ರೈತರಿಗೆ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಹಿನ್ನೆಲೆ: ಜಂಟಿ ಕೃಷಿ ನಿರ್ದೇಶಕರಿಂದ ಅಂಗಡಿಗಳ ಮೇಲೆ ದಿಢೀರ ದಾಳಿ

 

ಕಲಬುರಗಿ : ರೈತರಿಂದ ಎಂ.ಆರ್.ಪಿ. ದರಕ್ಕಿಂತ ಹೆಚ್ಚಿಗೆ ಹಣ ಪಡೆದು ಡಿ.ಎ.ಪಿ. ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದ ಕೃಷಿ ಅಧಿಕಾರಿಗಳ ತಂಡ ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಅನಿರೀಕ್ಷಿತ ದಾಳಿ ಮಾಡಿ ತಪಾಸಣೆ ಮಾಡಿತು.

ಗಂಜ್ ಏರಿಯಾದ ಚಂದ್ರಿಕಾ ಅಗ್ರೋ ಸಿಂಡಿಕೇಟ್, ಭುವನೇಶ್ವರಿ ಕೃಷಿ ಕೇಂದ್ರ, ಚನ್ನವೀರ ಅಗ್ರೋ ಕೆಮಿಕಲ್ಸ್, ಪದ್ಮಾವತಿ ಟ್ರೇಡರ್ಸ್, ಬಕ್ಕಮಪ್ರಭು ಅಗ್ರೋ ಕೇಂದ್ರ, ಬಸವ ಅಗ್ರೋ ಏಜೆನ್ಸಿ, ವೀರಭದ್ರೇಶ್ವರ ಕೃಷಿ ಭಂಡಾರ ಹಾಗೂ ಇತರೆ ರಸಗೊಬ್ಬರ ಮಾರಾಟಗಾರರ ಅಂಗಡಿಗಳ ಭೇಟಿ ನೀಡಿ ರಸಗೊಬ್ಬರ ದಾಸ್ತಾನಿನ ವಿವರ ಮತ್ತು ಪಾಯಿಂಟ್ ಆಫ್ ಸೇಲ್ ದಾಸ್ತಾನನ್ನು ಪರಿಶೀಲಿಸಲಾಯಿತು. ಇನ್ನು ಕಾಟನ್ ಮಾರ್ಕೆಟ್‌ನಲ್ಲಿರುವ ಗೋದಾಮುಗಳಿಗೆ ಭೇಟಿ ನೀಡಿದ ತಂಡ Fertilizer control order-1985 ಉಲ್ಲಂಘನೆ ಕುರಿತು ಸಹ ಪರಿಶೀಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು, ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದೆಂದು ಈಗಾಗಲೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಾದ ಮೇಲೂ ಅನಾವಶ್ಯಕವಾಗಿ ರೈತರಿಂದ ನಿಗಧಿತ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡಿದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದಲ್ಲದೆ ಮುಂದಿನ ದಿನಗಳಲ್ಲಿ ತಾಲ್ಲೂಕ ಮಟ್ಟದಲ್ಲಿ ಸಹ ಇದೇ ರೀತಿಯಾಗಿ ಅನಿರೀಕ್ಷಿತ ದಾಳಿ ಮಾಡಲಾಗುವುದೆಂದುತಿಳಿಸಿದರು.

ರಸಗೊಬ್ಬರ ಕೊರತೆ ಇಲ್ಲ:

ಜಿಲ್ಲೆಯಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಇರುವುದಿಲ್ಲ. ರೈತ ಭಾಂದವರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಮದ್ ಪಟೇಲ್ ಅವರು, ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಡಿ.ಎ.ಪಿ, ಯೂರಿಯಾ ಹಾಗೂ ಇತರೆ ರಸಗೊಬ್ಬರ ಒಳಗೊಂಡಂತೆ 30,000 ಮೆಟ್ರಿಕ್ ಟನ್‌ಕ್ಕಿಂತಲೂ ಹೆಚ್ಚು ದಾಸ್ತಾನಿದೆ. ಲಭ್ಯವಿರುವ ರಸಗೊಬ್ಬರ ಪಡೆದು ಬಿತ್ತನೆ ಮಾಡುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಾಳಿ ತಂಡದಲ್ಲಿ ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದರ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಮತ್ತು ಇತರೆ ಕೃಷಿ ಅಧಿಕಾರಿಗಳು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *