗಿ ಸೇರುತ್ತಾರೆ ಎಂಬುದನ್ನು ನೋಡೋಣ.

ಮಧು ಬಂಗಾರಪ್ಪ

ಮಂತ್ರಿಮಂಡಲದಿಂದ ಹೊರಹೋಗುವ ಸಂಭಾವ್ಯರಲ್ಲಿ ಮೊದಲಿಗರಾಗಿರುವುದು ಮಧು ಬಂಗಾರಪ್ಪ. ಸಿದ್ದರಾಮಯ್ಯನವರ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಾಗ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಇವರೂ ಒಬ್ಬರು. ಸೊರಬ ಕ್ಷೇತ್ರದಿಂದ ತಮ್ಮ ಸಹೋದರ ಕುಮಾರ್ ಬಂಗಾರಪ್ಪನವರ ವಿರುದ್ಧ ಗೆದ್ದು ಬಂದಿರುವ ಇವರು ಮೊದಲ ಬಾರಿಗೆ ಶಾಸಕರಾದ ಕೂಡಲೇ ಮಂತ್ರಿ ಪದವಿಗೇರಿದವರು. ಅವರಿಗೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವ ಸ್ಥಾನ ನೀಡಲಾಗಿತ್ತು.

ಆದರೆ, ಅವರ ಕೆಲಸ ತೃಪ್ತಿಕರವಾಗಿಲ್ಲ ಎಂದು ಹೇಳಲಾಗುತ್ತಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರವೇ ಪ್ರಸಿದ್ಧಿ ಪಡೆಯುತ್ತಿರುವ ಇವರು, ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುವುದಾಗಲೀ, ಇಲಾಖೆಗೆ ಹೊಸತನ ತುಂಬುವುದಾಗಲೀ ಮಾಡಿಲ್ಲ. ಅದಲ್ಲದೆ ಪ್ರಾಥಮಿಕ ಶಿಕ್ಷಣ ಸಚಿವರಾಗಿ ಇವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ ಎಂಬ ಆಪಾದನೆಗಳೂ ಇವೆ, ಅವರೂ ಬಹಿರಂಗವಾಗಿ ಇದನ್ನು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಅವರಿಗೆ ಸಂಪುಟದಿಂದ ಕೊಕ್ ನೀಡಬಹುದು ಎಂದು ಹೇಳಲಾಗಿದೆ.

ಡಿ. ಸುಧಾಕರ್

ಚಿತ್ರದುರ್ಗ ಪ್ರಾಂತ್ಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹಿರಿಯೂರಿನ ಶಾಸಕರಾದ ಡಿ. ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಅವರು ತಮ್ಮ ಇಲಾಖೆಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಾಗಾಗಿ, ಅವರಿಗೆ ಕೊಕ್ ಸಿಗಬಹುದೆಂದು ಹೇಳಲಾಗುತ್ತಿದೆ.

ಕೆಎಚ್ ಮುನಿಯಪ್ಪ

ಆಹಾರ ಮತ್ತು ನಾಗರಿಕ ಸಚಿವರಾಗಿರುವ ಕೆಎಚ್ ಮುನಿಯಪ್ಪನವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ. ಇತ್ತೀಚೆಗೆ ನಕಲಿ ಬಿಪಿಎಲ್ ಕಾರ್ಡ್ ಗಳ ರದ್ದತಿ ವೇಳೆ ಅವಸರದ ಹೆಜ್ಜೆಯಿಟ್ಟು ಅರ್ಹರ ಬಿಪಿಎಲ್ ಕಾರ್ಡ್ ಗಳೂ ರದ್ದಾಗುವಂತೆ ಮಾಡಿ ಅದರಿಂದ ಸರ್ಕಾರಕ್ಕೆ ಮುಜುಗರ ತಂದಿರುವುದನ್ನು ಕಾಂಗ್ರೆಸ್ ನಾಯಕರು ಗಮನಿಸಿದ್ದಾರೆನ್ನಲಾಗಿದೆ. ಆ ತಪ್ಪನ್ನು ಈಗ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆಯಾದರೂ ಹೊಸಬರಿಗೆ (ಮುನಿಯಪ್ಪ ಪುತ್ರಿಗೆ) ಸಂಪುಟದಲ್ಲಿ ಸ್ಥಾನ ನೀಡುವ ಸಲುವಾಗಿ ಮುನಿಯಪ್ಪನವರಿಗೆ ಸಚಿವ ಸ್ಥಾನ ತ್ಯಜಿಸುವಂತೆ ಸೂಚಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಎನ್ ಎಸ್ ಬೋಸರಾಜು

ವಿಧಾನ ಪರಿಷತ್ ಸದಸ್ಯರಾಗಿದ್ದ ಬೋಸರಾಜು ಅವರು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರೂ ಆಗಿರುವ ಕಾರಣಕ್ಕೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಸ್ಥಾನ ಪಡೆದವರು ಎಂಬ ಮಾತಿದೆ. ಸಿದ್ದರಾಮಯ್ಯನವರ 2.0 ಸರಕಾರದ ಮಂತ್ರಿಮಂಡಲಕ್ಕೆ ಇವರು ಅಚ್ಚರಿಯ ಸೇರ್ಪಡೆಯಾಗಿದ್ದರು. ಇವರಿಗೆ ಸಣ್ಣ ನೀರಾವರಿ ಖಾತೆಯನ್ನೂ ಕೊಡಲಾಗಿತ್ತು. ಆದರೆ, ಆ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪಗಳು ಇವರ ವಿರುದ್ಧ ಕೇಳಿಬಂದಿವೆ. ಇಲಾಖಾವಾರು ಕಳಪೆ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಸಂಪುಟದಿಂದ ಗೇಟ್ ಪಾಸ್ ಕೊಡಲಾಗುತ್ತದೆ ಎಂದು ಹೇಳಲಾಗಿದೆ.

ರಹೀಂ ಖಾನ್

ಸಿದ್ದರಾಮಯ್ಯ 2.0 ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿರುವ ರೆಹಮಾನ್ ಖಾನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಹಾಗೂ ವಿಧಾನಸಭೆಯ ಅಧಿವೇಶನವಿದ್ದಾಗ ಮಾತ್ರ ಕಾಣಸಿಗುತ್ತಾರೆ. ಇಲ್ಲವಾದರೆ ಅವರು ಕಾಂಗ್ರೆಸ್ ನಾಯಕರ ಕೈಗೇ ಸಿಗುವುದಿಲ್ಲ. ಇನ್ನು ಅಧಿಕಾರಿಗಳ ಅಥವಾ ಜನಸಾಮಾನ್ಯರ ಕೈಗೆ ಸಿಗುತ್ತಾರಾ ಎಂಬ ಟೀಕೆಗಳು ಕೇಳಿಬಂದಿವೆ. ಈ ಟೀಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಇವರನ್ನು ಮಂತ್ರಿಮಂಡಲದಿಂದ ಗೇಟ್ ಪಾಸ್ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಎಂ.ಸಿ. ಸುಧಾಕರ್

ಇವರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಆದರೆ, ಇವರ ಕಾರ್ಯವೈಖರಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ಇವರ ಮೇಲಿರುವ ಪ್ರಮುಖ ಟೀಕೆ. ಹಾಗಾಗಿ, ಇಲಾಖಾವಾರು ಕಳಪೆ ಸಾಧನೆ ಎಂಬ ಕಾರಣಕ್ಕಾಗಿ ಇವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *