ವೀರಶೈವ ಜಂಗಮರು ಬೇಡ ಜಂಗಮರಲ್ಲ: ಕರ್ನಾಟಕ ಹೈಕೋರ್ಟ್

ದಲಿತರ ತಟ್ಟೆಗೆ ಕೈ ಹಾಕಿ ಅನ್ನ ಕಸಿದುಕೊಳ್ಳುವದು ಸರಿಯಲ್ಲ’

ಬೆಂಗಳೂರು

ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.

ವೀರಶೈವ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ ಎಂದು ನ್ಯಾ. ಸುನೀಲ್‌ ದತ್‌ ಯಾದವ್‌ ಹಾಗೂ ನ್ಯಾ. ರಾಮಚಂದ್ರ ಡಿ. ಹುದ್ದಾರ್‌ ನೇತೃತ್ವದ ವಿಭಾಗೀಯ ಪೀಠ 70 ಪುಟಗಳ ತೀರ್ಪಿನಲ್ಲಿ ಹೇಳಿದೆ.

ಬೀದರ್‌ನ ರಾಘವೇಂದ್ರ ಕಾಲೋನಿಯ ರವೀಂದ್ರ ಸ್ವಾಮಿ, ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ ಸಲ್ಲಿಸಿದ್ದ ರಿಟ್‌ ಮೇಲ್ಮನವಿಗಳಲ್ಲಿ (ರಿಟ್‌ ಅಪೀಲುಗಳ ಸಂಖ್ಯೆ 200053/ 2024, 200162/2024 ಮತ್ತು 200001/2024) ಈ ಕುರಿತಂತೆ ಆದೇಶ ಹೊರಡಿಸಿದೆ.

ಮೇಲ್ಮನವಿಯನ್ನು ಮಾನ್ಯ ಮಾಡಿ ನ್ಯಾಯಮೂರ್ತಿಗಳು ವೀರಶೈವ ಜಂಗಮರು ಸಮಾಜದ ಉನ್ನತ ವರ್ಗಕ್ಕೆ ಸೇರಿರುವ ಪೂಜ್ಯ ವರ್ಗ ಎಂದು ಸ್ಪಷ್ಟಪಡಿಸಿದೆ. ‘ವೀರಶೈವ ಸಮುದಾಯದ ಜಂಗಮರು ಪುರೋಹಿತ ವರ್ಗಕ್ಕೆ ಸೇರಿದವರು ಮತ್ತು ಇವರೆಲ್ಲಾ ಸಸ್ಯಾಹಾರಿಗಳು. ಆದರೆ, ಬೇಡ ಜಂಗಮರು ಸಮಾಜದ ಕೆಳ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪಶ್ಯರೆಂದು ಪರಿಗಣಿಸಲಾಗುತ್ತದೆ,’ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

‘ವೀರಶೈವ ಸಮುದಾಯದ ಜಂಗಮರು ಪುರೋಹಿತ ವರ್ಗಕ್ಕೆ ಸೇರಿದವರು ಮತ್ತು ಇವರೆಲ್ಲಾ ಸಸ್ಯಾಹಾರಿಗಳು. ಆದರೆ, ಬೇಡ ಜಂಗಮರು ಸಮಾಜದ ಕೆಳ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪಶ್ಯರೆಂದು ಪರಿಗಣಿಸಲಾಗುತ್ತದೆ,’ ಎಂದು ನ್ಯಾಯಪೀಠ ಹೇಳಿದೆ.

‘ಲಿಂಗಾಯತ ವರ್ಗಕ್ಕೆ ಸೇರಿರುವ ಅರ್ಜಿದಾರ ರವೀಂದ್ರ ಸ್ವಾಮಿ, ಬೇಡ ಜಂಗಮ ಪ್ರಯೋಜನ ಪಡೆಯಲು ಹಕ್ಕು ಮಂಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರ ಕುಟುಂಬದ ಒಬ್ಬರಿಗೆ ಬೇಡ ಜಂಗಮ ಪ್ರಮಾಣ ಪತ್ರ ದೊರೆತಿದೆ ಎಂದ ಮಾತ್ರಕ್ಕೆ ಇತರೆಯವರಿಗೂ ಆ ಪ್ರಮಾಣ ಪತ್ರ ನೀಡಬೇಕೆಂಬ ಅನುಮತಿಯನ್ನು ಒಪ್ಪಲಾಗದು. ಏಕೆಂದರೆ, ಅವರು ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ’ ಎಂದು ನ್ಯಾಯಪೀಠ ವಿವರಿಸಿದೆ.

ಇದರಿಂದ ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರೆಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಪೂರ್ಣ ವಿರಾಮ ಹಾಕಿದೆ.

ವೀರಶೈವರಲ್ಲಿನ ಜಂಗಮ ವರ್ಗದ ವೃತ್ತಾಂತ, ಬೇಡ ಮತ್ತು ಬುಡ್ಗ ಜಂಗಮರ ಇತಿಹಾಸವನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿರುವ ಹೈಕೋರ್ಟ್, ಇತಿಹಾಸ ತಜ್ಞ ಬಿ.ಎಲ್. ರೈಸ್ ಮತ್ತು ಮಾನವಶಾಸ್ತ್ರಜ್ಞರ ದಾಖಲೆಗಳನ್ನು ಉಲ್ಲೇಖಿಸಿದೆ.

ಬುಡ್ಗ ಅಥವಾ ಬೇಡ ಜಂಗಮರು ಅಲೆಮಾರಿಗಳಾಗಿದ್ದು ಅವರು ರಾಜ್ಯದ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ಬೀದರ್‌, ಕಲಬುರಗಿ, ರಾಯಚೂರು ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಮೂಲತಃ ಆಂಧ್ರದಿಂದ ಅವರು ವಲಸೆ ಬಂದು ಮಾಂಸ ಹಾಗೂ ಮದ್ಯ ಸೇವನೆ ಮಾಡುತ್ತಾ, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು, ಎಂದು ಇತ್ತೀಚೆಗೆ ಮಾಜಿ ಸಚಿವ ಹೆಚ್‌. ಆಂಜನೇಯ ತಿಳಿಸಿದ್ದರು.

“ಮೇಲ್ವರ್ಗದವರಾಗಿರುವ ವೀರಶೈವ ಜಂಗಮರು ನ್ಯಾಯಾಲಯದ ಈ ತೀರ್ಪನ್ನು ಅರ್ಥಮಾಡಿಕೊಳ್ಳಬೇಕು. ಕಟ್ಟಕಡೆಯ, ಅಲಕ್ಷಿತ ದಲಿತ ಜನಾಂಗದವರ ಮೀಸಲಾತಿ ತಟ್ಟೆಗೆ ಕೈ ಹಾಕಿ ಅವರ ಅನ್ನ ಕಸಿದುಕೊಳ್ಳುವದು ಸರಿಯಲ್ಲ. ಮೇಲ್ವರ್ಗದವರು ಇನ್ನಾದರೂ ಅರಿತು ಕಾನೂನುಬದ್ಧವಾಗಿ ನಡೆದುಕೊಳ್ಳಲಿ,” ಎಂದು ನಾಗರಾಜ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ಹೇಳಿದರು.

ಕಳೆದ ತಿಂಗಳು ವಿವಾದವನ್ನು ಚರ್ಚಿಸಲು ಅಲೆಮಾರಿ ಬುಡಕಟ್ಟು ಮಹಾಸಭಾ ‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯನ್ನು ಆಯೋಜಿಸಿತ್ತು.

ಪ್ರಕರಣದ ಹಿನ್ನಲೆ

ಬೀದರ್‌ನ ರವೀಂದ್ರ ಸ್ವಾಮಿ ಎಂಬುವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅವರ ಶಾಲಾ ದಾಖಲಾತಿಗಳಲ್ಲೂ ನಮೂದಾಗಿದೆ. ರವೀಂದ್ರ ಸ್ವಾಮಿ ಅವರ ಸಹೋದರ ಹಾಗೂ ಸಹೋದರಿಯ ಶಾಲಾ ದಾಖಲಾತಿಗಳಲ್ಲೂ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂದು ನಮೂದಾಗಿದೆ. ಆದರೆ, ಕುಟುಂಬದ ಒಬ್ಬರು ಮಾತ್ರ ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು.

2016ರಲ್ಲಿ ರವೀಂದ್ರ ಸ್ವಾಮಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ತಹಶೀಲ್ದಾರ್‌ ಅವರು ಪ್ರಮಾಣ ಪತ್ರ ನೀಡಲು‌ ನಿರಾಕರಿಸಿದ್ದರು.

ತಹಶೀಲ್ದಾರ್‌ ಕ್ರಮ ಪ್ರಶ್ನಿಸಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ‌ ನ್ಯಾಯಾಲಯಕ್ಕೆ ರವೀಂದ್ರ ಸ್ವಾಮಿ ಮೇಲ್ಮನವಿ ಸಲ್ಲಿಸಿದ್ದರು. ನಂತರ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಹಿನ್ನೆಡೆಯಾಗಿತ್ತು. ನಂತರ ಸುಪ್ರೀಂ ಏಕಸದಸ್ಯ ಪೀಠವು ಬೀದರ್‌ ಜಿಲ್ಲಾ ಪರಿಶೀಲನಾ ಸಮಿತಿಗೆ ಮರು ಪರಿಶೀಲಿಸುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್‌ ವೀರಶೈವ ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ತೀರ್ಪು ನೀಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *